ಯತಿ ಸ್ವಂತೀ -169


18-06-2018 

ನನ್ನ ಅಮ್ಮನ 'ಅಶ್ವಹೃದಯ' ಪರಿಚಯ! 
ಮೈಸೂರು ಟಾಂಗ ಬಹಳ ಜನಪ್ರಿಯ ಒಂದು ಕಾಲದಲ್ಲಿ. ನಮಗೆ ಅದರಲ್ಲಿ ಹೋಗೋದೇ ಒಂದು ಖುಷಿ. 
ನನ್ನ ತಂದೆ ಮೈಸೂರು ದಕ್ಷಿಣದ ಅಶೋಕಪುರಂನಲ್ಲಿ ರೈಲ್ವೆ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಎನ್ ಐ ಈ ಸೇರಿದಾಗ 1974ರಲ್ಲಿ ಕೆಲವು ತಿಂಗಳುಗಳ ಕಾಲ ಅವರೊಂದಿಗೆ ರೈಲುಗಾಡಿಯಲ್ಲಿ ಹೋಗಿ ಅಶೋಕಪುರಂನಲ್ಲಿ ಇಳಿದು ಕಾಲೇಜಿಗೆ ಸುಮಾರು ಒಂದು ಕಿಲೋಮೀಟರ್ ನಡೆಯುತ್ತಿದ್ದೆ. ಅಪ್ಪ (ನಾವು ನಮ್ಮ ತಂದೆಯವರನ್ನು ಅಯ್ಯ ಎಂದು ಕರೆಯುತ್ತಿದ್ದೆವು) ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಐದೂವರೆಗೆ ಹಿಂದಿರುಗುತ್ತಿದ್ದರು. ಸ್ವಾಭಾವಿಕವಾಗಿ ಅಮ್ಮ ಅಡುಗೆ ಮಾಡಿ ಮುಗಿಸಿ ದೇವರಾಜ ಮಾರುಕಟ್ಟೆಗೆ ಅಕ್ಕಪಕ್ಕದ ಮನೆಯ ಅವರ ಗೆಳತಿಯರೊಂದಿಗೆ ಹೋಗುತ್ತಿದ್ದರು. ನಾವು ಚಿಕ್ಕವರಿದ್ದಾಗ ನಮ್ಮನ್ನು ನಮ್ಮ ಮನೆಗೆ ಅಂಟಿಕೊಂಡಿದ್ದ ಕ್ವಾರ್ಟ್ರಸ್ ಮನೆಯಲ್ಲಿದ್ದ ಬೂಬಮ್ಮನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. 
ಒಮ್ಮೆ ನಾನು ಅಮ್ಮನ ಜೊತೆ ಹೋದೆ. ನನಗಾಗ ಹತ್ತು ವರ್ಷಗಳಿರಬಹುದು. ದೇವರಾಜ ಮಾರುಕಟ್ಟೆಯಲ್ಲಿ ತರಕಾರಿ ಇತ್ಯಾದಿ ಕೊಂಡು ಅದರ ದಕ್ಷಿಣದ ಕೊನೆಗಿದ್ದ ಚಿಕ್ಕ ಗಡಿಯಾರದ ಬಳಿ ಬಂದೆವು. ಅಲ್ಲಿ ಸಾಲಾಗಿ ಟಾಂಗಾಗಳು ನಿಂತಿದ್ದವು. ಮಧ್ಯಾಹ್ನ ಒಂದೂವರೆ ಇರಬಹುದು. ಅಮ್ಮ ಅಲ್ಲಿ ಮೊದಲು ಕಂಡ ಟಾಂಗ ಹತ್ತಲಿಲ್ಲ. ಎರಡು ಮೂರು ಜನರನ್ನು ವಿಚಾರಿಸಿದರು. ಬಾಡಿಗೆ ಅಲ್ಲ ಆ ಟಾಂಗ ಸಾಹೇಬನ ಮನೆ ಎಲ್ಲೆಂದು! ನನಗೆ ಆಶ್ಚರ್ಯ. ಇದೇನು? 
ಕೊನೆಗೆ ಒಂದು ಟಾಂಗ ಗಾಡಿ ಹತ್ತಿದೆವು. ರೈಲ್ವೆ ಸ್ಟೇಶನ್ ದಾಟಿ ಪೆಟ್ರೋಲ್ ಬಂಕ್ ಸ್ಟಾಪ್ ಆದ ಮೇಲೆ ಎಲ್ಲೈಸಿ ಮತ್ತು ಮೆಡಿಕಲ್ ಕಾಲೇಜು ಲೇಡೀಸ್ ಹಾಸ್ಟೆಲ್ ಸಿಎಫ್ಟಿಆರ್ ಐ ಮುಂದೆ ಭಯಂಕರ ಅಪ್ ಇದೆ. ಕುದುರೆ ನಾಗಾಲೋಟದಲ್ಲಿ ಆ ರಸ್ತೆಯಲ್ಲಿ ಓಡಿ ನಮ್ಮನ್ನು ಮನೆ ತಲುಪಿಸಿತು. ಅಮ್ಮ ಆಗ ಹೇಳಿದರು 'ನೋಡು ರಾಜೂ. ನಾವೀಗ ಬಂದಿದ್ದು ಒಂಟಿಕೊಪ್ಪಲ್ ಕುದುರೆ ಕಟ್ಟಿದ ಟಾಂಗಾದಲ್ಲಿ. ಅದಕ್ಕೆ ಮಧ್ಯಾಹ್ನ ಹಸಿವಾಗಿರೋದ್ರಿಂದ ವೇಗವಾಗಿ ಈ ರಸ್ತೆಯಲ್ಲಿ ಓಡಿತು. ಅದೇ ಸಿಟಿ ಕಡೆ ಮನೆ ಇರೋವ್ರ ಕುದುರೆ ಆ ಅಪ್ ಹತ್ತಕ್ಕೆ ಕಷ್ಟ ಪಡುತ್ತಿತ್ತು' ಅಂದರು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102