ಯತಿ ಸ್ವಂತೀ -183
02-07-2018
ನನ್ನ ಮೊದಲ ಬರವಣಿಗೆಯ ಕಥನ
ಫ್ಲ್ಯಾಶ್ ಫಾರ್ವರ್ಡ್ - 1989. ಆಗ ಮನೆಯಲ್ಲಿ ನಾನು ಒಂಟಿಯಾಗಿದ್ದೆ. ಮಗ ಮೈಸೂರಿನಲ್ಲಿ ಹುಟ್ಟಿ ಎರಡು ತಿಂಗಳು ಕಳೆದಿದ್ದವು. ಅಪ್ಪ ತೀರಿಕೊಂಡು ಒಂದು ತಿಂಗಳು ಆಗಿತ್ತು. ಖಾಯಿಲೆಯಾಗಿದ್ದ ಅಪ್ಪನನ್ನು ನೋಡಿಕೊಂಡು ಬಸವಳಿದಿದ್ದ ಅಮ್ಮನನ್ನು ಬಾಂಬೆಗೆ ಕಳುಹಿಸಿದೆ. ನಮ್ಮ ಮನೆ ಬಸವನಗುಡಿಯಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಬದಲಾಗಿತ್ತು. ನನ್ನ ಡಿಪಾರ್ಟ್‌ಮೆಂಟ್ ಬದಲಾವಣೆ ಆಗಿ ನಾಲ್ಕು ತಿಂಗಳು ಕಳೆದಿದ್ದವು. ಸೇಲ್ಸ್ ಡಿಪಾರ್ಟ್‌ಮೆಂಟ್‌ನಲ್ಲಿದ್ದಾಗ ಮನೆಗೆ ರಾತ್ರಿ ಹತ್ತು ಗಂಟೆಗೆ ತಲುಪುತ್ತಿದ್ದವನು ಈಗ ಸಂಜೆ ನಾಲ್ಕೂಮುಕ್ಕಾಲಿಗೆ ತಲುಪುತ್ತಿದ್ದೆ. ಹೊಸ ಜಾಗ. ಗೆಳೆಯರಿರಲಿಲ್ಲ ಇನ್ನೂ. ಕೈ ತುಂಬಾ ಸಮಯ.
ಯಾರಿಂದಲೋ ತಿಳಿದು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳ ದುರಂತ ಕಥೆಗಳು ಧುತ್ತೆಂದು ಕಣ್ಮುಂದೆ ಬಂದವು. ಕಾಗದ ಮತ್ತು ಲೇಖನಿ ಕೈಗೆತ್ತಿಕೊಂಡೆ. ಸರಸರನೆ ಬರೆಯಲು ಆರಂಭಿಸಿದೆ.
ಬರೆದಿದ್ದು ಒಬ್ಬ ಹೆಣ್ಣಿನ ಮೇಲೆ ಅವಳ ಪತಿ, ನಾದಿನಿ ಮತ್ತು ಅತ್ತೆ ತೋರಿದ ದೌರ್ಜನ್ಯ. ಆದರೆ ಟಿ. ಕೆ. ರಾಮರಾವ್ ಅವರ ಪ್ರಭಾವ... ಪುಟ್ಟ ಪುಟ್ಟ ವಾಕ್ಯಗಳು. ಯಂಡಮೂರಿ ವೀರೇಂದ್ರನಾಥ್ ಅವರ ಸಸ್ಪೆನ್ಸ್ ಶೈಲಿ. ಕಥೆಗೆ ಪೂರಕವಾಗಿ ದಾಸರ ಪದಗಳ ಬಳಕೆ. ಹೆಸರಿಟ್ಟ ನೆನಪೂ ಇಲ್ಲ. ನನಗೆ ಇದು ಚೆನ್ನಾಗಿದೆ ಅನ್ನಿಸಿತು. ಆದರೆ ಅಪರಿಚಿತ ಓದುಗರಿಗೆ? ಕಾಗದಗಳು ಬೀರೂ ಸೇರಿದವು. ಸುಮಾರು ಒಂದು