ಯತಿ ಸ್ವಂತೀ -178



27-06-2018

ಜೇಮ್ಸ್ ಹ್ಯಾಡ್ಲಿ ಛೇಸ್ ನನ್ನನ್ನು ಬಲವಾಗಿ ಹಿಡಿದಿದ್ದಾನೆ. ಅವನ ವಿವರಣೆಗಳು ಕಣ್ಣಿಗೆ ಕಟ್ಟಿದಂತೆ ಇರುತ್ತವೆ. 

ಬಹುಶಃ ನನ್ನ ಬರವಣಿಗೆಯಲ್ಲಿ ಈ ಶೈಲಿಯೂ ಬಂದಿದೆ. ಏಕೆಂದರೆ ನಾನು ಪದಗಳನ್ನು ವ್ಯರ್ಥ ಮಾಡುವುದಿಲ್ಲ. ಪುಟಗಳ ಸಂಖ್ಯೆ ಎಷ್ಟು ಕಡಿಮೆ ಇದ್ದರೂ ಸರಿಯೇ. ನಾನು ಹೇಳಬೇಕೆಂದಿರುವುದನ್ನು ಹೇಳಬೇಕು, ಪೂರ್ತಿಯಾಗಿ ಹೇಳಬೇಕು ಅಷ್ಟೇ.

ಅನಗತ್ಯವಾದ ವಾಕ್ಯಗಳು ಕೂಡ ನನ್ನ ಕಾದಂಬರಿಯಲ್ಲಿ ಇರುವುದಿಲ್ಲ. ಅದಕ್ಕೇ ಯಾವ ಎರಡು ಕಾದಂಬರಿಗಳೂ ಒಂದೇ ಸೈಜಿನವಲ್ಲ. 380 ಪುಟದ ಕಾದಂಬರಿಯೂ ಇದೆ, 114 ಪುಟಗಳ ಕಾದಂಬರಿಯೂ ಇದೆ.

ಛೇಸ್‍ಗೆ ವಾಪಸ್ಸಾಗೋಣ.

ಅವನು ಬರೆದದ್ದು ಕೇವಲ 90. ಮೊದಮೊದಲು ಅವನ ಕಾದಂಬರಿಯು ಪ್ರಕಟವಾಗದಿದ್ದಾಗ ರೇಮಂಡ್ ಮಾರ್ಶಲ್, ಜೇಮ್ಸ್ ಎಲ್. ಡೋಖರ್ಟಿ, ಆರ್. ರೇಮಂಡ್, ಆ್ಯಂಬ್ರೋಸ್ ಗ್ರ್ಯಾಂಟ್ ಎನ್ನುವ ಹೆಸರುಗಳಲ್ಲಿ  ಬರೆದ. ಒಮ್ಮೆ ಜನಪ್ರಿಯತೆ ಬಂದ ಮೇಲೆ ಆ ಎಲ್ಲ ಬೇರೆ ಬೇರೆ ಹೆಸರುಗಳಲ್ಲಿದ್ದ ಕಾದಂಬರಿಗಳು ಅವನ ಮೂಲ ಹೆಸರಾದ ಜೇಮ್ಸ್ ಹ್ಯಾಡ್ಲಿ ಛೇಸ್ ಹೆಸರಿನಲ್ಲೇ ಮರುಮುದ್ರಣ ಕಂಡವು.

ದೇಶದ್ರೋಹ, ಕೊಲೆ, ಅನೈತಿಕ ಸಂಬಂಧಗಳು, ಬ್ಯಾಂಕ್ ದರೋಡೆ, ವಿಶಿಷ್ಟವಾದ ಅಂಚೆಚೀಟಿ ದರೋಡೆ ಹೀಗೆ ಅನೇಕ ಥೀಮ್‍ಗಳು ಅವನ ಕಾದಂಬರಿಗಳು.

ಪ್ರಪ್ರಥಮ ಬಾರಿಗೆ ನನಗೆ ಇವನ ಪಾತ್ರಗಳು ಎಷ್ಟೇ ದುಷ್ಟರಾಗಿದ್ದರೂ, ಅವರೊಂದಿಗೆ ನಮ್ಮನ್ನು ನಾವು ಐಡಿಂಟಿಫೈ ಮಾಡಿಕೊಳ್ಳುವಂತಹ ಒಂದು ವಿಶಿಷ್ಟ ರೀತಿಯಲ್ಲಿ ಬರೆದ.

