ಯತಿ ಸ್ವಂತೀ -179



28-06-2018

ಮೈಸೂರನ್ನು ಖುಷಿ ಖುಷಿಯಾಗಿ ತಲುಪಿದೆ. ಅಮ್ಮ, ಅಯ್ಯ, ತಂಗಿಯರು ಇವರುಗಳ ಜೊತೆ ಇರಬಹುದು! ಇನ್ನೂ ಐದು ವರ್ಷಗಳ ಓದು. 

ಹಿಂದಿನ ವರ್ಷವೇ ಐದು ವರ್ಷಗಳ ಇಂಜಿನಿಯರಿಂಗ್ ಕೋರ್ಸ್ ಆರಂಭವಾಗಿತ್ತು. ಅದಕ್ಕೆ ಮುಂಚೆ ನಾಲ್ಕು ವರ್ಷಗಳದ್ದು ಆಗಿತ್ತು.

ಮನದ ಮೂಲೆಯಲ್ಲಿ ಒಂದು ವಿಷಯ ಕೊರೆಯುತ್ತಿತ್ತು. ಅಯ್ಯನಿಗೆ 1977ರಲ್ಲಿ ರಿಟೈರ್ ಆಗಲಿದೆ. ಆಗ ಏನು ಮಾಡುವುದು? ಇಷ್ಟು ವರ್ಷವೂ ನಾವಿರುವುದು ರೈಲ್ವೇ ಕಾಲೋನಿಯ ಕ್ವಾರ್ಟರ್ಸ್‍ನಲ್ಲಿ. ಆಮೇಲೆ ಅಯ್ಯ ಎಲ್ಲಿ ಇರುತ್ತಾರೆ? ಒಂದು ಕ್ಷಣ ಬಂದ ಆಲೋಚನೆ ಅದು. ಆ ಸಮಯ ಬಂದಾಗ ನೋಡಿಕೊಂಡರಾಯಿತು ಎಂದುಕೊಂಡೆ.

1974ರಲ್ಲಿ ರೈಲ್ವೇ ಮುಷ್ಕರದ ಸಮಯದಲ್ಲಿ ಕದ್ದು ಮುಚ್ಚಿ ಕೆಲಸಕ್ಕೆ ಹೋಗುತ್ತಿದ್ದರು. ಆಗ ಏನೋ ಗಲಾಟೆ. ಏನೆಂದು ಅಷ್ಟು ತಿಳಿಯದು.

ಅಯ್ಯನಿಗೆ ಆ ಸಮಯದಲ್ಲಿ ಕೆಲಸ ಮಾಡಿದ್ದಕ್ಕೆ ಮೂರು ಆಯ್ಕೆಗಳನ್ನು ನೀಡಿದರು. ಒಂದು – ಹೆಚ್ಚಿನ ಸಂಬಳ. ಎರಡು – ಮಗನಿಗೆ ಕೆಲಸ. ಮೂರು - ನಿವೃತ್ತಿವೇತನದಲ್ಲಿ ಹೆಚ್ಚಳ.

ನಾನಿನ್ನೂ ಐದು ವರ್ಷಗಳ ಕಾಲ ಓದಬೇಕಾಗಿದ್ದುದರಿಂದ ಅಯ್ಯ ಹೆಚ್ಚಿನ ಸಂಬಳವನ್ನು ಆಯ್ಕೆ ಮಾಡಿಕೊಂಡರೆಂದು ನೆನಪು.

ನನ್ನ ದೊಡ್ಡ ತಂಗಿ ಮಹಾರಾಣಿ ಹೈಸ್ಕೂಲಿನಲ್ಲಿ ಪಿ.ಯು.ಸಿ. ಓದುತ್ತಿದ್ದಳು. ಚಿಕ್ಕವಳು ಇನ್ನೂ ಪ್ರೈಮರಿ ಸ್ಕೂಲ್. ಯಾದವಗಿರಿಯ ಸುನಂದ ಚಿಲ್ಡ್ರನ್ ಸ್ಕೂಲ್‍ನಲ್ಲಿ.

