ಯತಿ ಸ್ವಂತೀ -191



10-07-2018

ಟೂರ್ ಹೋಗುವ ದಿನ ಹತ್ತಿರ ಬರುತ್ತಿದ್ದಂತೆ ಏನೋ ಥ್ರಿಲ್. ಏಕೆಂದರೆ ಗೆಳೆಯರೊಂದಿಗೆ ಹೊರಗೆ ಹೋಗುವ ದೊಡ್ಡ ಸಂದರ್ಭ!

ಹಿಂದೆ ಶ್ರೀರಂಗಪಟ್ಟಣ, ಕೆ.ಆರ್.ಎಸ್.ಗಳಿಗೆ ಗೆಳೆಯರೊಂದಿಗೆ ಹೋಗಿದ್ದುಂಟು. ಅವೆಲ್ಲಾ ಕೇವಲ ಒಂದು ದಿನದ ಪ್ರವಾಸ.

1975ರಲ್ಲಿ ನಾಗರಹೊಳೆಗೆ ಏಳೆಂಟು ಜನ ಹೋಗಿದ್ದೆವು. ಒಂದು ದಿನ ತಂಗಿ ಅಲ್ಲೆಲ್ಲಾ ನೋಡಿ ಬಂದಿದ್ದೆವು. ಅದೊಂದು ಟ್ರಿಪ್ ಕೂಡ ಸ್ವಲ್ಪ ನೆನಪಿದೆ.

ಆದರೆ ಇವೆಲ್ಲವೂ ಆಲ್ ಇಂಡಿಯಾ ಟೂರ್ ಮುಂದೆ ಬಹಳ ಚಿಕ್ಕವು. ಮನೆಯಿಂದ ಹದಿನೈದು ದಿನಗಳ ಮೇಲೆ ಎಲ್ಲಿಯೂ ಇದ್ದಿರಲಿಲ್ಲ.

ಹ್ಞಾಂ... 1978ರಲ್ಲಿ ಎರಡು ದಿನಗಳ ಟೂರ್‍ಗೆ ಜೋಗಕ್ಕೆ ಹೋಗಿದ್ದುಂಟು.

ನಮ್ಮ ಮೇಷ್ಟ್ರು ದತ್ತಾತ್ರಿಯವರು ನಮ್ಮನ್ನು ಜೋಗಕ್ಕೆ ಕರೆದೊಯ್ದಿದ್ದರು. ನಾವು ಎಲೆಕ್ಟ್ರಿಕಲ್ ಪವರ್ ಓದುತ್ತಿದ್ದವರಲ್ಲವೇ? 

ಜೋಗ್ ಜಲಪಾತ ನೋಡಿದ್ದುಂಟು. ಆದರೆ ಅದಕ್ಕಿಂತ ಮುಖ್ಯವಾಗಿ ಮಹಾತ್ಮ ಗಾಂಧಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ಮತ್ತು ಆನೆಬೈಲು ಪವರ್ ಸ್ಟೇಷನ್ ನೋಡಲು ನಮಗೆ ಅನುಮತಿ ಸಿಕ್ಕಿತ್ತು.

ಮನುಷ್ಯನ ಕೆಲವು ಸಾಧನೆಗಳು ಎಂತಹ ಅದ್ಭುತ ಎನ್ನಿಸಿದ್ದು ಎಂಜಿಎಚ್‍ಇ ಪವರ್ ಸ್ಟೇಷನ್ ನೋಡಿದಾಗ. ರಾಮ್ ರಹೀಮ್ ಎಂಬ ಲಿಫ್ಟ್‍ಗಳಲ್ಲಿ ಅನೇಕ ನೂರು ಅಡಿಗಳು ಕೆಳಕ್ಕೆ ಬಂದರೆ ಅಲ್ಲಿದ್ದವು ಜನರೇಟಿಂಗ್ ಸೆಟ್‍ಗಳು. ಹೊರಗೆ ನಿಂತು ತಲೆ ಎತ್ತಿದರೆ ಬೆಟ್ಟದ ಮೇಲೆ ಎಲ್ಲಿಯೋ ಗಗನಚುಂಬಿಗಳಂತೆ ಟ್ರ್ಯಾನ್ಸ್‌ಮಿಷನ್ ಟವರ್‍ಗಳು. ಇವನ್ನು ಹೇಗೆ ಅಲ್ಲಿ ಸಿದ್ಧಗೊಳಿಸಿದರು?

