ಯತಿ ಸ್ವಂತೀ -192



11-07-2018

ಎಲ್ಲರೂ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಏನೋ ಒಂದು ರೀತಿಯ ಥ್ರಿಲ್‍ನೊಂದಿಗೆ ಕುಳಿತಿದ್ದೆವು. ನಾನು ಮೊದಲೇ ನಿರ್ಧರಿಸಿದಂತೆ ಒಂದು ನೂರು ಪುಟಗಳ ನೋಟ್‍ಬುಕ್ ತಂದಿದ್ದೆ. ಅದರಲ್ಲಿ ಆ ಪ್ಲಾಟ್‍ಫಾರ್ಮ್ ಮೇಲೆ ನಮ್ಮ ಲಗೇಜುಗಳ ಮೇಲೇ ಕುಳಿತು ನನ್ನ ಅನಿಸಿಕೆಗಳನ್ನು ದಾಖಲಿಸಲು ತೊಡಗಿದೆ. 

ಈ ಪುಸ್ತಕವನ್ನು ಬೆಂಗಳೂರಿಗೆ ಮರಳಿ ಬಂದಾಗ ಮುಗಿಸಿದೆ. ಬಹಳ ಜನರ ಕೈ ತಲುಪಿ, ಅವರವರ ಕಾಮೆಂಟುಗಳನ್ನೂ ಅದರಲ್ಲಿ ಬರೆದಿದ್ದರು. ಇದು ಫೇಸ್‍ಬುಕ್ ಬರುವ ಬಹಳ ಮುಂಚೆ 1979ರಲ್ಲಿ ನನ್ನ ನಿಲುಮೆಗೆ ಕಾಮೆಂಟುಗಳು, ಲೈಕುಗಳು. ಝೂಕರ್‍ಬರ್ಗಣ್ಣನಿಗಿಂತಲೂ ಬಹಳ ಬಹಳ ಮೊದಲು. ಏನಂತೀರಿ!

ರೈಲು ನಮ್ಮನ್ನು ಮದ್ರಾಸಿಗೆ ಒಯ್ದಿತು. ಎಲ್ಲಿ ಮಲಗುವುದು, ಯಾರ ಸೀಟು ಯಾವುದು ಎಂದು ಹುಡುಕಾಡಿ, ನಮಗೆ ಹತ್ತಿರವಾದ ಗೆಳೆಯರ ಹತ್ತಿರದ ಸೀಟಿಗೆ ಬದಲಾಯಿಸಿಕೊಳ್ಳುವುದು ಇತ್ಯಾದಿ ನಡೆದಿತ್ತು. ಆರೇಳು ಹುಡುಗಿಯರಿದ್ದರು. ನಮ್ಮ ತರಗತಿಯ ಇಬ್ಬರು ಮತ್ತು ನಾಲ್ಕನೇ ವರ್ಷದ ಕೆಲವು ಹುಡುಗಿಯರು.

ಮದ್ರಾಸ್ (ಇಂದಿನ ಚೆನ್ನೈ) ತಲುಪಿ ಹೊಟೇಲ್ ತಲುಪಿದೆವು. ಆಗೆಲ್ಲಾ ಆನ್‍ಲೈನ್ ಬುಕಿಂಗ್ ಎಂದರೆ ಬಹುಶಃ ಫೋನ್ ಮಾಡಿದೆವೋ ಅಥವಾ ಪತ್ರ ಬರೆದು ಕನ್‍ಫರ್ಮೇಷನ್ ಪಡೆದುಕೊಂಡಿದ್ದೆವೋ ನೆನಪಿಲ್ಲ.

ಬೆಳಗ್ಗೆ ಒಂದಿಷ್ಟು ಸುತ್ತಾಟ. ಭಯಾನಕ ಬಿಸಿಲು. ಯಾವುದಾದರೂ ಕಾರ್ಖಾನೆಗೆ ಹೋದೆವಾ? ನೆನಪಿಲ್ಲ.

ಸಂಜೆ ಮದ್ರಾಸ್ ದೂರದರ್ಶನ ಕೇಂದ್ರಕ್ಕೆ ಹೋದ ನೆನಪಿದೆ. ಅಬ್ಬಾ, ಬಿಸಿಲಿನ ಝಳ, ಓಪನ್ ಮೋರಿಗಳ ವಾಸನೆಗಳಿಂದ ತಪ್ಪಿಸಿಕೊಂಡಂತೆ ಅನ್ನಿಸಿತ್ತು ಆ ಏರ್ ಕಂಡಿಷನ್ಡ್ ಕೇಂದ್ರದೊಳಗೆ ಹೋದಾಗ.