ನಾನು ಸಂಭ್ರಮದಿಂದ ಎನ್ ಐ ಈ ಕಾಲೇಜಿಗೆ ಹೋದೆ. ಅಬ್ಬಾ, ರೈಲ್ವೇ ಸ್ಟೇಷನ್ ದಾಟಿ, ಒಂದೇ ರಸ್ತೆಯಲ್ಲಿ ಬಲ್ಲಾಳ್ ಹೊಟೇಲ್ ವರೆಗೆ ಹೋಗಿ, ನಂತರ ಎಡಕ್ಕೆ ತಿರುಗಿ ಮತ್ತೆ ತಕ್ಷಣ ಬಲಕ್ಕೆ ತಿರುಗಿ, ಮುಂದಿನ ಸರ್ಕಲ್‍ನಲ್ಲಿ ಮಾಧ್ವ ಹಾಸ್ಟೆಲ್ ಮುಂದೆ ಹೋದರೆ ಸಿಲ್ಕ್ ಫ್ಯಾಕ್ಟರಿ. ಅದನ್ನು ದಾಟಿ ಅನತಿ ದೂರ ಹೋದರೆ ಅಲ್ಲಿತ್ತು ದಿ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್.

ಸೇರಿಕೊಂಡೆ. ರಿಜಿಸ್ಟ್ರಾರ್ ಹೆಸರು ಗೋವಿಂದ ರಾವ್ ಇರಬೇಕು. ‘ಟ್ರಾನ್ಸ್‍ಫರ್ ಪಡೆದು ಬಂದವರಲ್ವೇನ್ರೀ ನೀವು?’ ಎಂದು ವಿಚಾರಿಸಿಕೊಂಡರು.

ಎಲೆಕ್ಟ್ರಿಕಲ್ ಪವರ್ ಎನ್ನುವುದು ನನ್ನ ಬಿ.ಇ. ಕೋರ್ಸಿನ ಹೆಸರು.

ಎಲ್ಲರೂ ಹೊಸಬರು ಎಂದು ನೋಡುತ್ತಿದ್ದಂತೆ, ‘ಅರೆ, ನಮ್ಮ ಅನಂತಶಯನ!’ ಎಂದು ಮನದಲ್ಲೇ ಉದ್ಗರಿಸಿದೆ. ಅವನು ನನ್ನ ಹೈಸ್ಕೂಲು ಸಹಪಾಠಿ.

ಅಬ್ಬಾ, ಒಂದು ಪರಿಚಿತ ಮುಖ ಇದೆ ಎಂದುಕೊಂಡೆ.

ನನ್ನ ಅಯ್ಯನ ಆಫೀಸು ನಮ್ಮ ಕಾಲೇಜಿನಿಂದ ಮುಂದಕ್ಕೆ ಒಂದು ಕಿ.ಮೀ. ದೂರದ ಅಶೋಕಪುರಂ ರೈಲ್ವೇ ಸ್ಟೇಷನ್ನಿನ ಬಳಿ ಇತ್ತು.

ನನ್ನ ಕಾಲೇಜು ಏಳೂವರೆಗೆ ಶುರು. ಅಯ್ಯನ ಗಾಡಿ ಏಳು ಗಂಟೆಗೆ ಹೊರಟು ಏಳೂ ಹತ್ತಕ್ಕೆಲ್ಲ ಅಶೋಕಪುರಂ ಸೇರುತ್ತಿತ್ತು. ಮೈಸೂರು – ಚಾಮರಾಜಪುರಂ – ಅಶೋಕಪುರಂ.

ಪಾಸ್ ಮಾಡಿಸಿಕೊಂಡು ಅವರೊಂದಿಗೆ ರೈಲಿನಲ್ಲಿ ಹೊರಟೆ.  ಬಹುಶಃ ನಾನೊಬ್ಬನೇ ಇರಬೇಕು ರೈಲಿನಲ್ಲಿ ದಿನವೂ ಕಾಲೇಜಿಗೆ ಪ್ರಯಾಣ ಮಾಡುತ್ತಿದ್ದವನು.

ನನ್ನ ಸಹಪಾಠಿ ವಿಜಯಗೋಪಾಲ್ ಎಂಬ ಮಲಯಾಳಿ, ನನ್ನನ್ನು ‘ರೈಲ್ವೇ ಪ್ಲಾಟ್‍ಫಾರಂ ಬಗ್ಗರ್’ ಎಂದು ರೇಗಿಸುತ್ತಿದ್ದ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102