ಯತಿ ಸ್ವಂತೀ -190



09-07-2018

ಅಮ್ಮ ಎಂದಿಗೂ ಗಟ್ಟಿಗಿತ್ತಿ. ಒಳ್ಳೆಯ ಗುಣವನ್ನು ಕಂಡುಹಿಡಿಯುತ್ತಿದ್ದವರು. ವೆಂಕನನ್ನೂ ನಮ್ಮೊಂದಿಗೆ ಇರಹೇಳಿದರು.

ಅವನಿಗೆ ಪಿಯುಸಿ ಸೇರಲು ಒತ್ತಾಯಿಸಿದೆ. ಸೈನ್ಸ್ ಪಿಯುಸಿ ಸೇರಿಕೊಂಡ. ನನ್ನ ಅಮ್ಮನ ಚಿಕ್ಕಮ್ಮನ ಮಗನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ ಸಂಜೆ ಸೈನ್ಸ್ ಪಿಯುಸಿಗೆ ಹೋದ.

ಕಾರಣಾಂತರಗಳಿಂದ ಪರೀಕ್ಷೆ ಕಟ್ಟಲಾಗಲಿಲ್ಲ. ನಂತರ ಮತ್ತೆ ಕಾಮರ್ಸ್ ಪಿಯುಸಿ ಓದಲು ಪುಸಲಾಯಿಸಿದೆ.

ಮತ್ತೆ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಓದುತ್ತಾ ಕೆಲಸ ಮಾಡುತ್ತಾ ಇದ್ದ.

ಪಿಯುಸಿ ಅವನದು ಪಾಸ್ ಆಗುವ ವೇಳೆಗೆ ನನ್ನ ತಂಗಿಯರು ಇಬ್ಬರೂ ಬೆಂಗಳೂರಿಗೆ ಹೊರಟುಹೋದರು. ನಮ್ಮ ತಂದೆ, ತಾಯಿ ಕೂಡ ಹೊರಟುಬಿಟ್ಟರು.

ನಾನು, ನನ್ನ ಸೋದರಮಾವನ ಮನೆಗೆ ಹೋದಾಗ ವೆಂಕನನ್ನೂ ಕರೆದೊಯ್ದೆ.

ಆ ಸಮಯದಲ್ಲೆಲ್ಲಾ ನಾನು ಮಹಾ ಶೀಘ್ರಕೋಪಿ.

ಮಾತೆತ್ತಿದರೆ ಕೋಪ ಬರುತ್ತಿತ್ತು.

ಒಮ್ಮೆ ಏನೋ ಒಂದು ಒಡಕು ಮಾತು ಬಂತೆಂದೋ, ಬಂದ ಮಾತು ನನಗೆ ಒಡಕಾಗಿ ಕೇಳಿಸಿತೆಂದೋ ವೆಂಕನಿಗೆ ಅವನ ಸೋದರಮಾವನ ಮನೆಗೆ ಹೋಗೆಂದು ಕಳಿಸಿಬಿಟ್ಟೆ.

ನಾನು ನನ್ನ ಗಂಟು ಮೂಟೆ ಸಹಿತ ನನ್ನ ಗೆಳೆಯ ನರಸಿಂಹನ ಮನೆಗೆ ಬಂದೆ. 

ಅವನ ಮನೆಯಲ್ಲಿ ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರಿದ್ದರು. ನನ್ನನ್ನು ಅವನ ತಾಯಿ ‘ನೀನೂ ಒಬ್ಬ ಮಗ ಕಣೋ ಯತಿ’ ಎನ್ನುತ್ತಿದ್ದರು.

ಮುಳುಗುತ್ತಿದ್ದೋನಿಗೆ ಹುಲ್ಲುಕಡ್ಡಿಯ ಆಸರೆಯಂತೆ ಅವರ ಮನೆಯ ಬಾಗಿಲು ತಟ್ಟಿ, ‘ಅಮ್ಮ, ನನ್ನ ನಿಮ್ಮ ಮಗ ಅಂತೀರಾ ತಾನೇ?’ ಎಂದೆ. ‘ಹೌದೋ’ ಎಂದರು.

