ಯತಿ ಸ್ವಂತೀ -175
24-06-2018
ನನ್ನ ಗೆಳೆಯ ನರಸಿಂಹ ರಾಘವನ್ ಅವರ ಜೊತೆ ನಿಂತಿದ್ದ ಎಂ.ಎಲ್.ಎ. ನನಗೆ 78% ಬಂದ ವಿಷಯ, ಮೊದಲ ದಿನ ಇಂಟರ್‍ವ್ಯೂ ಆದ ವಿಷಯ ತಿಳಿದುಕೊಂಡರು.
ಅವರೇ ಮೊದಲು ಡಿ.ಟಿ.ಇ.ಯ ವಿದ್ಯಾರ್ಥಿ ಆಯ್ಕೆ ಸಮಿತಿಯ ಮುಂದೆ ಹೋದರು.
ಅವರ ಭೇಟಿಯನ್ನು ನಾನೇ ನೋಡಿದಂತೆ ಬರೆಯುತ್ತೇನೆ.
“ಬನ್ನಿ”
“ನಾನು ...ಎಂ.ಎಲ್.ಎ. ನಮ್ಮ ಹುಡುಗ ಇವನು. ಇವನಿಗೊಂದು ಸೀಟು ಕೊಡಿ”
“ಎಷ್ಟು ಪರ್ಸೆಂಟೇಜು?”
“ನಲವತ್ತೊಂಬತ್ತು”
“ನಿಮ್ಮ ಹುಡುಗನಿಗೆ ಬ್ರಹ್ಮ ಬಂದರೂ ಕೊಡಿಸಕ್ಕಾಗಲ್ಲ” (ಎಂತಹ ಧಿಮಾಕಿನ ಜನ ಅನ್ನಿಸಿತು)
“ಅದು ಏಕೆ ಸಾಧ್ಯ ಇಲ್ಲ? ನೀವು 78% ಬಂದವನಿಗೇ ಕೊಟ್ಟಿಲ್ಲ ಸೀಟು. ಈಗಾಗ್ಲೇ ಮೂರು ಲಿಸ್ಟು ಬಂದಾಯ್ತು”
“ಅದು ಸಾಧ್ಯವೇ ಇಲ್ಲ. ನಾವೇಕೆ ಬಿಡುತ್ತೇವೆ? ಇದನ್ನು ನಾವು ನಂಬುವುದಿಲ್ಲ”
“ಹೊರಗಡೆ ಇದ್ದಾನೆ ಆ ಹುಡುಗ ಕರೆಯಲಾ?”
“ಕರೆಯಿರಿ”
ಸರಿ, ನಾನು, ನನ್ನ ಸೋದರತ್ತೆ ಒಳಗೆ ಹೋದೆವು. ನನ್ನ ಮಾರ್ಕ್ಸ್ ಕಾರ್ಡ್, ಇಂಟರ್ವ್ಯೂ ಕಾರ್ಡ್ ನೋಡಿ ಬೆಚ್ಚಿದರು. ಇದು ಹೇಗೆ ಸಾಧ್ಯ ಎಂದು ಮಾತಾಡಿಕೊಂಡರು.
ನಂತರ, “ನಿನಗೆ ಮುಂದಿನ ಲಿಸ್ಟ್‌ನಲ್ಲಿ ನೀನು ಕೇಳಿದ ಕಾಲೇಜಿನಲ್ಲಿ ಸೀಟ್ ಸಿಗುತ್ತದೆ” ಎಂದರು ಬಲ್ಲಾಳ್.
ನನಗೆ ಖುಷಿ ಮತ್ತು ದುಃಖ. ನನಗೆ ಸಿಕ್ಕಿದ್ದಕ್ಕೆ ಖುಷಿ ಆದಂತೆ ನರಸಿಂಹನಿಗೆ ಸಿಗಲಿಲ್ಲವಲ್ಲಾ ಎಂಬ ದುಃಖ.
