ಯತಿ ಸ್ವಂತೀ -188
07-07-2018
ಐದನೇ ವರ್ಷಕ್ಕೆ ಬಂದಾಗ ಮತ್ತೊಬ್ಬ ಸಹಪಾಠಿ ಹಾಸನದ ಕಾಲೇಜಿನಿಂದ ಬಂದ. ಶಿವ ಅವನ ಹೆಸರು. ಅವನು ಒಂಟಿಕೊಪ್ಪಲ್ ಕಾಳಿದಾಸ ರಸ್ತೆಯ ನಾಲ್ಕನೇ ಕ್ರಾಸ್‍ನಲ್ಲಿ ಮನೆ ಮಾಡಿದ್ದ. ಅವನ ಮನೆಯ ಮುಂದೆ ಮಲ್‍ನಾಡ್ ಬ್ರದರ್ಸ್ ಅಂತ ಹೆಸರಿತ್ತು.
ಬ್ರದರ್ಸ್? ಎಂದುಕೊಂಡವನಿಗೆ ಶಿವನ ನಾಲ್ವರು ತಮ್ಮಂದಿರ ಪರಿಚಯವಾಯಿತು.
ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ನನಗೆ ಗೆಳೆಯರಾದರು. ಈ ಗೆಳೆತನಗಳು ಕೂಡ ನಲವತ್ತು ವರ್ಷಗಳಿಂದ ಉಳಿದುಕೊಂಡಿದೆ.
ಹ್ಞಾಂ... ಸಾವಿರದ ಒಂಬೈನೂರ ಎಪ್ಪತ್ತೆಂಟರಲ್ಲಿ ಮತ್ತೊಂದು ವಿಶಿಷ್ಟ ಗೆಳೆತನಗಳಾದವು ನನಗೆ.
ಒಂದು ಮತ್ತು ಗೆಳೆತನ ಏಕವಚನ ಮತ್ತು ಬಹುವಚನ?
ಇದರ ಕಥೆ ಸ್ವಾರಸ್ಯವಾಗಿದೆ.
ಸಾಮಾನ್ಯವಾಗಿ ಪ್ರತಿ ಸೆಮೆಸ್ಟರ್ ರಜೆಯಲ್ಲಿ ನಾನು ಬೆಂಗಳೂರು ತಲುಪಿಬಿಡುತ್ತಿದ್ದೆ, ಅಮ್ಮ, ಅಪ್ಪ, ತಂಗಿಯರನ್ನು ನೋಡಲು.
ಹೌದು, 1977ರ ಅಕ್ಟೋಬರ್ ತಿಂಗಳಲ್ಲಿ ನನ್ನ ತಂದೆಯವರಿಗೆ ನಿವೃತ್ತಿಯಾಯಿತು. ಎಲ್ಲರೂ ಬೆಂಗಳೂರಿಗೆ ಹೊರಟುಬಿಟ್ಟರು. ನಾನು ಕೇರಾಫ್ ನನ್ನ ಸೋದರ ಮಾವನ ಮನೆ. ಅದು ಹಾರ್ಡ್‍ವಿಕ್ ಸರ್ಕಲ್‍ನ ಆರ್‍ಟಿಓ ಎದುರಿಗೆ ಇತ್ತು.
ರಜೆ ಬಂದಾಗ ಬೆಂಗಳೂರಿಗೆ ಇವರುಗಳನ್ನು ನೋಡಲು ಬರುತ್ತಿದ್ದೆನಲ್ಲಾ... ಆ ಸಲ ನನ್ನ ಸೋದರತ್ತೆಯ ಮಗಳಿಗೆ ಮದುವೆ ಆಯಿತು. ಆಕೆಯ ಪತಿ ಡೆಲ್ಲಿಯಲ್ಲಿಯೇ ವರ್ಷಗಟ್ಟಲೆ ಇದ್ದವರು. ಅದಕ್ಕೇ ಅವರಿಗೆ ಮೈಸೂರು ದರ್ಶನ ಮಾಡಿಸಲು ರಜೆಯಲ್ಲಿ ವಾಪಸ್ ಬಂದೆ.
