ಯತಿ ಸ್ವಂತೀ -181



30-06-2018

ಎಸ್‍ಎಸ್‍ಎಲ್‍ಸಿಯಲ್ಲಿದ್ದಾಗ ಚಿಕ್ಕ ಸೈಕಲ್ ಮೂಲಕ ಸೈಕಲ್ ಓಡಿಸೋದು ಕಲಿತೆ. ಆದರೆ ನನಗೆ ಪೆಡಲ್ ಮೇಲೆ ಎಡಗಾಲಿಟ್ಟು ಕಾಲನ್ನು ಎತ್ತಿ ಆ ಪೆಡಲ್ ಮೇಲೆ ಇಡಲು ಬರುತ್ತಿರಲಿಲ್ಲ! ಫುಟ್‍ಪಾತ್ ಬಳಿ ಹೋಗಿ ಬ್ರೇಕ್ ಹಾಕಿ, ಎಡಪಾದವನ್ನು ಫುಟ್‍ಪಾತ್ ಮೇಲೆ ಇಡುತ್ತಿದ್ದೆ.

ನನ್ನ ಎರಡನೇ ವರ್ಷ ಇಂಜಿನಿಯರಿಂಗ್‍ನಲ್ಲಿ ನನಗೊಂದು ಹೊಸ ಸೈಕಲ್ ತೆಗೆಸಿಕೊಟ್ಟರು ನನ್ನ ಅಂಕಲ್. ಅಂದ ಹಾಗೆ ನಾನು ಈ ಕಡೆ ಎನ್‍ಐಈಗೆ ಸೇರುತ್ತಿದ್ದಂತೆ ಅವರ ನಾಸಿಕ್ ವರ್ಗವು ರದ್ದಾಗಿ ಅವರು ಜಯನಗರದಲ್ಲೇ ಉಳಿದುಕೊಂಡರು. ಆದರೆ ನನಗೆ ಮತ್ತೆ ವಾಪಸ್ ಹೋಗಲು ತೀರಾ ತಡವಾಗಿಬಿಟ್ಟಿತ್ತು.

ಎನ್‍ಐಈ ಕ್ಯಾಂಟೀನಿನ ಶ್ರೀಕಂಠ ಮಾಡುವ ಕಾಫಿ ಕುಡಿಯಬೇಕೆಂದು ನನ್ನ ಹಣೆಯಲ್ಲಿ ಬರೆದಿದ್ದರೆ ಯಾರೇನು ಮಾಡಲಾಗುತ್ತಿತ್ತು!

ಹ್ಞಾಂ... ನನ್ನ ಅಯ್ಯ ಬಳಿ ಸೈಕಲ್ ಇತ್ತು. ಎಡಗಾಲಿನ ಪ್ಯಾಂಟ್‍ಗೆ ಒಂದು ಕ್ಲಿಪ್ ಹಾಕಿಕೊಂಡು ಓಡಿಸುತ್ತಿದ್ದರು. ಏಕೆಂದರೆ ಆ ಕಡೆಯ ಪ್ಯಾಂಟು ಸೈಕಲ್ ಚಕ್ರಕ್ಕೆ ಸಿಕ್ಕಿಕೊಳ್ಳುವುದೆಂದು ಹಾಗೆ ಮಾಡುತ್ತಿದ್ದರು.

ನನಗೆ ಎರಡನೇ ವರ್ಷದಲ್ಲಿ ಹೊಸ ಸೈಕಲ್ ಬಂದಿತು. ಅನಂತಶಯನ ನನ್ನ ಬಾಡಿಗಾರ್ಡ್. ಅವನು ಒಂಟಿಕೊಪ್ಪಲ್‍ನಿಂದ ನಮ್ಮ ಮನೆಗೆ ಬರುತ್ತಿದ್ದ. ಅವನು ನನ್ನ ಬಲಗಡೆ ನನಗೆ ಕಾವಲಿರುತ್ತಿದ್ದ. ಬ್ರೇಕ್ ಹಿಡಿಯಲು ಬಂದರೂ ಇಳಿಯಬೇಕೆಂದರೆ ನನಗೆ ಫುಟ್‍ಪಾತ್‍ನ ಆಸರೆ ಬೇಕಾಗುತ್ತಿತ್ತು!

