ಯತಿ ಸ್ವಂತೀ -182


01-07-2018

ಎನ್‍ಐಈ ಕಾಲೇಜಿನ ಕ್ಯಾಂಟೀನ್ ಶ್ರೀಕಂಠ ಬಹಳ ಜಾಣ. ನಮಗೆ ಚೆನ್ನಾಗಿ ನೆನಪಿದೆ. ನಮ್ಮ ಪ್ರಿನ್ಸಿಪಾಲ್ ಆಗ ಎಚ್. ವಿ. ಸತ್ಯನಾರಾಯಣರಾವ್ ಆಗಿದ್ದರು.

ಶ್ರೀಕಂಠಾ ಪ್ರಿನ್ಸಿಪಾಲ್‍ಗೆ ಕಾಫಿ ಎಂದು ಎಚ್‍ವಿಎಸ್ ಅವರ ಆಫೀಸ್‍ಬಾಯ್ ಬರ್ತಿದ್ದ. ಬಹಳ ಮುತುವರ್ಜಿಯಿಂದ ಕಾಫಿ ಮಾಡಿ ಕಳಿಸಿದ ಶ್ರೀಕಂಠ. ಅದನ್ನು ಎಲ್ಲರೂ ಗಮನಿಸುತ್ತಿದ್ದೆವು. ಅದಕ್ಕೆ ಪ್ರಿನ್ಸಿಪಾಲ್ ಕಾಫಿ ಎಂದೇ ಹೆಸರಾಯಿತು. ಅದು ಬಹಳ ಹದವಾದ ಕಾಫಿ ಎಂಬ ಅನುಮಾನ ನಮಗೆ ಬಂದಿತು. ನಮಗೆಲ್ಲ ಕೊಡುವ ಕಾಫಿ ಅಷ್ಟು ಚೆನ್ನಾಗಿರುವುದಿಲ್ಲ ಎಂಬ ಶಂಕೆಯೂ ನಮಗೆ ಮೂಡಿತು.

ಒಂದು ದಿನ ಒಬ್ಬ ಗೆಳೆಯ, ಹೆಸರು ಮರೆತಿದೆ, 'ಶ್ರೀಕಂಠ ಪ್ರಿನ್ಸಿಪಾಲ್ ಅವರಿಗೆ ಕಾಫಿ' ಎಂದ. ಶ್ರೀಕಂಠ ತಕ್ಷಣವೇ ಸೂಪರ್ ಕಾಫಿ ಮಾಡಿ ಕೊಟ್ಟ. ಆ ಗೆಳೆಯ ಅಲ್ಲಿಯೇ ಒಂದು ಕುರ್ಚಿಯ ಮೇಲೆ ಕುಳಿತು ಅದನ್ನು ಸೊರ್ ಎಂದು ಹೀರಿದ. 

ಶ್ರೀಕಂಠನಿಗೆ ಬಹಳ ಕೋಪ ಬಂದಿತು. ಆದರೇನು ಮಾಡಿಯಾನು? ಕ್ಯಾಂಟೀನಿನಲ್ಲಿದ್ದ ಇಡೀ ವಿದ್ಯಾರ್ಥಿ ಸಮೂಹ ಕಿಸಕ್ಕನೆ, ಗಹಗಹಿಸಿ ನಕ್ಕಿತು. ಅಂದಿನಿಂದ ಶ್ರೀಕಂಠನ ಪ್ರಿನ್ಸಿಪಾಲ್ ಕಾಫಿ ಎನ್ನುವ ಅಡ್ಡ ಹೆಸರು ಬಂದಿತ್ತು.

ಇದನ್ನು ನಾನು ನನ್ನ ಹಾಸ್ಯ ಪ್ಲಸ್ ಥ್ರಿಲ್ಲರ್ ಕಾದಂಬರಿ ‘ಕರೆದರೆ ಬಾರೆ’ಯಲ್ಲಿ ಬಳಸಿದೆ. ನಾಯಕ ತುಂಟ, ಅವನು ಈ ಕೆಲಸ ಮಾಡುವನೆಂದು ಬರೆದೆ.

ಕಾಲೇಜಿನ ಇನ್ನೊಂದು ವೈಶಿಷ್ಟ್ಯವಿತ್ತು. ಏನಾದರೂ ಕಾರಣಕ್ಕೆ ಸೀನಿಯರುಗಳಿಗೆ ಕೋಪ ಬಂದರೆ ಕಾಲೇಜಿನ ಮುಖ್ಯ ಗೇಟನ್ನು ಬಂದ್ ಮಾಡಿಬಿಡುತ್ತಿದ್ದರು. ಆಗ ನಾವು ಖುಷಿಯಾಗಿ ಒಳಗೆ ಹೋಗದೇ ವಾಪಸ್ ಹೊರಟುಬಿಡುತ್ತಿದ್ದೆವು.