ಇಲ್ಲಿಂದ ತುಂಡು ತುಂಡಾಗಿ ಒಯ್ದು ಅಲ್ಲಿ ಜೋಡಿಸಿದರೆ? ಅಥವಾ ಇಲ್ಲಿ ಇಡೀ ಕಂಬ ಸಿದ್ಧಗೊಳಿಸಿಕೊಂಡು ಅಲ್ಲಿ ಹೋಗಿ ಭದ್ರವಾಗಿ ನಿಲ್ಲಿಸಿದರೆ? ಇಂತಹ ಮತ್ತೊಂದು ಟವರ್‍ಗೂ ಇದಕ್ಕೂ ನಡುವೆ ಆ ತೋಳು ದಪ್ಪದ ಕಂಬಿಗಳನ್ನು ಅವರು ಎಳೆದದ್ದು ಹೇಗೆ?

ಅಬ್ಬಾ! ಎಂತಹ ತಂತ್ರಕೌಶಲ! ಈಗಿನ ಕಾಲದಲ್ಲಿ ಅನೇಕ ಯಂತ್ರಗಳಿವೆ. ಅವನ್ನು ಬಳಸಿ ಮೇಲಕ್ಕೆ ಎತ್ತಬಹುದೇನೋ! ಆ 1920ರಲ್ಲಿ ಇವನ್ನು ಮಾಡಿದ್ದು ಹೇಗೆ?

ಆನೆಬೈಲ್ ಸೈಟ್‍ನಲ್ಲಿ ಎಲ್ಲಿಯೋ ಬೆಟ್ಟದ ನಡುವೆ ಕೊರೆದು ಅಲ್ಲಿ ಹತ್ತು ಜನರೇಟಿಂಗ್ ಸೆಟ್‍ಗಳನ್ನು ಹಾಕಿದ್ದಾರೆ. ನಮ್ಮ ಇಡೀ ಕರ್ನಾಟಕಕ್ಕೆ ಆಗ ವಿದ್ಯುಚ್ಛಕ್ತಿ ಪೂರೈಸುತ್ತಿದ್ದುದು ಇವೇ. ಬಹುಶಃ ಶಿಂಷಾದ ಮತ್ತೊಂದು ಚಿಕ್ಕ ಜೆನ್‍ಸೆಟ್ ಇದೆಯೇನೋ...

ಈಗ ರಾಯಚೂರು ವಿದ್ಯುತ್ ಘಟಕ ಬಂದಿದೆ. ಅದಕ್ಕೆ  ಕಲ್ಲಿದ್ದಲು ಮೂಲ ಕಚ್ಚಾವಸ್ತು.

ಅದಕ್ಕೆ ಮುಂಚೆ ಕೇವಲ ನೀರಿನ ಶಕ್ತಿಯೇ ನಮಗೆ ವಿದ್ಯುತ್ ನೀಡುತ್ತಿತ್ತು.

ಆ ಸಮಯದಲ್ಲಿ ಎಲ್ಲರೂ ಎರಡು ರೂಮುಗಳಲ್ಲಿ ತಂಗಿದ್ದು, ಹೆಣ್ಣು ಮಕ್ಕಳು, ಗಂಡು ಮಕ್ಕಳು ಎಲ್ಲರೂ ಒಂದೆಡೆ ನಿಂತು ಹರಟುತ್ತಾ ಹಲ್ಲುಜ್ಜಿ, ನಂತರ ಒಟ್ಟಿಗೆ ತಿಂಡಿ ತಿಂದದ್ದು ನೆನಪಿದೆ.

ಈಗ ಎಲ್ಲಕ್ಕಿಂತ ದೊಡ್ಡ ಟೂರ್. ಆಲ್ ಇಂಡಿಯಾ ಟೂರ್!

ಬೆಂಗಳೂರಿಗೆ ಬಂದೆ. ಅಮ್ಮ, ಅಯ್ಯ, ತಂಗಿಯರು ಎಲ್ಲರಿಗೂ ಬೈ ಹೇಳಿ ನಾನು, ಶಂಕರ ಮತ್ತು ಪ್ರಸನ್ನ ಸ್ಟೇಷನ್ ತಲುಪಿದೆವು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102