ಯತಿ ಸ್ವಂತೀ -187


06-07-2018

ಬಿ. ಇ. ನಾಲ್ಕನೇ ವರ್ಷಕ್ಕೆ ನನ್ನ ಉಳಿದ ಮೂವರು ಗೆಳೆಯರು ಅವರ ಎಲೆಕ್ಟ್ರಾನಿಕ್ಸ್ ತರಗತಿಗಳಿಗೆ ಹೊರಟುಹೋದರು. ಗೋಪಾಲ್‍ರಾವ್ ಅನ್ನೋ  ಮೇಷ್ಟರು ನಮ್ಮ ಸಹಪಾಠಿ ರಘುವೀರ್‍ಗೆ ಏನೋ ಕೇಳಿದಾಗ ಅವನು ಅಮೆರಿಕನ್ ಆಕ್ಸೆಂಟ್‍ನಲ್ಲಿ ಏನೋ ಹೇಳಿದಾಗ ‘ಆರ್ ಯೂ ಫ್ರಂ ಅಮೇರಿಕಾ?’ ಎಂದಿದ್ದರು. ಅವನು ಅಲ್ಲಿಗೇ ಹೋಗಿ ನೆಲೆಸಿದ ಎನ್ನುವುದು ಬೇರೆ ವಿಚಾರ.

ನನಗೆ ಸ್ಟ್ರೆಂಗ್ತ್ ಆಫ್ ಮೆಟೀರಿಯಲ್ಸ್ ಲ್ಯಾಬ್‍ನಲ್ಲಿ ಒಂದು ಟೆಸ್ಟ್ ಬಹಳ ಇಷ್ಟ ಆಯಿತು.

ಫೆಟೀಗ್ ಟೆಸ್ಟ್ ಅಂತ ಅದು. ಒಂದು ಉಕ್ಕಿನ ರಾಡ್ ಅನ್ನು ಒಂದು ಯಂತ್ರದಲ್ಲಿ ಒಂದು ಕಡೆ ಭದ್ರವಾಗಿ ಅಲುಗಾಡದಂತೆ ಇಡುತ್ತಾರೆ. ಮತ್ತೊಂದು ಕಡೆ ಒಂದು ಚಕ್ರ ತಿರುಗಿಸುತ್ತಾ ಹೋದಂತೆ ಆ ರಾಡ್ ನಾವು ಬಟ್ಟೆ ಹಿಂಡುವಾಗ ಬಟ್ಟೆಯನ್ನು ಸ್ಕ್ರೂನಂತೆ ತಿರುಗಿಸುತ್ತೀವಲ್ಲಾ ಹಾಗೆ ಆಗುತ್ತದೆ. ಯಾವುದೋ ಒಂದು ಘಟ್ಟಕ್ಕೆ ಬಂದಾಗ ಆ ರಾಡ್ ‘ಬಸವಳಿದಿರುತ್ತದೆ’. ಇನ್ನೊಂದಿಷ್ಟು ಒತ್ತಡ ಹಾಕಿದರೆ ‘ಟಪ್’ ಎಂದು ಮುರಿದುಹೋಗುತ್ತದೆ. ಈ ಎರಡು ಘಟ್ಟಗಳನ್ನು ನಮ್ಮ ಜೀವನಕ್ಕೆ ಹೋಲಿಸಿಕೊಳ್ಳಬಹುದು.

ನಮ್ಮ ಬದುಕಿನಲ್ಲಿ ನಮ್ಮನ್ನು ನಿಯತಿಯು ಅನೇಕ ರೀತಿಯ ಒತ್ತಡಗಳಿಗೆ ನೂಕುತ್ತದೆ. ಕೆಲವೊಮ್ಮೆ ನಾವು ಮುರಿದುಹೋಗುವೆವೇನೋ ಎನ್ನಿಸುವಂತೆ ಮಾಡುತ್ತದೆ. ಬಸವಳಿದ ಘಟ್ಟಕ್ಕೆ ಯೀಲ್ಡ್ ಪಾಯಿಂಟ್ ಎಂದು ಹೆಸರು. ಅಂದರೆ ಅದು ನಮಗೆ ‘ಶರಣಾಗುತ್ತದೆ’. ಟಪ್ ಎಂದು ಮುರಿದುಹೋಗುವ ಘಟ್ಟವನ್ನು ಬ್ರೇಕ್ ಪಾಯಿಂಟ್ ಎನ್ನುತ್ತಾರೆ. ಆ ಘಟ್ಟವನ್ನು ಮುಟ್ಟಿದ ರಾಡ್ ಮೇಲೆ ಇನ್ನೆಷ್ಟೇ ಒತ್ತಡ ಹಾಕಿದರೂ ಅದು ಇನ್ನು ಸುತ್ತಿಕೊಳ್ಳಲಾರದು. 