ಒಂದು ವರ್ಷದ ಕಾಲ ಓಡಿಸಿದೆ ಎಂದು ನೆನಪು. ನಂತರ ಬಸ್‍ನಲ್ಲಿ ಹೋದೆನೆಂದೂ ಜ್ಞಾಪಕ. ಗೌರ್ನಮೆಂಟ್ ಸಿಲ್ಕ್ ಫ್ಯಾಕ್ಟರಿ ಮುಂದಿನ ಸ್ಟಾಪ್ ನಮ್ಮ ಕಾಲೇಜು. ಸಿಲ್ಕ್‍ಫ್ಯಾಕ್ಟರಿಯಿಂದ 5ನೇ ನಂಬರ್ ಬಸ್ಸು ಬಸ್‍ನಿಲ್ದಾಣದವರೆಗೆ ಇರುತ್ತಿತ್ತು. ಅಲ್ಲಿಂದ ನಮ್ಮ ಮನೆಗೆ ಒಂದು ಬಸ್ಸು. ಐದು ಮತ್ತು ಹತ್ತು ಪೈಸೆಗಳ ಟಿಕೆಟ್ ಎಂದು ನೆನಪು.

ಲ್ಯಾನ್ಸ್‍ಡೌನ್ ಕಟ್ಟಡದಲ್ಲಿ ನಮ್ಮ ತಾತ (ಅಮ್ಮನ ಅಯ್ಯ) ಒಂದು ಆಫೀಸ್ ಇಟ್ಟಿದ್ದರು. ಅವರೊಬ್ಬ ಎಲ್ಲೈಸಿ ಏಜೆಂಟ್. ಅವರ ದೊಡ್ಡ ಮಗ ನನ್ನ ಸೋದರ ಮಾವ ಕೂಡ ಎಲ್ಲೈಸಿ ಏಜೆಂಟ್ ಆಗಿದ್ದರು.

ನಾನು ಮೈಸೂರಿಗೆ ಬಂದ ನಂತರ ಮತ್ತೆ ಟೈಪಿಂಗ್ ಸೇರಿಕೊಂಡೆ. ಕೆಲವು ದಿನ ಸೀನಿಯರ್ ತರಗತಿಗಳಿಗೆ ಹೋಗಿ ನಂತರ ಕನ್ನಡಕ್ಕೆ ಬದಲಾಯಿಸಿಕೊಂಡೆ. ಯಾಕೆಂದು ತಿಳಿಯದು. ಬಹುಶಃ ಅದು ನಿಯತಿ ಇರಬೇಕು. ಮುಂದೊಂದು ದಿನ ಲೇಖಕನಾಗಿ, ಕಂಪ್ಯೂಟರ್ ಬಳಸಲು ಸಹಾಯವಾಗಲೆಂಬುದು ಆ ದೇವದೇವನ ಆಲೋಚನೆ ಇರಬೇಕು!

ಹಾಲ್ಡ ಟೈಪ್‍ರೈಟರ್‍ನಲ್ಲಿ ಅ ಸ ಡಾ ಗ ಜ ಕ ಲ ; ಎನ್ನುವ ಎರಡನೇ ಸಾಲಿನಿಂದ ಕಲಿಸಿಕೊಟ್ಟರು. ಇಂದು ನುಡಿ ಫಾಂಟ್‍ಗಳಲ್ಲಿ ಎಫ್ ಅಕ್ಷರವನ್ನು ಅರ್ಧ ಅಕ್ಷರವಾಗಿ ಬಳಸುವಾಗ ನನ್ನ ಕನ್ನಡ ಟೈಪ್‍ರೈಟರ್‍ನ ನೆನಪಾಗುತ್ತದೆ.

ಇಂದು ನಾನು ಬಹಳವೇ ವೇಗವಾಗಿ ಟೈಪ್ ಮಾಡಬಲ್ಲೆ. ಇದಕ್ಕೆ ಕಾರಣ ಅಂದು ಕಲಿತ ಟೈಪ್‍ರೈಟಿಂಗ್.

ಹೀಗೇ ಸಾಗಿತು ನನ್ನ ಮೂರು ವರ್ಷಗಳು. ಕೆಲವು ವಿನೋದಕರ ಘಟನೆಗಳು ನೆನಪಾಗುತ್ತವೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102