ಅಲ್ಲಿ ಯಾವುದೋ ಲೈವ್ ಪ್ರೋಗ್ರಾಮ್ ಆಗುತ್ತಿತ್ತು. ನಾಲ್ಕೈದು ಟಿವಿ ಪರದೆಗಳ ಮುಂದೆ ಕೂತಿದ್ದ ಒಬ್ಬ ‘ಪ್ರೊಡ್ಯೂಸರ್’ ಆಯಾ ಕ್ಷಣಗಳಲ್ಲಿ ಯಾವ ಟಿವಿಯಲ್ಲಿ ಬರುತ್ತಿದ್ದ ಯಾವ ಕೋನದ ಚಿತ್ರವು ಮನೆಗಳಲ್ಲಿ ವೀಕ್ಷಕರಿಗೆ ಕಾಣಬೇಕೆಂದು ನಿರ್ಧರಿಸುತ್ತಿದ್ದ.

ಮುಂದೊಂದು ದಿನ ಮದುವೆಗಳಲ್ಲಿ ಒಬ್ಬ ಕೂತು ಸಭಾಸದರಿಗೆ ಯಾವ ದೃಶ್ಯವು ಕಾಣಬೇಕು ಎಂದು ನಿರ್ಧರಿಸುವುದನ್ನು ನೋಡಿದಾಗ ಅಬ್ಬಾ, ಈ ತಂತ್ರಜ್ಞಾನವನ್ನು ಬಹಳ ಹಿಂದೆ ನೋಡಿದ್ದೆ ಎನಿಸದಿರಲಿಲ್ಲ.

ಸಂಜೆ ಹೊರಗೆ ಬಂದು ಅದೇ ಮೋರಿ ವಾಸನೆ, ಉಡುಪು ಮೈಗಂಟುವ ಮದ್ರಾಸಿನ ಬಿಸಿಲು.

ರಾತ್ರಿ ಕಮಲಹಾಸನ್, ಶ್ರೀದೇವಿ ನಟಿಸಿದ್ದ ಭಾರತಿರಾಜಾ ನಿರ್ದೇಶನದ ‘ಸಿಗಪ್ಪು ರೋಜಾಕ್ಕಳ್’ ಸಿನಿಮಾಗೆ ಹೋದ ನೆನಪಿದೆ. ಹಳ್ಳಿ ವಾತಾವರಣದ ‘ಪದಿನಾರು ವಯದಿನಿಲೆ’ ನಂತರ ಭಾರತಿರಾಜಾ ಸೈಕೋಪಾತ್ ಒಬ್ಬನ ಬಗ್ಗೆ ತೆಗೆದ ಚಿತ್ರ. ಕಮಲ್ ಕೂಡಾ ಶಿವಾಜ್ ಗಣೇಶನ್‍ರಂತೆ ವೈವಿಧ್ಯಮಯ ಪಾತ್ರ ಮಾಡುವುದರಲ್ಲಿ ಮೇಲುಗೈ ಆಗೆಲ್ಲಾ.

ಭಯ ಹುಟ್ಟಿಸುವ ದೃಶ್ಯಗಳು, ಸುಂದರ ಹಾಡುಗಳು, ಸುಂದರಿ ಶ್ರೀದೇವಿ.

ನಮ್ಮ ಗೆಳೆಯ ಬಾಲು, ‘ಏ ಇವಳ ಮೂಗು ಚೆನ್ನಾಗಿಲ್ಲ. ಕ್ಯಾಪ್ಸಿಕಂ ಇದ್ದಂಗೈತೆ (ದೊಣ್ಣೆ ಮೆಣಸಿನಕಾಯಿ ನಮ್ಮ ಭಾಷೆಯಲ್ಲಿ!)’ ಎಂದಿದ್ದ.

ಬಹಳ ವರ್ಷಗಳ ನಂತರ ಸಿನಿಮಾ ಗಾಸಿಪ್ ಪತ್ರಿಕೆಯೊಂದರಲ್ಲಿ ಶ್ರೀದೇವಿ ಮೂಗು ಚಿಕ್ಕದಾಗಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಓದಿ ಅಬ್ಬಾ, ಬಾಲು.... ನಿನಗೆ ಆಗ ಹೊಳೆದಿದ್ದು ಈಗ ಶ್ರೀದೇವಿಗೆ ಹೊಳೆದಿದೆ ಎನ್ನಿಸದಿರಲಿಲ್ಲ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102