ಯತಿ ಸ್ವಂತೀ -185


04-07-2018

ನನ್ನ ಕೋಪ ತಣ್ಣಗಾಗಿಸಿದ ರೀತಿ... 
ನನಗೆ ಚಿಕ್ಕಂದಿನಲ್ಲಿ ನನ್ನ ಉದ್ದನೆಯ ಚೂಪು ಮೂಗಿನ ತುದಿಯಲ್ಲಿ ಮಹಾ ಸಿಟ್ಟು ಇರುತ್ತಿತ್ತು. ಸಿಟ್ಟು ಬಂದಾಗ ನಾಲಗೆ ಕಚ್ಚಿಕೊಂಡು ಹೊಡೆಯುವಂತೆ ಕೈ ಎತ್ತುತ್ತಿದ್ದೆ. ಮಂಡೆ ಬಿಸಿ ಆಗುತ್ತಿತ್ತು. ಕಿವಿಗಳೂ ಕೂಡ. ಇದು ಅನುವಂಶಿಕ ಎನ್ನುವ ಮಾತೂ ಇತ್ತು. ನನ್ನ ತಾತ ರಾಮಾನುಜಂ ಅವರು ಕೂಡ ದುರ್ವಾಸಾವತಾರ ಅಂತೆ. ನಾನವರನ್ನು ನೋಡಲಿಲ್ಲ. ನಾನು ಬರುವ ಸೂಚನೆ ತಿಳಿದೊಡನೆ 'ಹೋದರಂತೆ'. ಅವರೇ ಮತ್ತೆ 'ಜನ್ಮ ತಳೆದ ನಾನು' ಎನ್ನುವ ಮಾತು ಕೂಡ  ಮನೆಯಲ್ಲಿ ಬರುತ್ತಿತ್ತು. ನನ್ನ ತಂದೆ 1977ರಲ್ಲಿ ನಿವೃತ್ತಿ ಹೊಂದಿದ ನಂತರ ಬೆಂಗಳೂರಿಗೆ ಬಂದರು. ನನ್ನ ಇಂಜಿನಿಯರಿಂಗ್ ಓದು ಇನ್ನೂ ಎರಡು ವರ್ಷಗಳ ಕಾಲ ಇತ್ತು. ನನ್ನ ಸೋದರಮಾವನ ಮನೆ ಮೈಸೂರಿನ ಹಾರ್ಡ್‌ವಿಕ್ ಸರ್ಕಲ್ ಬಳಿ ಆರ್ ಟೀ ವೋ ಎದುರಿಗೆ ಇತ್ತು. ಮಹಡಿಯ ಮೇಲೆ ಇದ್ದ ಮನೆಯ ನೆಲಹಾಸು ಕೂಡ ಹೆಂಚಿನದು. ನನ್ನ ಮಾಮಿಯ ಹೊರತಾಗಿ ನಾವು ಆರು ಜನ ಹುಡುಗರು(!).ನನ್ನ ಮಾತುಗಳನ್ನು ಯಾರಾದರೂ ಕೇಳದಿದ್ದರೆ ನನಗೆ ಕೋಪ. ಕೇಳಿಸಿಕೊಳ್ಳದಿದ್ದರಂತೂ ಇನ್ನೂ ಹೆಚ್ಚಿನ ಸಿಟ್ಟು. ನನ್ನ ಸೋದರಮಾವನ ದೊಡ್ಡ ಮಗ ವಿನಯ್ ನನಗಿಂತ ಐದು ವರ್ಷ ಚಿಕ್ಕವನು. ನಾನು ಏನಾದರೂ ವಿಷಯ ಹೇಳಲು ಅತ್ಯುತ್ಸಾಹದಿಂದ ಬಾಯ್ತೆರೆದು 'ಈವತ್ತು ಏನಾಯಿತು ಗೊತ್ತಾ?' ಎಂದೊಡನೆ ನಿರುತ್ಸಾಹದ ಮುಖದೊಡನೆ 'ಗೊತ್ತಿಲ್ಲ' ಎಂದು ನನ್ನ ಉತ್ಸುಕತೆಯ ಮೇಲೆ ತಣ್ಣೀರು ಎರಚುತ್ತಿದ್ದ. ಅವನ ಈ ವರ್ತನೆಯಿಂದ ಒಮ್ಮೆ ನನಗೆ  ವಿಪರೀತ ಸಿಟ್ಟು ಬಂದು, ನಾಲಗೆ ಕಚ್ಚಿಕೊಂಡು ನೀರಿನ ಮನೆಗೆ ಹೋಗಿ ಒಂದು ಮಗ್‌ನಲ್ಲಿ ನೀರು ತುಂಬಿಕೊಂಡು ಬಂದು ಅವನ ಮುಖದ ಮೇಲೆ ಎರಚಿದ್ದೆ. ನನ್ನ ಮಾಮಿ ನನ್ನನ್ನೂ, ಅವರ ಮಗನನ್ನೂ ಗಮನಿಸಿ ಕಿಲಕಿಲನೆ ನಗುತ್ತಿದ್ದರು. ನನ್ನ ಕೋಪ ಅವರಿಗೆ ತಿಳಿಯದ್ದೇನಲ್ಲ! ವಿನಯ್ ಸಿಟ್ಟು ಮಾಡಿಕೊಳ್ಳಲಿಲ್ಲ. ನಗುತ್ತಾ ಎದ್ದು ಹೋದ. ಎಲ್ಲೋ ಶರ್ಟು ಬದಲಾಯಿಸಲು ಹೋಗುತ್ತಿರಬಹುದು ಎಂದುಕೊಂಡೆ. ಕ್ಷಣಕಾಲ ನಾನು ಗೆದ್ದೆನೆಂದು ಬೀಗಿ ಕಣ್ಣು ಮುಚ್ಚಿಕೊಂಡು ಕೂತಿದ್ದೆ ಎನಿಸುತ್ತದೆ. ಇಡೀ ದೇಹವು ತಣ್ಣಗಾದ ಫೀಲಿಂಗು. ಬೆಚ್ಚಿ ಕಣ್ಣು ಬಿಟ್ಟೆ. ವಿನಯ್ ಒಂದು ದೊಡ್ಡ ಬಕೆಟ್ ತಣ್ಣೀರು ತಂದು ತಣ್ಣಗೆ ನಗುತ್ತಾ ನನ್ನ ತಲೆಯ ಮೇಲೆ ಅಭಿಷೇಕ ಮಾಡಿದ್ದ! ಹೆಂಚಿನ ನೆಲ ನೀರನ್ನು ಹೀರಿಕೊಂಡಿತ್ತು! 
ಅಂದು ಕಲಿತ ಪಾಠ - ನ್ಯೂಟನ್ನನ ಮೂರನೇ ನಿಯಮವನ್ನೂ ಮೀರಿದ ಕ್ರಿಯೆ(ಮಗ್) = ಪ್ರತಿಕ್ರಿಯೆ(ಬಕೆಟ್) ಜರುಗುತ್ತದೆ...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102