ರಾಡ್ ಮೇಲೆ ಒಂದು ನೇರವಾದ ರೇಖೆಯನ್ನು ಸೀಮೆಸುಣ್ಣದ ತುಂಡಿನಿಂದ ಎಳೆಯುತ್ತೇವೆ. ಆ ರೇಖೆಯು ಹಾವಿನಂತೆ ಡೊಂಕಾಗುತ್ತದೆ ಎಂದರೆ ಅದು ಹೇಗೆ ಸುರುಳಿ ಸುತ್ತಿಕೊಂಡಿರಬಹುದೆಂಬುದನ್ನು ಊಹಿಸಬಹುದು.

ಇದನ್ನು ಮ್ಯಾನೇಜ್‍ಮೆಂಟ್‍ನಲ್ಲಿ ಉಪಯೋಗಿಸುತ್ತಾರೆ ಬಹಳ ಜನ. ಒಬ್ಬ ಸಹಾಯಕನ ಮೇಲೆ ಬಾಸ್ ಒಂದು ಮಟ್ಟದವರೆಗೂ ಒತ್ತಡ ಹಾಕಿ ಅವನಿಂದ ಕೆಲಸ ತೆಗೆದರೆ ಅವನು ಸಂಪೂರ್ಣ ಶರಣಾಗಿ ಕೆಲಸ ಮಾಡುತ್ತಾನೆ. ಆ ಒತ್ತಡವನ್ನು ಇನ್ನೊಂದಿಷ್ಟು ಹೆಚ್ಚು ಮಾಡಿದರೆ ಆ ಸಹಾಯಕನ ಮನಸ್ಸು ‘ಮುರಿಯುತ್ತದೆ’. ನಂತರ ಬಾಸ್ ಎಷ್ಟು ಪ್ರೆಷರ್ ಹಾಕಿದರೂ ‘ಅಯ್ಯೋ ಹೋಗಯ್ಯ’ ಎನ್ನುತ್ತಾನೆ. ರೆಬೆಲ್ ಆಗುತ್ತಾನೆ. ಈ ಎರಡು ಘಟ್ಟಗಳ ತೆಳು ಅಂತರವನ್ನು ಅರಿತವನು ಯಶಸ್ವೀ ಬಾಸ್ ಆಗುತ್ತಾನೆ. ಆದರೆ ಅವನು ಒಳ್ಳೆಯ ಬಾಸ್ ಅಂತ ಹೇಳಲಾರೆ.

ನಾಲ್ಕನೇ ವರ್ಷದಲ್ಲಿ ಇಬ್ಬರು ಹೊಸ ಹುಡುಗರು ಬೇರೆ ಬೇರೆ ಕಾಲೇಜಿನಿಂದ ಬಂದು ನನ್ನ ಸಹಪಾಠಿಗಳಾದರು. ಮೈಸೂರು ಜೆ.ಸಿ.ಇ. ಇಂದ ಶಂಕರ ಮತ್ತು ದಾವಣಗೆರೆ ಬಿಡಿಟಿ ಇಂದ ಪ್ರಸನ್ನ. 

ಯಾವಾಗ ಸ್ನೇಹ ಆಯಿತೋ ತಿಳಿಯದು. ಮೂವರೂ ಮೂರು ರೀತಿಯ ಸ್ವಭಾವದವರು. ಆದರೂ ಎಲ್ಲೋ ಒಂದು ಸ್ನೇಹತಂತು ನಮ್ಮ ಮೂವರಲ್ಲಿ ಕೊಂಡಿಯಾಯಿತೇನೋ.

ಅಂದು ಆದ ಸ್ನೇಹ ಇಂದಿನ ವರೆಗೂ ಗಟ್ಟಿಯಾಗಿದೆ. 

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102