ಅವನು ನಂತರ ಬಿ.ಎಸ್.ಸಿ. ಮಾಡಿ ಪೋಸ್ಟಲ್ ಡಿಪಾರ್ಟ್‍ಮೆಂಟ್ ಸೇರಿ, ನಂತರ ಎಲ್‍ಐಸಿ ಸೇರಿ ‘ಕರೋಡ್‍ಪತಿ’ ಆಗಿ ಒಂದು ವರ್ಷದ ಹಿಂದೆ ನಿವೃತ್ತಿ ಹೊಂದಿದ. ಅತ್ಯಂತ ಜನಪ್ರಿಯ ವ್ಯಕ್ತಿ ಅವನು. ನನಗೆ ಅವನಿಂದ ಇನ್ನೂ ಅನೇಕ ಸಹಾಯಗಳಾಗುವುದಿದ್ದವು. ಅವುಗಳ ಬಗೆಗೆ ಅನಂತರ ಹೇಳುವೆ. ಸಾಧ್ಯವಾದಷ್ಟೂ ಕ್ರೋನಲಾಜಿಕಲ್ ಆರ್ಡರ್‍ನಲ್ಲಿ.
ಸೀಟು ಸಿಕ್ಕಾಯಿತು. ಸಿಗದಿರಲು ಕಾರಣ ಬಹಳ ವಿಚಿತ್ರವಾಗಿತ್ತು. ನನ್ನದು 165 ಇಂಟರ್‍ವ್ಯೂ ನಂಬರ್. 150ರ ವರೆಗೆ ಜನರಲ್ ಮೆರಿಟ್‍ಗೆ ಕೊಟ್ಟು ನಂತರ ಎಕ್ಸ್ ಸರ್ವೀಸ್‍ಮನ್, ಸ್ಪೆಷಲ್ ಕೋಟಾಗಳನ್ನು ಕೊಡುತ್ತಾ ನನ್ನ ನಂಬರ್ ಇನ್ನೂರ ಇಪ್ಪತ್ತೈದಕ್ಕೆ ಹೋಗಿತ್ತು.
ಆಗೆಲ್ಲಾ ಈಗಿನಷ್ಟು ಇಂಜಿನಿಯರಿಂಗ್ ಕಾಲೇಜುಗಳಿರಲಿಲ್ಲ. ಗುಂಡೂರಾಯರ ‘ಕೃಪೆ’ಯಿಂದ ಕರ್ನಾಟಕವು ಇಂಜಿನಿಯರಿಂಗ್ ಕಾಲೇಜುಗಳಿಂದ ಸಮೃದ್ಧವಾಯಿತು. ಇಡೀ ಭಾರತದ ಯುವಕ ಯುವತಿಯರು ಬೆಂಗಳೂರಿಗೆ ಇಂಜಿನಿಯರಿಂಗ್ ಸೇರಲು ಧಾವಿಸಿದ ಕಾಲ ಗುಂಡೂರಾಯರಿಂದ ಸೃಷ್ಟಿಯಾಯಿತು.
ನನಗೆ ಯುವಿಸಿಇಯಲ್ಲಿ ಸೀಟು ಸಿಕ್ಕಿತು. ಏನೋ ಥ್ರಿಲ್ಲು.
ಆಗಲೂ ಜಯನಗರದಿಂದ ಬಸ್‍ನಲ್ಲಿ ಹೊರಟರೆ ಅಲಸೂರು (ಈಗ ಹಲಸೂರು!) ಗೇಟ್ ಪೊಲೀಸ್ ಸ್ಟೇಷನ್ ಬಳಿ ಇಳಿದು ನೃಪತುಂಗ ರಸ್ತೆಯಲ್ಲಿ ನಡೆದು ಕೆ.ಆರ್. ಸರ್ಕಲ್ಲಿನಲ್ಲಿದ್ದ ಕಾಲೇಜು ತಲುಪಬೇಕಿತ್ತು.
ಕಾಲೇಜು ಇನ್ನೆರಡು ದಿನಗಳಲ್ಲಿ ತೆರೆಯುವುದು ಎಂದು ತಿಳಿಯುವ ವೇಳೆಗೆ ನನ್ನ ಆನಂದದ ಗಸಗಸೆ ಪಾಯಸದಲ್ಲಿ ಇಂಗಿನ ಒಂದು ದೊಡ್ಡ ತುಂಡು ಬಂದು ಬಿದ್ದಿತ್ತು.
ಏನು ಮಾಡುವುದೋ ಎಂದು ತಿಳಿಯದೇ ಒದ್ದಾಡಿದೆ!
Comments
Post a Comment