ಯತಿ ಸ್ವಂತೀ -189



08-07-2018

ನನ್ನ ಒಂಟಿಕೊಪ್ಪಲ್ ಓಡಾಟ ಅದೆಷ್ಟು ಗಾಢವಾಯಿತೆಂದರೆ, ನಾನು ಬೆಂಗಳೂರಿಗೆ ಮರಳುವ ದಿನ ಹತ್ತಿರವಾದಾಗ ಸಂಕಟ ಪಟ್ಟೆ. ಅಂತಹ ಮ್ಯಾಜಿಕ್ ಆಕರ್ಷಣೆ ಆಯಿತು ನನ್ನ ಗೆಳೆಯರ ಒಡನಾಟ.

ನರಸಿಂಹನ ಸಹಪಾಠಿಗಳಿಬ್ಬರ ಪರಿಚಯವಾಯಿತು. ನಟೇಶ ಮತ್ತು ಪ್ರಸಾದ್. ನನ್ನ ಹೈಸ್ಕೂಲ್ ಮತ್ತು ಇಂಜಿನಿಯರಿಂಗ್ ಸಹಪಾಠಿ ಅನಂತಶಯನನೂ ಅವರ ಗುಂಪಿನಲ್ಲಿದ್ದ.

ನನ್ನ ವಾಸ್ತವ್ಯವೀಗ ಹಾರ್ಡ್‍ವಿಕ್ ಸರ್ಕಲ್ ಬಳಿಯ ಆರ್.ಟಿ.ಓ. ಎದುರಿನ ನನ್ನ ಸೋದರಮಾವನ ಮನೆಗೆ ಬದಲಾಯಿಸಲ್ಪಟ್ಟಿತು.

ನನ್ನ ಸೋದರ ಮಾವ, ಮಾಮಿ, ಅವರ ಇಬ್ಬರು ಗಂಡು ಮಕ್ಕಳು, ನನ್ನ ಕೊನೆಯ ಸೋದರಮಾವ ಮತ್ತು ವೆಂಕ.

ಹೌದು, ಈ ವೆಂಕನ ಬಗೆಗೆ ಏನೂ ಹೇಳಲೇ ಇಲ್ಲ ಇಷ್ಟು ದಿನ.

1968ರಲ್ಲಿ ನನ್ನ ಪಕ್ಕದ ಮನೆಗೆ ಬಂದರು ರಾಮರಾವ್. ಅವರ ಪತ್ನಿ ರತ್ನಮ್ಮ, ಮಕ್ಕಳು ವೆಂಕಟೇಶ, ಜ್ಯೋತಿ, ರಘು ಮತ್ತು ನಚ್ಚಿ.

ನಮ್ಮ ಮೈಸೂರು ರೈಲ್ವೇ ಕಾಲೋನಿಯ ಕ್ವಾರ್ಟರ್ಸ್ ಮನೆಗಳು ಜೋಡಿ ಮನೆಗಳು. ನಮ್ಮ ಮನೆಯ ಎಡಗಡೆಗೆ ಬಶೀರುಲ್ಲಾ ಖಾನ್.  ನಮ್ಮ ಮನೆಯ ಬಲಗಡೆ ಒಂದು ಸೈಟ್‍ನಷ್ಟು ಜಾಗ ಬಿಟ್ಟು ವೆಂಕನ ಮನೆ. ಹೌದು, ಅವನನ್ನು ವೆಂಕ ಎಂದೇ ಎಲ್ಲರೂ ಕರೆಯುತ್ತಿದ್ದೆವು. ನನ್ನ ಕೆಲವು ಬಾಲ್ಯದ ಸಹಪಾಠಿಗಳು ಅವನನ್ನು ವೆಂಕಿ ಎಂದು ನೆನಪಿಟ್ಟುಕೊಂಡಿದ್ದಾರೆ.

ಅಂದರೆ ನನ್ನ ವೆಂಕಟೇಶನ ಗೆಳೆತನಕ್ಕೆ ಈ ವರ್ಷ ಐವತ್ತು!

ನನಗಿಂತ ಎರಡು ವರ್ಷ ಚಿಕ್ಕವನು. 

