ಯತಿ ಸ್ವಂತೀ -174
23-06-2018
ನನ್ನ ಸಹಪಾಠಿಗಳು ಒಬ್ಬೊಬ್ಬರೇ ‘ನನಗೆ ಇಂಜಿನಿಯರಿಂಗ್ ಸೀಟು ಸಿಕ್ಕಿತು’ ಅನ್ನೋಕ್ಕೆ ಶುರು ಮಾಡಿದರು. ಎರಡನೇ ಲಿಸ್ಟ್ ಆಯಿತು, ಮೂರನೇ ಲಿಸ್ಟೂ ಬಂತು. ಮೊದಲ ದಿನ ಇಂಟರ್‍ವ್ಯೂ ಆಗಿದ್ದ ನನಗೆ ಸೀಟು ಇನ್ನೂ ಸಿಕ್ಕಿರಲಿಲ್ಲ.
ನನ್ನ ಸೋದರತ್ತೆ ಮಹಾರಾಣಿ ಕಾಲೇಜಿನಲ್ಲಿ ಉಪಾಧ್ಯಾಯಿನಿ ಆಗಿದ್ದರಲ್ಲ.. ಅವರು ತಮ್ಮ ಕಾಲೇಜಿನಿಂದ ಆಚೆ ಬಂದು ಪ್ಯಾಲೇಸ್ ರೋಡ್ ದಾಟಿದರೆ ಡಿಟಿಇ ಆಫೀಸ್ ಇತ್ತು. ಆಗ ನಿರ್ದೇಶಕರಾಗಿದ್ದವರು ಬಲ್ಲಾಳ್ ಎಂದು ನೆನಪು.
ಒಮ್ಮೆ ಅಪಾಯಿಂಟ್‍ಮೆಂಟ್ ಸಿಕ್ಕಿತು ಬಲ್ಲಾಳ್‍ರೊಂದಿಗೆ. ಫೋನ್ ಮಾಡಿ ನನ್ನನ್ನು ಬರಹೇಳಿದರು.
ಹ್ಞಾಂ! ಆಗ ಮನೆಯಲ್ಲಿ ನಾಲ್ಕು ಅಂಕಿಗಳ ಫೋನ್ ಇತ್ತು. ಹಳೆಯ ಸಿನಿಮಾಗಳನ್ನು ನೋಡುವಾಗ ಅವರು ಎಷ್ಟು ಸಲ ಡಯಲ್ ಅನ್ನು ತಿರುಗಿಸುತ್ತಾರೆ ಎಂದು ನೋಡುವುದು ನನ್ನ ಚಾಳಿ!
ಅಲ್ಲಿಗೆ ಹೋದರೆ ಅತ್ತೆ ಕಾಯುತ್ತಿದ್ದರು.
ಅಲ್ಲಿದ್ದ ನನ್ನ ಗೆಳೆಯ ನರಸಿಂಹ ರಾಘವನ್. 1968ರಿಂದ ನನ್ನ ಗೆಳೆಯ. ಪ್ರೌಢಶಾಲೆಯಲ್ಲಿ ಒಟ್ಟಿಗೆ ಓದಿದೆವು. ಸುಧಾ, ಚಂದಮಾಮ, ಮಯೂರ ಓದಲು ನಮ್ಮಿಬ್ಬರಿಗೆ ಪೈಪೋಟಿ ಇತ್ತು. ಧಾರಾವಾಹಿ ಕಾದಂಬರಿಗಳ ಬಗ್ಗೆ ಕೂಡ ಚರ್ಚಿಸುತ್ತಿದ್ದೆವು. ನಮ್ಮ ಹೈಸ್ಕೂಲಿನ ವಯಸ್ಸಿಗೆ ಬಿ. ಪುಟ್ಟಸ್ವಾಮಯ್ಯನವರ ಹೂವುಕಾವು ಬಗೆಗೆ ಮಾತಾಡುತ್ತಿದ್ದೆವು. ಅದರಲ್ಲಿ ಪ್ರಸನ್ನ ಎನ್ನುವ (ಹೆಸರು ಸರಿಯಾ? ಅದನ್ನು ಓದಿದ ಇನ್ನಾರಾದರೂ ಹೇಳಬೇಕು) ಹುಡುಗ ಚಲನಚಿತ್ರ ನಿರ್ದೇಶಕನಾಗುತ್ತಾನೆ. ಅದರಲ್ಲಿನ ಒಂದು ಸನ್ನಿವೇಶವನ್ನು ನೆನಪಿಸಿಕೊಂಡು ನಗುತ್ತಿದ್ದೆವು. ಪ್ರಥಮ ರಾತ್ರಿಯ ಸನ್ನಿವೇಶ. ಎಲ್ಲಿ ಬಾಡಿದ ಹೂಗಳನ್ನು ಹಾಕಬೇಕೋ, ಎಲ್ಲಿ ತಾಜಾ ಹೂಗಳಿರಬೇಕೋ ಎಂದು ಹಿರಿಯ ನಿರ್ದೇಶಕನಿಗೇ ಹೇಳುತ್ತಾನೆ ಧೈರ್ಯವಾಗಿ. ಆ ನಂತರ ಅವನು ನಿರ್ದೇಶಕನಾಗುತ್ತಾನೆ. ನಾಯಕಿಯನ್ನು ಮೋಹಿಸುತ್ತಾನೆ. ಎಲ್ಲಿಯೋ ಕೇಳಿದ ಘಟನೆಯಂತಿದೆಯಾ? ಆದರೆ ಈ ಕಾದಂಬರಿ ನನಗೆ ತಿಳಿದಿರುವ ಮಟ್ಟಿಗೆ ಒಂದು ದಶಕದ ಹಿಂದೆಯೇ ಬಂದಿತ್ತು!