ಪ್ರಥಮ ಪುರುಷ ಬರೆದಾಗ, ಇಡೀ ಕಥೆ ಆ ಪಾತ್ರದ ದೃಷ್ಟಿಕೋನದಲ್ಲೇ ಚಲಿಸುತ್ತದೆ. ಬೇರೆಲ್ಲ ವಿಷಯಗಳು ಕೂಡ ಆ ಪಾತ್ರದ ಮೂಲಕವೇ ನಮಗೆ ತಿಳಿಯಬೇಕಷ್ಟೆ.

ಇದೇ ಟ್ರಿಕ್ ನಾನು ನನ್ನ ಎರಡು ಕಾದಂಬರಿಗಳಲ್ಲಿ ಬಳಸಿದೆ. ಕಪ್ಪು ನದಿ ಮತ್ತು ಒಂದೊಂದಾಗಿ ಜಾರಿದರೆ.

ಯಾವಾಗ ನಾವು ನಮ್ಮನ್ನು ವೈಭವೀಕರಿಸಿಕೊಳ್ಳುತ್ತೇವೋ ಆಗ ಕಥೆಯ ಸ್ವರೂಪ ಬದಲಾಗಿಬಿಡುತ್ತದೆ.

ಛೇಸ್‍ನ ಅನೇಕ ಕಾದಂಬರಿಗಳ ಪ್ರಭಾವ ನನ್ನ ಕಾದಂಬರಿಗಳಲ್ಲಿ ಕಾಣಬಹುದು.

ಹಾಗೆಯೇ ಟಿ.ಕೆ.ರಾಮರಾವ್ ಮತ್ತು ಯಂಡಮೂರಿ ವೀರೇಂದ್ರನಾಥ್.

ಬಹುಶಃ ಇವರುಗಳನ್ನೆಲ್ಲಾ ಓದಿಯೇ ನನಗೂ ಬರೆಯಬೇಕೆಂಬ ತುಡಿತ ಹೆಚ್ಚಾದದ್ದು. 

ಚಿಕ್ಕ ಚಿಕ್ಕ ವಾಕ್ಯಗಳು ರಾಮರಾಯರ ಶೈಲಿ. ಮುಂದಾಗುವುದನ್ನು ಒಂದೆರಡು ಕಡೆ ಸ್ವಲ್ಪ ‘ಬಿಟ್ಟುಕೊಟ್ಟು’ ಜನರ ಕುತೂಹಲದ ಬಲೂನಿಗೆ ಮತ್ತಷ್ಟು ಗಾಳಿ ತುಂಬುವ ಶೈಲಿ ವೀರೇಂದ್ರನಾಥ್ ಅವರದ್ದು.

ಎನಿಡ್ ಬ್ಲೈಟನ್ ಮತ್ತು ಜೇಮ್ಸ್ ಹ್ಯಾಡ್ಲಿ ಛೇಸ್ ಹೊರತಾಗಿ ಬೇರೆಲ್ಲಾ ಲೇಖಕರು ನೇಪಥ್ಯಕ್ಕೆ ಸರಿದರು.

ಎರಡು ವಿಶಿಷ್ಟ ಕಾಂಬೋ. ಮಕ್ಕಳ ಕಥೆಗಳು ಮತ್ತು ಅಪರಾಧೀ ಮನೋಭಾವದ ಪಾತ್ರಗಳ ಕಾದಂಬರಿಗಳು.

ಈವತ್ತಿಗೂ ನನಗೆ ಇವರಿಬ್ಬರ ಕೃತಿಗಳನ್ನು ಓದಲು ಬೇಸರವಿಲ್ಲ. ಎಂತಹ ವಿಶೇಷ ರೀತಿಯ ಬರವಣಿಗೆ ಇವರದು ಎನ್ನಿಸುತ್ತದೆ ಪ್ರತಿ ಸಲ ಹೊಸದಾಗಿ ಓದಿದಾಗ.

ಪ್ರಯತ್ನ ಮಾಡಿ. ಖಂಡಿತ ಎಂಜಾಯ್ ಮಾಡುವಿರಿ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102