ಯತಿ ಸ್ವಂತೀ -172
21-06-2018
ಒಂದು ನೆನಪು.
ವೇದಿಕೆಯ ಮೇಲೆ ನಾಟಕ, ನೃತ್ಯ ಮಾಡಿದ ಸಂಗತಿ.
ಒಮ್ಮೆ ನಮ್ಮ ಕಮ್ಯೂನಿಟಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ನೇಪಾಳಿ ನೃತ್ಯ ಮಾಡಲು ಕೆಲವರು ಯೋಜಿಸಿದರು. ಅದರಲ್ಲಿ ಒಂದು ಗಂಡು ಹೆಣ್ಣು ಜೋಡಿಯ ಡ್ಯಾನ್ಸ್‌ನಲ್ಲಿ ನನ್ನ ಜೊತೆಗೆ ಒಬ್ಬರು ಡಾಕ್ಟರಮ್ಮ! ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ದೈಶೈಲಾ ತಸ್ವೀರ್... ಅಂತ ಆ ಹಾಡಿನ ಆರಂಭ. ಅಭ್ಯಾಸ ಮಾಡುವಾಗ ನನಗೆ ಸಿಕ್ಕಾಪಟ್ಟೆ ನಾಚಿಕೆ. ಆ ಡಾಕ್ಟರ್ ಸೊಂಟದ ಮೇಲೆ ಕೈಯಿಟ್ಟು ಕುಣಿಯಬೇಕಿತ್ತು! ಹೇ ನನ್ನ ಗಂಡ ಇಲ್ಲಿ ಕೂತಿದ್ದಾನೇಂತ ಸಂಕೋಚ ಬೇಡ. ನಾವು ಕೇವಲ ಪಾತ್ರಗಳು ಎಂದು ರೇಗಿಸಿದರು ಆಕೆ.
ಹತ್ತನೆ ತರಗತಿಯಲ್ಲಿಯೇ ದಾಶರಥಿ ದೀಕ್ಷಿತ್ ಅವರ ಅಳಿಯ ದೇವರು ನಾಟಕದಲ್ಲಿ ನಾನು ಆ ಮೂವರು ಅಳಿಯಂದಿರ ಭಾವಮೈದ. ಪ್ರಹ್ಲಾದನ ವೇಷ ನನ್ನದು. ಮೊದಲ ಭಾವ ಹಿರಣ್ಯ ಕಶಿಪು. ಎಲ್ಲರ ಡಯಲಾಗ್ ನನಗೆ ಕಂಠಪಾಠ ಆಗಿದ್ದರಿಂದ ಎಲ್ಲರಿಗೂ ನಾನೇ ಪ್ರಾಂಪ್ಟರ್ ಆಗಿದ್ದೆ.
ಕಂ ಸೆಪ್ಟೆಂಬರ್ ಟೈಟಲ್ ಸಾಂಗ್ ಸೂಪರ್. ಅದರ ನಕಲು ಒಂದು ಹಿಂದೀ ಹಾಡಿಗೆ ಮಾಧುರಿ ದೀಕ್ಷಿತ್ ನೃತ್ಯ ಮಾಡಿದ್ದಾಳೆ. ನಾನು, ನನ್ನ ತಂಗಿ ಇದಕ್ಕೆ ಟ್ವಿಸ್ಟ್ ಡ್ಯಾನ್ಸ್ ಮಾಡಿದ್ದೆವು. ಗೀತ್‌ಮಾಲಾದ ಸಿಗ್ನೇಚರ್ ಟ್ಯೂನ್ ಒಂದು ಸ್ಪ್ಯಾನಿಷ್ ಜಿಪ್ಸಿ ಹಾಡು. ಅದರಲ್ಲಿ ನಾನು ಫ್ಯಾಂಟಮ್ ವೇಷಧಾರಿ. ನನ್ನ ಮೇಲೆತ್ತಿದ ಬಲಗೈಯಲ್ಲಿ ನಾಲ್ಕು ಉದ್ದದ ರಿಬ್ಬನ್‌ಗಳು. ಅವನ್ನು ಹಿಡಿದು ನನ್ನ ಸುತ್ತಲೂ ಸ್ಪೇನಿನ ಕೊರವಂಜಿ ವೇಷದಲ್ಲಿದ್ದ ನಾಲ್ವರು ಹುಡುಗಿಯರು ನರ್ತಿಸುತ್ತಾ ತಿರುಗುತ್ತಿದ್ದರು. ಅವರಲ್ಲಿ ಒಬ್ಬಳು ನನ್ನ ತಂಗಿ. ಆಗ ನನ್ನ ಸುತ್ತ ನರ್ತಿಸಿದ್ದ ಮತ್ತೊಬ್ಬ ಹುಡುಗಿ (!) ಅನೇಕ ದಶಕಗಳ ನಂತರ ಭೇಟಿ ಆದಾಗ, ನಾನಾರೆಂದು ಗುರುತಿಸಿದ ನಂತರ ಜ್ಞಾಪಕ ಇದೆಯಾ ಎಂದಳು. ಲಲಲಾ ಲಲಲ ಲಲಲ ಲಲಲಾ ಅಂತ ಹೇಳಿದಾಗ ನಕ್ಕಳು.
ಗಂಡ್ಸಲ್ವೇ ಗಂಡ್ಸು ನಾಟಕದಲ್ಲಿ ನನ್ನ ತಂಗಿ ಒಬ್ಬ ಹಟಮಾರಿ. ನಾನು ಅವಳಿಗೆ ಬುದ್ಧಿ ಕಲಿಸುವ ಪಾತ್ರ. ರೈಲ್ವೆ ಕ್ಲಬ್ ಯಾದವಗಿರಿಯಲ್ಲಿ ಅಭಿನಯಿಸಿದೆವು. ವಿವರ ನೆನಪಿಲ್ಲ.
ಟ್ಯಾಲಿ ಕಂಪೆನಿಯಲ್ಲಿ ಶಮ್ಮಿ ಕಪೂರ್ + ರಫಿ ಹಾಡುಗಳಿಗೆ, ಮುಖೇಶ್ ಹಾಡುಗಳಿಗೆ ನರ್ತಿಸಿದ್ದೆ. ಮಂಜುನಾಥ್ ಅವರ ಸಮಾರಂಭದಲ್ಲಿ ಮತ್ತೆ ಮುಖೇಶ್ ಹಾಡುಗಳಿಗೆ ಒಂದು ನೃತ್ಯ ಹಾಗೂ ಮಧುರ ಹಿಂದೀ ಹಾಡುಗಳಿಗೆ ಮತ್ತೊಂದು ನೃತ್ಯ ಮಾಡಿದ್ದೆ.
Comments
Post a Comment