ಸರಿ, ನರಸಿಂಹ ಅಲ್ಲಿ ನಿಂತಿದ್ದ. ‘ಸೀಟು ಸಿಕ್ತೇನೋ?” ಎಂದ. ಇಲ್ಲ ಅಂದೆ. ಅವನ ಪಕ್ಕದಲ್ಲಿ ಕಚ್ಚೆ ಧರಿಸಿ, ಖಾದಿ ಟೋಪಿ ಧರಿಸಿದ ಒಬ್ಬಾತ ಇದ್ದರು. ಅವರೂ ಕುತೂಹಲದಿಂದ ನಮ್ಮ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದರು. ನರಸಿಂಹನಿಗೆ 49%. ಇಂಜಿನಿಯರಿಂಗ್ ಸೀಟ್‍ಗೆ ಬಂದಿದ್ದ. ಆ ಟೋಪಿವಾಲ ಒಬ್ಬ ಎಂಎಲ್‍ಎ ಇರಬೇಕು. ಅವನಿಗೆ ಸೀಟು ಕೊಡಿಸುವ ಭರವಸೆ ಕೊಟ್ಟು ಕರೆತಂದಿದ್ದರು.
ನನಗೆ 78% ಎಂದೆ. ಅಂದ ಹಾಗೆ ನನ್ನದು ಆ ವರ್ಷ ನ್ಯಾಷನಲ್ ಕಾಲೇಜು ಜಯನಗರದಲ್ಲಿ ಅತ್ಯಂತ ಹೆಚ್ಚಿನ ಟೋಟಲ್ ಮಾರ್ಕ್ಸ್. ಕನ್ನಡದಲ್ಲಿ 80, ಇಂಗ್ಲಿಷ್ 78. ಬಹುಶಃ ಎಲ್ಲವೂ ಸರಿಸುಮಾರು 78 ಬಂದಿದ್ದವು, ಮ್ಯಾತ್ಸ್ ಬಿಟ್ಟು. ಅದು ಸ್ವಲ್ಪ ಕಮ್ಮಿ ಇತ್ತು.
ಎಚ್ಚೆಸ್ಸಾರ್ ಸರ್ ಬಹಳ ಖುಷಿ ಆಗಿದ್ದರು. ನನಗಿಂತ ಒಂದು ಅಂಕಿ ಜಾಸ್ತಿ ತೆಗೆದ ಹುಡುಗಿಯೊಬ್ಬಳಿದ್ದಳು. ಪ್ರೀತಿ ಶ್ರೀಮಂದಕುಮಾರ್ ಇರಬೇಕು ಅವಳ ಹೆಸರು. ಹ್ಞಾಂ... ಪ್ರತಿಭಾ, ಆಕೆಯ ಪತಿ ನಂದಕುಮಾರ್ ನನ್ನ ಸಹಪಾಠಿಗಳು (ಇದನ್ನು ಪ್ರತಿಭಾ ಅವರೇ ಗೋರವಿ ಮತ್ತು ಸತೀಶನ ಪುಸ್ತಕಗಳ ಬಿಡುಗಡೆ ದಿನ ಖಚಿತ ಪಡಿಸಿದರು.) ಇನ್ ಫ್ಯಾಕ್ಟ್ ಅವರಿಗೆ ಯತಿರಾಜ್ ವೀರಾಂಬುಧಿ ಎಂಬ ಕಾದಂಬರಿಕಾರನ ಪರಿಚಯವಿತ್ತು. ಆದರೆ ನಾನೇ ಅವರೊಂದಿಗೆ ಓದಿದ ಯತಿರಾಜ್ ಎಂ.ವಿ. ಎಂದು ಗೊತ್ತಿರಲಿಲ್ಲವಂತೆ! ಏಕೆಂದರೆ ನನ್ನ ಮುಖವು ವಿಪರೀತವಾಗಿ ಮಾರ್ಪಾಡಾಗಿತ್ತು!
Comments
Post a Comment