ಯತಿ ಸ್ವಂತೀ -173
22-06-2018
ಪಿ.ಯು.ಸಿ. ಎರಡನೇ ವರ್ಷದ ಪರೀಕ್ಷೆ ಮುಗಿಯಿತು. ಹೆಚ್ಚು ನೆನಪಿಲ್ಲ ಆಗಿನ ಅನುಭವಗಳು. ಹ್ಞಾಂ... ಓದಿದ ಪುಸ್ತಕಗಳ ನೆನಪುಂಟು ಅಷ್ಟೇ.
ಅಂತೂ ಪರೀಕ್ಷೆ ಮುಗಿಸಿ ಹೊರಬಂದಿದ್ದೆ. ಮೈಸೂರಿನಲ್ಲಿದ್ದಾಗ ರಜೆ ಬಂದೊಡನೆ ಬೆಂಗಳೂರಿಗೆ ಹೋಗುವ ತಹತಹವಿತ್ತು. ಈಗ ಮೈಸೂರಿಗೆ, ನಮ್ಮಮ್ಮನ ಬಳಿಗೆ ಹೋಗುವ ಕಾತರವಿತ್ತು.
ಇಂಜಿನಿಯರಿಂಗ್ ಕಾಲೇಜಿಗೆ ಸೇರು ಎಂದು ಅಪ್ಪಣೆ ಆಗಿತ್ತಲ್ಲ! ಅದಕ್ಕೆ ಮತ್ತ ಬೇಗನೆ ಬೆಂಗಳೂರಿಗೆ ಬಂದು ಅರ್ಜಿಪತ್ರ ಪಡೆಯಬೇಕಿತ್ತು.
ಹೊಸದಾಗಿ ಡೈರೆಕ್ಟರ್ ಆಫ್ ಟೆಕ್ನಿಕಲ್ ಎಡುಕೇಷನ್ ಬಿಲ್ಡಿಂಗ್ ಮಹಾರಾಣೀಸ್ ಕಾಲೇಜ್ ಎದುರಿಗೆ ಕಟ್ಟಲ್ಪಟ್ಟಿತ್ತು.
1972ರ ವರೆಗೆ ಕೇಳುವವರಿಲ್ಲದ ಇಂಜಿನಿಯರಿಂಗ್ ಕೋರ್ಸ್‍ಗೆ 1973ರಿಂದ ಸಂದಣಿ ಹೆಚ್ಚಿತ್ತು. ನಾನು ಸೇರಿದ್ದು 1974ರಲ್ಲಿ. ಅಷ್ಟು ಹೊತ್ತಿಗೆ ಸಾಕಷ್ಟು ರಷ್ ಆಗಿತ್ತು.
ಮೈಸೂರಿಗೆ ಬಂದೆ. ನಮ್ಮ ಅಮ್ಮ, ‘ರಾಜು, ನೀನೇನೂ ಹೆಚ್ಚು ಬುದ್ಧಿವಂತನಲ್ಲ. ಓದುವುದೂ ಇಲ್ಲ, ಒಳ್ಳೆಯ ಮಾರ್ಕ್ಸ್ ಕೂಡ ತಗೊಳ್ಳೋದಿಲ್ಲ. ಟೈಪಿಂಗ್ ಕಲಿತ್ಕೋ. ಕಡೇ ಪಕ್ಷ ಎಲ್ಲಾದರೂ ಟೈಪಿಸ್ಟ್ ಕೆಲಸಕ್ಕೆ ಸೇರಿಕೊಳ್ಳಬಹುದು’ ಎಂದು ನನ್ನನ್ನು ಟೈಪಿಂಗ್ ಸೇರಲು ಓಡಿಸಿದರು.
ಹಾಗೆ ನಾನು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಕಾಮರ್ಸ್ ಸೇರಿಕೊಂಡೆ. ನಮ್ಮ ಮನೆಯಿಂದ ರೈಲ್ವೇ ನಿಲ್ದಾಣ ದಾಟಿ, ಇರ್ವಿನ್ ರಸ್ತೆ, ಧನ್ವಂತ್ರಿ ರಸ್ತೆಯಲ್ಲಿ ನಡೆದು, ಸಯ್ಯಾಜಿರಾವ್ ರೋಡಿನಲ್ಲಿ ಚಾಮುಂಡೇಶ್ವರಿ ಟಾಕೀಸ್ ಮುಂದೆ ಹೋಗಿ ಮತ್ತೆ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಪ್ರಭಾ, ಒಲಂಪಿಯಾ ಟಾಕೀಸುಗಳ ನಡುವೆ ಮಹಡಿಯ ಮೇಲೆ ಇತ್ತು ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಕಾಮರ್ಸ್.