ಅವರು ಒಂಟಿಕೊಪ್ಪಲ್ ವೆಂಕಟರಮಣಸ್ವಾಮಿ ದೇವಸ್ಥಾನದ ಹಿಂಭಾಗದ ರಸ್ತೆಯ ಮನೆಯಲ್ಲಿನ ನೆಂಟರ ಮನೆಗೆ ಕರೆದೊಯ್ಯೆಂದರು. ಆ ಜೋಡಿಯೊಂದಿಗೆ ಆ ಮನೆಗೆ ಬಂದೆ.
ತಿಂಡಿ, ತೀರ್ಥಗಳಾದ ನಂತರ ಅವರು ಇನ್ನೂ ಮಾತಾಡುತ್ತಾ ಕುಳಿತರೋ, ಅಥವಾ ಯಾರಾದರೂ ಬರಬೇಕೆಂದು ಕಾದಿದ್ದರೋ ತಿಳಿಯದು. ನನಗೆ ‘ಬೋರ್’ ಆಯಿತು.
ಹೇಗೂ ಒಂಟಿಕೊಪ್ಪಲ್‍ಗೆ ಬಂದಿದ್ದೇನೆ. ನನ್ನ ಹೈಸ್ಕೂಲ್ ಸಹಪಾಠಿ ನರಸಿಂಹನ ಮನೆ ಇಲ್ಲೇ ನಡೆಯುವ ದೂರದಲ್ಲಿದೆ ಎಂದು ಆಲೋಚಿಸಿ ನಡೆದುಕೊಂಡು ಹೊರಟೆ. ಬೇಗ ಬರುವೆನೆಂದು ಈ ಜೋಡಿಗೆ ಹೇಳಿದ್ದೂ ಹೌದು.
ಅಲ್ಲಿ ನರಸಿಂಹನ ಮನೆಯ ಬಳಿ ಅನೇಕ ಹೊಸಬರ ಪರಿಚಯವಾಯಿತು. ನರಸಿಂಹನ ತಮ್ಮ ಶೆಲ್ವ, ಅವರ ಎದುರು ಮನೆ ಪ್ರಸನ್ನ ಇವರುಗಳ ಪರಿಚಯವಾಯಿತು. ನಮ್ಮ ಹೈಸ್ಕೂಲ್ ಮೇಷ್ಟ್ರು ಕೆ. ಗುಂಡೂರಾವ್ ಅವರ ತಮ್ಮ ಪ್ರಭಾಕರ ಎರಡು ರಸ್ತೆ ಮುಂದಿನ ಮನೆಯಲ್ಲಿದ್ದ.
ಆಗ ಗುರುತಾದವನು ಶ್ರೀಧರ್. ಅವನು ಹಾಸನದಲ್ಲಿ ಬಿ.ಕಾಂ. ಓದುತ್ತಿದ್ದ. ಅದು ಹೇಗೋ ಏನೋ ಅವನೊಂದಿಗೆ ಗೆಳೆತನ ಬೆಳೆಯಿತು. ನರಸಿಂಹನಿಗೆ ದೂರದ ವಾವೆಯಲ್ಲಿ ನೆಂಟ. ಆದರದು ಬಾದರಾಯಣ ಸಂಬಂಧ! ನರಸಿಂಹನ ಚಿಕ್ಕಮ್ಮನ ಪತಿಯ ತಮ್ಮನ ಪತ್ನಿಯ ತಮ್ಮ. ಅದು ಗೌಣ. ಹೇಗೋ ಏನೋ ಅವನ ಅನೇಕ ವರ್ತನೆ ಮತ್ತು ಗುಣಗಳು ನನಗೆ ಮ್ಯಾಚ್ ಆಗಿದ್ದವು!
ಇದೂ ಸಾಲದೆಂಬಂತೆ ಆ ಗೆಳೆಯರೆಲ್ಲರ ಕಂಪೆನಿ ನನಗೆ ಹಿತವಾಗಿತ್ತು. ಮರುದಿನ ಬರುವೆನೆಂದು ಹೇಳಿ ಮತ್ತೆ ಜೋಡಿಯ ಬಳಿಗೆ ಬಂದೆ.
ಅಂದು ಆದ ಗೆಳೆತನ ಇಂದಿಗೂ ಉಳಿದುಕೊಂಡಿದೆ ಆ ಹದಿಮೂರು ಜನರೊಂದಿಗೆ. ಹದಿಮೂರು ಆಗಿದ್ದು ಇನ್ನೂ ಎರಡು ವರ್ಷಗಳ ನಂತರ!
Comments
Post a Comment