ಯತಿ ಸ್ವಂತೀ -176
25-06-2018
ನಾನೋದಿದ ಕೆಲವು ಇಂಗ್ಲಿಷ್ ಲೇಖಕರ ಬಗ್ಗೆ ಒಂದಿಷ್ಟು.
ನನ್ನ ವಯಸ್ಸಾಗ ಹದಿನೈದರಿಂದ ಹದಿನೇಳು. ಎಲ್ಲವೂ ಒಂದು ರೀತಿ ಅಯೋಮಯ. ಪುಸ್ತಕಗಳಲ್ಲಿನ ಪ್ರೇಮದೃಶ್ಯಗಳ ಬಗ್ಗೆ ಏನೋ ಒಂದು ರೀತಿ ಗಲಿಬಿಲಿ.
ಮಕ್ಕಳ ಪುಸ್ತಕಗಳನ್ನು ಓದಿದಾಗ ಖುಷಿ.
ಎನಿಡ್ ಬ್ಲೈಟನ್ ಮಕ್ಕಳಿಗಾಗಿ ಬರೆದಷ್ಟು ಬಹುಶಃ ಬೇರಾರೂ ಬರೆದಿರಲಾರರು. ಮಿಸ್ಟರಿ (ಎರಡು ತರಹದ್ದು), ಅಡ್ವೆಂಚರ್, ಫೇಮಸ್ ಫೈವ್, ಸೀಕ್ರೆಟ್ ಸೆವೆನ್, ನಾಡ್ಡಿ ಸೀರೀಸ್, ಮ್ಯಾಲೊರಿ ಟವರ್ಸ್, ಸೈಂಟ್ ಕ್ಲೇರ್ಸ್... ಎಲ್ಲವನ್ನೂ ಓದಿದ್ದೇನೆ.
ಆಕೆಯ ಮಿಸ್ಟರಿಗಳಲ್ಲಿ ಫೈವ್ ಫೈಂಡ್ ಔಟರ್ಸ್ ಆ್ಯಂಡ್ ಡಾಗ್ ಬಹಳ ಮಜಾ ಕೊಡುತ್ತದೆ. ಪ್ರತಿ ಪುಸ್ತಕವನ್ನೂ ಕನಿಷ್ಠಪಕ್ಷ ಆಗಿನಿಂದ ಇತ್ತೀಚಿನವರೆಗೆ ಹತ್ತು ಸಲವಾದರೂ ಓದಿದ್ದೇನೆ. ಫ್ಯಾಟ್ಟಿ, ಪಿಪ್, ಲ್ಯಾರಿ, ಬೆತ್ ಮತ್ತು ಡೈಸಿ ಮತ್ತು ನಾಯಿ ಬಸ್ಟರ್ ಪೀಟರ್ಸ್‍ವುಡ್ ಎನ್ನುವ ಹಳ್ಳಿಯಲ್ಲಿರುತ್ತಾರೆ. ಅಲ್ಲಿ ಅನೇಕ ಚಿಕ್ಕ ಪುಟ್ಟದಿಂದ ಹಿಡಿದು ದೊಡ್ಡದರವರೆಗೂ ಅಪರಾಧಗಳು ನಡೆಯುತ್ತವೆ. ಅಂತಹ ಹದಿನೈದು ಇವು. ಅವರ ಊರಿನ ಒಬ್ಬನೇ ಪೊಲೀಸ್ ಮಿಸ್ಟರ್ ಗೂನ್. ಅವನಿಗೆ ಈ ಹುಡುಗರನ್ನು ಕಂಡರಾಗದು. ಏಕೆಂದರೆ ಇನ್ಸ್‍ಪೆಕ್ಟರ್ (ನಂತರ ಸೂಪರಿಂಟೆಂಡೆಂಟ್ ಆಗುವ) ಜೆಂಕಿನ್ಸ್‍ಗೆ ಈ ಮಕ್ಕಳೆಂದರೆ ಪ್ರಾಣ. ಏಕೆಂದರೆ ಅವರು ಬಹಳ ಜಾಣರು. ಅದರಲ್ಲೂ ಫ್ಯಾಟ್ಟಿ ವೇಷ ಬದಲಾಯಿಸಿಕೊಂಡು ನಡೆಸುವ ಕರಾಮತ್ತುಗಳು ಬಹಳ ಚೆನ್ನ. ಹದಿನೈದು ಪುಸ್ತಕಗಳೂ ಒಂದು ಆರ್ಡರ್‍ನಲ್ಲಿ ಓದಿದರೆ ಒಂದು ರೀತಿಯ ಕಂಟಿನ್ಯೂಯಿಟಿಯೂ ಸಿಗುತ್ತದೆ.
