ಯತಿ ಸ್ವಂತೀ -186
05-07-2018
ಮಾತಿನ ಪೆಟ್ಟು
ನನ್ನ ಇಪ್ಪತ್ತ ಆರನೇ ವಯಸ್ಸಿನಲ್ಲಿ ದೊಡ್ಡ ಕಾರ್ಖಾನೆಯ ಸೇಲ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸದಲ್ಲಿದ್ದೆ. ನನ್ನ ಕೆಲಸ ಪೀಪಲ್ ಮ್ಯಾನೇಜ್‌ಮೆಂಟ್. ಅಂದರೆ ಡಿಸೈನ್ ಡಿಪಾರ್ಟ್‌ಮೆಂಟ್‌ನಲ್ಲಿ ಗ್ರಾಹಕರಿಗೆ ಬೇಕಾದ ಜನರೇಟರ್‌ಗಳನ್ನು ಡಿಸೈನ್ ಮಾಡಿಸಿ, ಪ್ಲಾನಿಂಗ್‌ನಲ್ಲಿ ಕಚ್ಚಾ ವಸ್ತುಗಳನ್ನು ತರಿಸಿ, ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿ ಅದನ್ನು ಉತ್ಪಾದನೆ ಮಾಡಿಸಿ, ಟೆಸ್ಟಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿ ಅದನ್ನು ಟೆಸ್ಟ್ ಮಾಡಿಸಿ, ಪೆಯಿಂಟ್ ಮಾಡಿಸಿ, ಪ್ಯಾಕ್ ಮಾಡಿಸಿ, ಅದಕ್ಕೆ ಆರ್ಡರ್ ಮಾಡಿದ ಗ್ರಾಹಕರಿಗೆ ಡಿಸ್ಪ್ಯಾಚ್ ಮಾಡುವುದು. ಅಬ್ಬಾ... ಇವೆಲ್ಲ ನಾನು ಮಾಡಬೇಕಿರಲಿಲ್ಲ. ಆ ಜನರೇಟರ್ ಡಿಸ್ಪ್ಯಾಚ್‌ಯೋಗ್ಯವಾಗುವಂತೆ ಮಾಡಲು ಪ್ರತಿಯೊಬ್ಬ ಸಂಬಂಧ ಪಟ್ಟ ಮನುಷ್ಯನ ಹಿಂದೆ 'ಬೀಳುವುದು'! ಇದು ಪೀಪಲ್ ಮ್ಯಾನೇಜ್‌ಮೆಂಟ್ ತಾನೇ? ಜೊತೆಗೆ ಗ್ರಾಹಕರುಗಳಿಗೆ ಅವರ ಜನರೇಟರ್ ಎಂದು ಬರಬಹುದು ಎಂದು ಪತ್ರ, ಫೋನ್, ಟೆಲೆಕ್ಸ್. ನಾನು ಎರಡನೇ ಮಹಡಿಯಲ್ಲಿದ್ದ ನನ್ನ ಆಫೀಸಿನಲ್ಲಿ ನಡೆಯುವುದಕ್ಕಿಂತ ಹೆಚ್ಚಾಗಿ ನರ್ತಿಸುತ್ತಿದ್ದೆ ಎನ್ನುತ್ತಿದ್ದರು ನನ್ನ ಸಹೋದ್ಯೋಗಿಗಳು. ಊಟದ ಆಲೋಚನೆ ಬರುತ್ತಿದ್ದುದು ನಮ್ಮ ಆಫೀಸ್ ಪಕ್ಕದ ಡೈನಿಂಗ್ ಹಾಲ್‌ನಲ್ಲಿ ದೊಡ್ಡ ಅಧಿಕಾರಿಗಳಿಗಾಗಿ ತರಲ್ಪಡುತ್ತಿದ್ದ ಹಪ್ಪಳ ಮತ್ತು ಸೂಪ್ ಪರಿಮಳ ಮಧ್ಯಾಹ್ನ ಒಂದು ಗಂಟೆಗೆ ಮೂಗಿಗೆ ಅಡರಿದಾಗಲೇ! ನಮ್ಮ ಊಟದ ಸಮಯ ಹನ್ನೆರಡೂವರೆ!