ನನ್ನ ಹೈಸ್ಕೂಲ್ ಸಹಪಾಠಿ ದಿವಾಕರ ಅವರ ತಂದೆಯವರ ಇನ್ಸ್‍ಟಿಟ್ಯೂಟ್ ಅದು. ಆ್ಯಕುರಸಿ ಫಸ್ಟ್, ಸ್ಪೀಡ್ ನೆಕ್ಸ್ಟ್ ಎನ್ನುವ ಮಂತ್ರವನ್ನು ಟೈಪಿಂಗ್‍ಗಾಗಿ ನಮ್ಮ ಪ್ರಿನ್ಸಿಪಾಲ್ ಕಲಿಸಿದರೂ, ಅದು ನಮ್ಮ ಜೀವನಕ್ಕೇ ಅನ್ವಯ ಆಗುವಂತಹ ಮಾತುಗಳು. ಮೊದಲು ಪರಿಪೂರ್ಣರಾಗೋಣ, ಆಮೇಲೆ ಜೀವನದಲ್ಲಿ ದೌಡಾಯಿಸೋಣ ಅಲ್ಲವೇ?
ಇಂಗ್ಲೀಷ್ ಜ್ಯೂನಿಯರ್ ಪಾಸ್ ಮಾಡಿದೆ ಸೆಕೆಂಡ್ ಕ್ಲಾಸ್‍ನಲ್ಲಿ. ನಂತರ ಸೀನಿಯರ್‍ಗೆ ಸೇರಿಕೊಂಡೆ. ಅದರ ಕಥೆ ಮುಂದೊಂದು ದಿನ.
ಸರಿ, ಮತ್ತೆ ಬೆಂಗಳೂರಿಗೆ ವಾಪಸ್ಸಾದೆ.
ಇಂಜಿನಿಯರಿಂಗ್ ಸೀಟ್‍ಗಾಗಿ ಅರ್ಜಿ ಗುಜರಾಯಿಸಿದೆ.
ಕೇವಲ ಎರಡು ವರ್ಷಗಳಿಂದ ಈ ಸೀಟು ಹಂಚಿಕೆಯನ್ನು ಸೆಂಟ್ರಲೈಜ್ ಮಾಡಿದ್ದರು.
ಹಾಗಾಗಿ ನನ್ನ ಕಾಲೇಜು ಆಪ್ಶನ್ ಕೇವಲ ಯು.ವಿ.ಸಿ.ಇ. ಬೆಂಗಳೂರು ಎಂದು ನೀಡಿದ್ದೆ. ಏಕೆಂದರೆ ನನ್ನ ತಂದೆ ಇನ್ನು ಮೂರು ವರ್ಷಗಳಿಗೆ ನಿವೃತ್ತಿ ಹೊಂದುವವರಿದ್ದರು. ಬೇರೆ ಯಾವ ಕಾಲೇಜಿಗೆ ಹೋಗುವುದಕ್ಕೂ ನನ್ನ ಬಳಿ ಹಣವಿರಲಿಲ್ಲ.
ನನ್ನ ಅಂಕಲ್, ಆಂಟಿ ನನಗೆ ನೆಲೆ ಕೊಟ್ಟು ಊಟ ಹಾಕುತ್ತಿದ್ದರು. ಅದೇ ನನಗೆ ದೊಡ್ಡ ಉಪಕಾರ.
ಇಂಟರ್‍ವ್ಯೂ ಪತ್ರ ಬಂದಿತು. 165 ನನ್ನ ಇಂಟರ್‍ವ್ಯೂ ನಂಬರ್. ಮೊದಲ ದಿನವೇ ನನ್ನ ಇಂಟರ್‍ವ್ಯೂ.
ಖುಷಿಯಾಗಿ ಹೋದೆ. ಸೀಟು ಸಿಕ್ಕೇಬಿಟ್ಟಿತು ಎನ್ನುವಂತಹ ಫೀಲಿಂಗು. ಆದರೆ ಅದಕ್ಕೆ ಪಟ್ಟ ಪಾಡು..!
-0-0-0-
Comments
Post a Comment