ನನ್ನ ಮಿತ್ರರೆಲ್ಲ ಅವರ ಮಕ್ಕಳಿಂದ ಇವನ್ನು ಓದಿಸಿದರೆ ನನಗೆ ಬಹಳ ಖುಷಿಯಾಗುತ್ತದೆ.
ಇನ್ನು ಅಡ್ವೆಂಚರ್ಸ್. ಫಿಲಿಪ್, ದಿನಾ, ಜ್ಯಾಕ್ ಮತ್ತು ಲೂಸಿ ಆ್ಯನ್. ಇವರುಗಳು ಒಂದೆಡೆ ಸೇರಿದರೆ ಅಡ್ವೆಂಚರುಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ದ್ವೀಪ, ಕೋಟೆ, ಕಣಿವೆ, ಸಮುದ್ರ, ಪರ್ವತ, ಹಡಗು, ಸರ್ಕಸ್ ಮತ್ತು ನದಿ. ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಹೋಗಿ ಅಲ್ಲಿ ಸಾಹಸ ನಡೆಸುತ್ತಾರೆ. ಬಹಳ ಮಜ ಕೊಡುತ್ತವೆ. ಅಣ್ಣ ತಂಗಿ ಪ್ರೀತಿ, ತಂದೆ ತಾಯಿಯ ಬಗ್ಗೆ ಗೌರವ ಇತ್ಯಾದಿಗಳನ್ನು ಕೂಡ ಕಲಿಸುತ್ತವೆ ಈ ಎಂಟು ಪುಸ್ತಕಗಳು.
ಮ್ಯಾಲೊರಿ ಟವರ್ಸ್ ಮತ್ತು ಸೈಂಟ್ ಕ್ಲೇರ್ಸ್ ಎನ್ನುವ ಎರಡು ಕಲ್ಪನೆಯ ಹೆಣ್ಣುಮಕ್ಕಳ ಶಾಲೆಗಳು. ಆ ಹೆಣ್ಣುಮಕ್ಕಳ ತುಂಟತನ, ಕೆಟ್ಟಬುದ್ಧಿ ಮಾಡಿ ನಂತರ ಪಶ್ಚಾತ್ತಾಪ ಪಡುವುದು ಎಲ್ಲವೂ ಚೆನ್ನ.
ಬಹುಶಃ ಜೆ.ಕೆ. ರೌಲಿಂಗ್‍ಗೆ ಈ ಸೀರೀಸ್‍ಗಳಿಂದಲೇ ಪ್ರೇರಣೆ ಸಿಕ್ಕಿ ಇದಕ್ಕೆ ಮ್ಯಾಜಿಕ್‍ನ ಅಂಶ ಸೇರಿಸಿ ಹ್ಯಾರಿ ಪಾಟರ್‍ನ ಏಳು ಪುಸ್ತಕಗಳನ್ನು ಬರೆದಿರಬಹುದು ಎನ್ನಿಸುತ್ತದೆ. ಜೊತೆಗೆ ಭಾರತೀಯ ಪುರಾಣವೂ ಒಂದಿಷ್ಟಿದೆ. ನಾಗಿನಿ, ಪಾರ್ವತಿ, ಪದ್ಮ ಇವರುಗಳೂ ಹ್ಯಾರಿ ಪಾಟರ್‍ನಲ್ಲಿ ಬರುತ್ತಾರೆ.
ಆರ್ ಅಕ್ಷರದ ಮತ್ತೊಂದು ಸೆಟ್ ಮಿಸ್ಟರಿಗಳೂ ಚೆನ್ನಾಗಿವೆ. ರಬೆಡಬ್, ರಾಗಾಮಫಿನ್, ರಾಟೆಟ್ಯಾಟ್, ರಿಂಗೋಬೆಲ್ಸ್ ನಾಲ್ಕರಲ್ಲೂ ಅಲ್ ಬಾರ್ನಿ ಎನ್ನುವ ಅನಾಥ ಹುಡುಗನ ಸಾಹಸಗಳಿವೆ.
Comments
Post a Comment