ವರ್ಷದ ನಂತರ ಮನೆಗೆ ಬಂದ ತಂಗಿಗೆ ಓದಲಿತ್ತೆ. ಚೆನ್ನಾಗಿದೆ ಕಣೋ ಯಾವುದಾದರೂ ಪತ್ರಿಕೆಗೆ ಕೊಡು ಎಂದಳು. ಮಾಸಿಕವಾಗಿದ್ದ ಆಗ ತಾನೇ ರಾಗಸಂಗಮ ವಾರಪತ್ರಿಕೆ ಆಗಿತ್ತು. ಧೈರ್ಯ ಮಾಡಿ ಸಿಟಿ ಮಾರುಕಟ್ಟೆ ಬಳಿಯ ಕಲಾಸಿಪಾಳ್ಯದಲ್ಲಿ ಇದ್ದ ಪತ್ರಿಕಾಫೀಸಿಗೆ ಹೋಗಿ ಸಂಪಾದಕರನ್ನು ಭೇಟಿಯಾಗಿ ಹಸ್ತಪ್ರತಿ ನೀಡಿದೆ. ನೋಡೋಣ ಎಂದರು. ಅದನ್ನು ನಂತರ ಫಾಲೋ ಅಪ್ ಮಾಡಲಿಲ್ಲ. ಕೆಲವು ಸಮಯದ ನಂತರ ಅವರ ಪತ್ರಿಕೆಯಲ್ಲಿ ಹೊಸ ತೆಲುಗು ಧಾರಾವಾಹಿಯ ಅನುವಾದ ಆರಂಭ ಎಂಬ ಪ್ರಕಟಣೆ ನೋಡಿದೆ. ಆಗ ನಾನು ತೆಲುಗು ಕಾದಂಬರಿಗಳನ್ನು ಬಹಳ ಓದುತ್ತಿದ್ದೆ. ಆಗ ಅದು ನಾನು ಹೊಸದಾಗಿ ಕಲಿತ ಭಾಷೆ. ಆ ಸಂಪಾದಕರಿಗೆ ಫೋನ್ ಮಾಡಿದೆ 'ಸರ್ ನಿಮ್ಮ ಹೊಸ ಧಾರಾವಾಹಿ ಪ್ರಕಟಣೆ ನೋಡಿದೆ. ಅದೇ ಕಾದಂಬರಿ ಇನ್ನೊಬ್ಬ ಲೇಖಕರ ಅನುವಾದದೊಂದಿಗೆ ಮತ್ತೊಂದು ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದೆ' ಎಂದು ಫೋನಿಟ್ಟೆ. ನಂತರ ಒಂದು ದಿನ ಅವರಾಫೀಸಿಗೆ ಹೋದೆ. ನಾನೇ ಆ ಫೋನ್ ಮಾಡಿದ್ದು ಎಂದರಿತು ಧನ್ಯವಾದಗಳನ್ನು ಹೇಳಿದರು. ನಮ್ಮ ಪತ್ರಿಕೆಗೆ ಉಂಟಾಗಬಹುದಾಗಿದ್ದ ಕಪ್ಪು ಚುಕ್ಕೆ ತಪ್ಪಿಸಿದಿರಿ ನೀವು ಎಂದರು. ತಕ್ಷಣವೇ ನನ್ನ ಕಥೆ ಬಗ್ಗೆ ನೆನಪಿಸಿದೆ. ಅಂತೂ ನನ್ನಂತಹ ಹೊಸಬನ ಕಥೆಯನ್ನು ಪತ್ರಿಕೆಯವರು ಓದಲು ಆ ಫೋನ್ ಕರೆ ಸಹಾಯ ಮಾಡಿತ್ತು! ಆ ನನ್ನ ಮೊದಲ ಬರವಣಿಗೆ ಒಂದು ನೀಳ್ಗತೆ. ನನ್ನ ಫೋಟೋದೊಂದಿಗೆ ಪ್ರಕಟವಾಗಿ ನನ್ನ ನಿರೀಕ್ಷೆಯನ್ನು ಸಫಲ ಮಾಡಿತು. ಅಂದ ಹಾಗೆ ಆ ನೀಳ್ಗತೆಯ ಹೆಸರು 'ನಿರೀಕ್ಷೆ'!
Comments
Post a Comment