ಯತಿ ಸ್ವಂತೀ -177
26-06-2018
ನನ್ನ ಅಂಕಲ್ ಅವರಿಗೆ ನಾಸಿಕ್‍ಗೆ ವರ್ಗವಾಗಿಬಿಟ್ಟಿತ್ತು. ಅವರನ್ನು ಬಿಟ್ಟರೆ ನಮಗೆ ಬೆಂಗಳೂರಿನಲ್ಲಿ ಬೇರೆಲ್ಲಾದರೂ ಇದ್ದು ಓದುವಷ್ಟು ಆರ್ಥಿಕ ಶಕ್ತಿ ಇರಲಿಲ್ಲ.
ವಿಧಿಯಿಲ್ಲದೇ ಮತ್ತೆ ಡಿ.ಟಿ.ಇ. ಆಫೀಸಿಗೆ ಹೋಗಿ ಮೈಸೂರು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್‍ಗೆ ವರ್ಗಕ್ಕೆ ವಿನಂತಿ ಪತ್ರ ನೀಡಿದೆ.
ಆದರೆ ಏನೂ ಉತ್ತರ ಬರಲಿಲ್ಲ. ಕಾಲೇಜಿಗೆ ಹೋಗುವ ದಿನ ಹತ್ತಿರ ಬರುತ್ತಿತ್ತು.
ಆಗ ಒಬ್ಬರು ಮನೆಗೆ ಬಂದರು. ಅವರ ಮಗನಿಗೆ ಎನ್‍ಐಈ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತಂತೆ. ಅವರಿದ್ದುದು ಬೆಂಗಳೂರು ಜಯನಗರದಲ್ಲಿ. ನನ್ನ ಸೀಟನ್ನು ಅವರ ಮಗನಿಗೆ ಕೊಡಿಸಿ, ನನಗೆ ಅವನ ಸೀಟು ಕೊಡಿಸಲು ಪ್ರಯತ್ನಿಸಿದರು.
ಅವನೂ ನನ್ನೊಂದಿಗೆ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಓದಿದ್ದ.
ಅವನ ತಂದೆ ಸುಮಾರು ಸಲ ಬಂದರು. ಏನೇನೋ ಅಪ್ಲಿಕೇಷನ್‍ಗಳನ್ನು ನಾವಿಬ್ಬರೂ ಸಹಿ ಮಾಡಿದೆವು. ಉಹೂಂ. ಪ್ರಯೋಜನವಾಗಲಿಲ್ಲ.
ಯುವಿಸಿಇ ಕಾಲೇಜಿಗೆ ಹೋಗುವ ದಿನ ಬಂದೇ ಬಿಟ್ಟಿತು.
ಖುಷಿಯಾಗಿ ಹೊರಟೆ. ಏಕೆಂದರೆ ಡಿಗ್ರೀ ಕಾಲೇಜು. ಮೇಲಾಗಿ ಪ್ರೊಫೆಷನಲ್ ಡಿಗ್ರೀ. ಮನದ ಮೂಲೆಯಲ್ಲಿ ಅಳುಕು. ಇದೇನು? ಇಲ್ಲಿ ನಾನು ಖಂಡಿತ ಐದು ವರ್ಷ ಓದಲಾರೆ. ಆದರೆ ಕಾಲೇಜು ಶುರುವಾಗಿರುವುದರಿಂದ ಹೋಗಲೇಬೇಕಾದ ಪರಿಸ್ಥಿತಿ.
ಅಲಸೂರು ಗೇಟ್ ಪೊಲೀಸ್ ಸ್ಟೇಷನ್‍ನ ಬಳಿ ಇಳಿದು ನಡೆದೆ. ನೃಪತುಂಗ ರಸ್ತೆಯಲ್ಲಿ ಹೋಗುತ್ತಿದ್ದಂತೆ ಹುಚ್ಚು ಮಳೆ. ಸಂಪೂರ್ಣವಾಗಿ ಒದ್ದೆಯಾದೆ.
ಹಾಗೆ ಒದ್ದೆಯಾಗಿ ಕಾಲೇಜು ತಲುಪಿದೆ.
ಅದೇನು ಪಾಠ ಮಾಡಿದರೆಂದು ನೆನಪಿಲ್ಲ. ಅದೇ ಮೊದಲ ದಿನ.