‘ಹಾಗಾದರೆ ನನಗೆ ಡಿಗ್ರಿ ಮುಗಿಯೋವರೆಗೆ ಇಲ್ಲೇ ಜಾಗ ಕೊಡಿ’ ಎಂದು ಅಲ್ಲಿ ಸೇರಿಕೊಂಡುಬಿಟ್ಟೆ. ನನ್ನನ್ನು ಅವರ ಮನೆಯವರೆಲ್ಲಾ ಬಹಳ ಪ್ರೀತಿಯಿಂದ ನಡೆಸಿಕೊಂಡರು. ಅವರಿಗೆ ನಾನು ಎಂದೆಂದಿಗೂ ಚಿರ ಋಣಿ.

ಈ ನಡುವೆ ನಮ್ಮ ಒಂಬತ್ತನೇ ಸೆಮೆಸ್ಟರ್ ಮುಗಿಯಿತು.

ಆಗೆಲ್ಲಾ ವಿದ್ಯಾರ್ಥಿಗಳಿಗೆ ದೇಶಪ್ರವಾಸ ಕಡ್ಡಾಯವಾಗಿತ್ತು.

ಸರಿ, ನಮ್ಮಲ್ಲಿ ಉತ್ಸಾಹವೋ ಉತ್ಸಾಹ.

ಟೂರ್ ಪ್ಲಾನ್ ಸಿದ್ಧ ಮಾಡಿಕೊಂಡೆವು. ಆಲ್ ಇಂಡಿಯಾ ರೌಂಡ್ ಟೂರ್‍ಗೆ ನಮಗೆ ಆಗ ಒಂದು ನೂರು ರೂಪಾಯಿ ಇದ್ದಿರಬೇಕು ಟಿಕೆಟ್ ದರ.

25 ದಿನಗಳ ದೊಡ್ಡ ಟೂರ್ ಪ್ಲಾನ್ ಮಾಡಿದೆವು. ಆದರೆ ನಮಗೆ ಕಾಲೇಜಿನೋರು ಹೇಳಿದ್ದು ಕೇವಲ ಇಪ್ಪತ್ತೊಂದು ದಿನಗಳದ್ದು.

ಅದಕ್ಕೇ ಎರಡೂ ತರಹದ ಟೂರ್‍ನ ಶೀಟ್ ತಯಾರಿಸಿ, ಮೇಲೆ ಇಪ್ಪತ್ತೊಂದು ಕೆಳಗೆ ಇಪ್ಪತ್ತೈದು (ಅಥವಾ ಇಪ್ಪತ್ತೇಳು! ಮರೆತಿದ್ದೇನೆ) ಎರಡರ ಮೇಲೂ ಪ್ರಿನ್ಸಿಪಾಲರ ಸಹಿ ಹಾಕಿಸಿ ಟಿಕೆಟ್ ಖರೀದಿಸಿದೆವು.

ನನಗೆ ಟೂರ್ ಹೊಸದೇನಲ್ಲ. ನಾನು ನಮ್ಮ ಮನೆಯವರ ಜೊತೆ ನಾಗ್‍ಪುರ, ಮದ್ರಾಸ್, ಸೌತ್ ಇಂಡಿಯಾ ಮತ್ತು ದೆಹಲಿಗೂ ಹೋಗಿದ್ದೆ.

ಬಹಳ ಹಿಂದೆಯೇ ದೆಹಲಿಯಲ್ಲಿ ಟಿ.ವಿ.ಯನ್ನು ನೋಡಿ ಕಣ್‍ಕಣ್ ಬಿಟ್ಟಿದ್ದೆ. ಆ ಸಮಯದಲ್ಲಿ ನಮಗೆ ತಿಳಿದಿರಲಿಲ್ಲ. ಈ ಟಿ.ವಿ. ಎನ್ನುವ ಮೂರ್ಖರ ಪೆಟ್ಟಿಗೆ ನಮ್ಮ ಜೀವನದ ಭಾಗವಾಗುವುದೆಂದು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102