ಮನೆಗಲ್ಲ, ಮಾರ್ನಿಂಗ್ ಷೋಗೆ!

ಗಣೇಶ ಟಾಕೀಸ್, ವಿದ್ಯಾರಣ್ಯ, ಸ್ಟರ್ಲಿಂಗ್ ಹತ್ತಿರವಿದ್ದವು. ಗೇಟು ಎಂಟಕ್ಕೆ ಮುಚ್ಚಿದರೆ, ಮಾರ್ನಿಂಗ್ ಷೋ ಹತ್ತುಗಂಟೆಗಿದ್ದುದರಿಂದ ಲಕ್ಷ್ಮಿ, ಗಾಯತ್ರಿ, ಶಾಂತಲಾ, ಪ್ರಭುದೇವ ಯಾವುದಾದರೂ ಟಾಕೀಸಿಗೆ ನಡೆದೇ ಹೋಗುತ್ತಿದ್ದೆವು.

ನಮಗೆ ಸ್ಟ್ರೆಂಗ್ತ್ ಆಫ್ ಮಟೀರಿಲ್ಸ್‌ಗೆ ಆಲ್ವರ್ ಎನ್ನುವ ಮೇಷ್ಟರಿದ್ದರು. ಅವರ ಹೆಸರು ಆಳ್ವಾರ್ ಎಂದು ತಿಳಿದಿದ್ದು ಬಹಳ ದಿನಗಳ ನಂತರ.

ಅವರು ಭಾಗವತರಂತೆ ತಲೆಗೂದಲು ಮತ್ತು ಹಿಟ್ಲರ್‍ನಂತಹ ಮೀಸೆ ಇಟ್ಟಿದ್ದರೆಂದು ನೆನಪು.

ಅವರ ಮಾತೃಭಾಷೆ ಯಾವುದೆಂದು ನಮಗೆ ತಿಳಿದಿರಲಿಲ್ಲ. ಏಕೆಂದರೆ ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮಾತಾಡುತ್ತಿದ್ದರು.

ಒಂದು ದಿನ ಸ್ಟಾಫ್‍ರೂಮಿಗೆ ಹೋದೆ ಯಾವುದೋ ವಿಷಯಕ್ಕಾಗಿ. ಆಗ ಅವರು ಅರ್ತ್‍ಮೆಟಿಕ್ ಮಾಡುತ್ತಿದ್ದರು. ರೆಂಡು ಪ್ಲಸ್ ಮೂಡು ಪ್ಲಸ್ ಎನಿಮಿದಿ ಎನ್ನುತ್ತಿದ್ದರು. ಸಾರ್, ನೀವು ತೆಲುಗು ಭಾಷೆ ಮಾತಾಡುವಿರಾ ಮನೆಯಲ್ಲಿ ಎಂದೆ. ಹೌದೆಂದರು. 

ನಿಜವಾಗಿ ಅದಲ್ಲ ಕಾರಣ ಅವರ ಭಾಷೆ ಅದಾಗಲು. ನಾವು ಪ್ರೈಮರಿ ಶಾಲೆಯಲ್ಲಿ ಗಣಿತ ಕಲಿಯುವಾಗ ಯಾವ ಭಾಷೆ ಕಲಿಸುತ್ತಾರೋ ಅದು. ಕಾನ್ವೆಂಟಿನಲ್ಲಿ ಕಲಿತ ಮಕ್ಕಳು ಟೂ ಪ್ಲಸ್ ಫೈವ್ ಅನ್ತಾರೆ. ಮಕ್ಕಳ ತಂದೆ ವರ್ಗವಾಗುವ ಉದ್ಯೋಗದಲ್ಲಿದ್ದರೆ ಅವರ ಮಗು ಪ್ರೈಮರಿ ಶಾಲೆ ಸೇರುವಾಗ ಕಲ್ಕತ್ತಾದಲ್ಲಿದ್ದರೆ ಆ ಮಗು ಬಾಂಗ್ಲಾ ಭಾಷೆಯಲ್ಲಿ ಲೆಕ್ಕ ಮಾಡುವ ಸಾಧ್ಯತೆ ಇದೆ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102