ಬಾತ್‍ರೂಮಿಗೆ ಹೋಗಬೇಕಿತ್ತು. ಎಲ್ಲಿದೆ ಎಂದು ತಿಳಿಯದು. ಏನೋ ಒಂದು ರೀತಿಯ ಸಂಕೋಚ. ಕೊನೆಗೆ ಪ್ರಪಂಚದ ಅತ್ಯಂತ ಹಳೆಯ ಟ್ರಿಕ್ ಬಳಸಿದೆ. ಅಂದರೆ ನನ್ನ ಮೂಗಿನ ಘ್ರಾಣಶಕ್ತಿಯನ್ನು ಉಪಯೋಗಿಸಿದೆ. ಮೂತ್ರದ ವಾಸನೆಯನ್ನು ಗ್ರಹಿಸಿ ಆ ಕಡೆಗೆ ಹೋದೆ. ಅಲ್ಲಿತ್ತು ಟಾಯ್ಲೆಟ್!
ಎರಡನೇ ದಿನವೂ ಕಾಲೇಜಿಗೆ ಹೋದೆ. ಶನಿವಾರವೆಂದು ನೆನಪು. ಅರ್ಧ ದಿನ. ಅಂದ ಹಾಗೆ ಇದು ಜುಲೈ 1974.
ಅಂದು ಮನೆಗೆ ಬಂದಾಗ ನನ್ನ ಸಹಪಾಠಿಯ ತಂದೆ ಬಂದಿದ್ದರು. ‘ನಿನಗೆ ಎನ್‍ಐಈ ಮೈಸೂರಿಗೆ ಟ್ರಾನ್ಸ್‍ಫರ್ ಸಿಕ್ಕಿದೆ. ನನ್ನ ಮಗನಿಗೆ ಸಿಗಲಿಲ್ಲ. ಬೇರಾವುದೋ ಹುಡುಗಿಗೆ ಕೊಟ್ಟಿದ್ದಾರೆ’ ಎಂದರು.
ಇನ್ನೇನು? ಗಂಟುಮೂಟೆ ಕಟ್ಟಿದೆ. ಎರಡು ವರ್ಷಗಳ ಕಾಲ ನನ್ನ ಸೋದರತ್ತೆಯ ಮನೆಯಲ್ಲಿ ಒಬ್ಬನೇ ಇದ್ದು ರೂಢಿಯಾಗಿತ್ತು. ಈಗ ಮತ್ತೆ ನನ್ನ ಅಮ್ಮ, ಅಯ್ಯ, ತಂಗಿಯರ ಜೊತೆ ಇರಲು ಹೊರಟೆ.
ಫಾಸ್ಟ್ ಫಾರ್ವರ್ಡ್ 2014. ನನ್ನ ಸೋದರ ಮಾವನ ಮೊಮ್ಮಗಳ ಮದುವೆ ಮೈಸೂರಲ್ಲಿ ನಡೆಯಿತು.
ನನ್ನ ಕುರ್ಚಿಯ ಮುಂದಿನ ಕುರ್ಚಿಯಲ್ಲಿ ಒಂದು ಪರಿಚಿತ ಮುಖ ಕಾಣಿಸಿತು. ಅಂದರೆ ನಲ್ವತ್ತು ವರ್ಷಗಳ ನಂತರ. ‘ನಿಮ್ಮನ್ನು ನಾನೆಲ್ಲೋ ನೋಡಿದ್ದೇನೆ’ ಎಂದೆ.
‘ಎಲ್ಲಿ?’ ಎಂದನಾತ.
‘ರೈಲ್ವೇ ಕಾಲೋನಿ, ಮಹಜನಾ ಹೈಸ್ಕೂಲ್, ನ್ಯಾಷನಲ್ ಕಾಲೇಜು ಜಯನಗರ, ಎನ್ನೈಯೀ’ ಎಂದೆ.
‘ನಾನು ನಿಮ್ಮ ಸಹಪಾಠಿ ನ್ಯಾಷನಲ್ ಕಾಲೇಜು ಜಯನಗರ ಮತ್ತು ಎನ್‍ಐಈ’ ಎಂದ.
ನಂತರ ಅವನಾರೆಂದು ತಿಳಿಯಿತು. ನನ್ನ ಬದಲಿಗೆ ಯುವಿಸಿಇ ಕಾಲೇಜಿಗೆ ಸೀಟು ಗಳಿಸಲು ಯತ್ನಿಸಿ ನನ್ನೊಂದಿಗೇ ಎನ್‍ಐಈನಲ್ಲಿ ಓದಿದ್ದ ಜಯಕುಮಾರ್!
ಪ್ರಪಂಚವು ಬಲು ಚಿಕ್ಕದು!
Comments
Post a Comment