ನನ್ನ ದೊಡ್ಡೆಸ್ಟ್ ಬಾಸ್ ಶಾಪ್ ಥ್ರೀಗೆ ಬಂದು 'ಯತಿರಾಜ್ ಬಾ ಇಲ್ಲಿ' ಎಂದು ಘರ್ಜಿಸುತ್ತಿದ್ದರು. ನಾನು ಮಹಡಿ ಇಳಿದು ಓಡುತ್ತಿದ್ದೆ. ಪ್ರತಿ ಜನರೇಟರ್‌ನ ಅಪ್ಪ ಅಮ್ಮ, ಅದೆಲ್ಲಿಗೆ ಯಾವಾಗ ಹೋಗಬೇಕು ಎಲ್ಲವೂ ನನಗೆ ಕರತಲಾಮಲಕ. ವಿವರ ಕೇಳಿ, ತಡವಾಗಿ ತಯಾರಿ ನಡೆದಿದ್ದ ಜನರೇಟರ್‌ಗಳ ಪ್ರೊಡಕ್ಷನ್ ಜನರಿಗೆ 'ಆಶೀರ್ವಾದ ಮತ್ತು ಮಂಗಳಾರತಿ' ಮಾಡಿ ಹೋಗುತ್ತಿದ್ದರು. ಒಮ್ಮೆ ನನ್ನ ಇಮ್ಮಿಡಿಯೆಟ್ ಬಾಸ್ ಕೂಡ ನನ್ನ ಜೊತೆ ಇದ್ದಾಗ ನನ್ನ ಎಂದಿನ ತರಲೆ ಸ್ಟೈಲಿನಲ್ಲಿ 'ಸಾರ್... ನಮ್ಮ ಸಾಹೇಬರು ಶಾಪ್ ಥ್ರೀಗೆ ತೋರುವ ಆಸಕ್ತಿಯಲ್ಲಿ ಕಾಲುಭಾಗ ಶಾಪ್ ಟೂ ಮೇಲೆ ತೋರಿದರೆ..' ಎಂದೆ. ಕಿವಿಗೆ ಬೀಳಬೇಕು ಆದರೆ ನೇರವಾಗಿ ದೂರಬಾರದು... ಹಾಗೆ. ಸರಕ್ಕನೆ ನನ್ನ ಕಡೆ ತಿರುಗಿ 'ಏನಂದೆ?' ಎಂದರು. ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು! ಅಂದು ಶಾಪ್ ಟೂ ಜನಕ್ಕೆ ವಿಶೇಷ ಪೂಜೆ! ನಂತರ ಆ ಜನ 'ಯಾಕೆ ಯತಿರಾಜ್? ಮೊದಲೇ ನಮಗೆ ಹೇಳಿ ಆಮೇಲೆ ಸಾಹೇಬರನ್ನ ಕರಕೊಂಡು ಬರಬೇಕಿತ್ತು' ಎಂದರು.' ಅವರೇ ನನ್ನನ್ನು ಕರೆದುಕೊಂಡು ಬಂದರು' ಎಂದೆ. ಹೇಗೂ ಅವರನ್ನು ಇವರು ಕೇಳುವುದಿಲ್ಲ ಎಂಬ ಭಂಡ ಧೈರ್ಯ! ನಂತರ ನನ್ನ ದೊಡ್ಡೆಸ್ಟ್ ಸಾಹೇಬರ ಬಳಿ ಹೋದೆ. ಅವರು 'ಸರಿಯಾದ ಸಮಯಕ್ಕೆ ಜನರೇಟರ್ ಕೊಡದಿದ್ದರೆ ಹೇಳು. ಬೆಂಡೆತ್ತುತ್ತೀನಿ' ಎಂದರು. ಆಗ 'ಬೇಡ ಸರ್... ನಾನೇ ಅವರೊಂದಿಗೇ ದಿನಾ ಏಗಬೇಕು. ಸಹಾಯ ಬೇಕಾದಾಗ ಬರ್ತೀನಿ' ಎಂದೆ.
ನನ್ನ ಪ್ರೊಫೈಲ್ ಬದಲಾದಾಗ ನಾನು ಶಾಪ್ ಕಡೆ ಹೋಗಲಿಲ್ಲ. ಎಂದಾದರೊಮ್ಮೆ ಆ ಕಡೆ ಹೋದರೆ 'ನೀನೇ ಇಲ್ಲಿ ಇದ್ದಿದ್ದರೆ ಚೆನ್ನಾಗಿತ್ತು' ಎಂಬ ಮಾತನ್ನು ಬಹಳ ಜನ ಹೇಳಿದಾಗ ಒಂದು ರೀತಿಯ ಖುಷಿ ಆಗುತ್ತಿತ್ತು.
Comments
Post a Comment