ಹೇಗೋ ಏನೋ ಅನುಬಂಧ ಬೆಳೆಯಿತು. ಒಡನಾಟ ಆಯಿತು. ನಮ್ಮೊಂದಿಗೆ ಅವನೂ ಆಡಲು ಬರುತ್ತಿದ್ದ. ಅವನಿಗೆ ಇಂಗ್ಲೀಷ್ ಪಾಠವನ್ನು ಕೂಡ ಹೇಳಿಕೊಟ್ಟಂತೆ ನೆನಪು.

ನಮ್ಮ ಮನೆಗೆ ಬಹಳ ಹೊಂದಿಕೊಂಡ. ಬಲು ಸಾಧು ಸ್ವಭಾವದ ಒಳ್ಳೆಯ ಹುಡುಗ. 

ಅವನ ತಂದೆಯದು ವರ್ಗವಾಗುವಂತಹ ಕೆಲಸ. ಅವರಿಗೆ ಅರಸೀಕೆರೆಗೆ ವರ್ಗವಾಯಿತು.

ಅದಕ್ಕೆ ಮುಂಚೆ ಅವರು ಸಾಗರದ ಪಕ್ಕದ ಆನಂದಾಪುರದಲ್ಲಿದ್ದಾಗ ಒಮ್ಮೆ ಅವರ ಮನೆಗೆ ತಾಳಗುಪ್ಪ ರೈಲಿನಲ್ಲಿ ಹೋಗಿದ್ದ ನೆನಪು. 

ಆನಂದಾಪುರ ಸ್ಟೇಷನ್ ಭಯಾನಕವಾಗಿ ಕಾಣುತ್ತದೆ ರಾತ್ರಿ ಹೊತ್ತು. ಅದಕ್ಕೇ ಏನೋ ಲೋಕೇಶ್, ಆರತಿ, ಅನಂತನಾಗ್ ತಾರಾಗಣದ ‘ದೇವರ ಕಣ್ಣು’ ಚಿತ್ರದ ‘ಓ ಇನಿಯಾ ಎಲ್ಲಿರುವೇ... ನಿನಗಾಗೇ ಕಾದಿರುವೇ’ ಹಾಡಿನ ಚಿತ್ರೀಕರಣ ಆನಂದಾಪುರದಲ್ಲಿ ಆಯಿತಂತೆ.

ಸದಾ ಮಳೆ, ಮನೆಯ ಮೇಲೆಲ್ಲಾ ಹಸಿರು ಪಾಚಿ. ಇವಿಷ್ಟೇ ನನಗೆ ನೆನಪಿರುವ ವಿಷಯ. ನನ್ನ ಬಳಿ ಇದ್ದ ಡಬ್ಬಾ (ಪ್ಲಾಸ್ಟಿಕ್) ಕ್ಯಾಮೆರಾ ಡಯಾನಾ ತೆಗೆದುಕೊಂಡು ಹೋಗಿ ಕೆಲವು ಫೋಟೋಗಳನ್ನು ತೆಗೆದ ನೆನಪು.

ಹ್ಞಾಂ... ಅರಸೀಕೆರೆಗೆ ಅವರು ಹೊರಟು ನಿಂತರು. ನನ್ನ ಅಮ್ಮನಿಗೆ ಹೇಳಿದೆ. ‘ಅಮ್ಮಾ, ಈ ಹುಡುಗ ಒಳ್ಳೆಯ ಸ್ವಭಾವದವನು. ಇವನನ್ನು ಅರಸೀಕೆರೆಗೆ ಕಳಿಸೋದು ಬೇಡ. ಇಲ್ಲೇ ಇರಲಿ ನಮ್ಮ ಮನೆಯಲ್ಲಿ’ ಎಂದೆ.

ನಮ್ಮ ಅಮ್ಮ, ಅಯ್ಯ ಇಬ್ಬರೂ ಒಪ್ಪಿಕೊಂಡುಬಿಟ್ಟರು. ಎಂತಹ ವಿಶಾಲ ಹೃದಯಿಗಳು ಎನಿಸುತ್ತದೆ ಈಗ. 

ಅಯ್ಯನ ಸಂಬಳದಲ್ಲಿ ಈಗಾಗಲೇ ಆರು ಬಾಯಿ. ನಮ್ಮ ಅಜ್ಜಿಯೂ ಆಗಾಗ ನಮ್ಮಲ್ಲೂ, ಅವರ ಹೆಣ್ಣು ಮಕ್ಕಳ ಮನೆಯಲ್ಲೂ ಇರುತ್ತಿದ್ದರು.

ಈಗ ಏಳನೆಯವನು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102