ಯತಿ ಸ್ವಂತೀ -168



17-06-2018

ಆಡುತ್ತಾ ಓಡುತ್ತಾ ಮೊದಲ ಪಿ.ಯು.ಸಿ. ಪರೀಕ್ಷೆ ಬಂದೇಬಿಟ್ಟಿತು.

ಪಾಠ ಓದುವಿಕೆಯು ರಾತ್ರಿಯೆಲ್ಲಾ ನಡೆಯುತ್ತಿತ್ತು. ಅಂದರೆ ಮಾಮೂಲಾಗಿ ರಾತ್ರಿ ಹತ್ತೂವರೆ ವರೆಗೆ ಓದುತ್ತಿದ್ದವನು ರಾತ್ರಿ ಒಂದು ಗಂಟೆ, ಒಂದೂವರೆ ವರೆಗೆ ಓದತೊಡಗಿದೆ.

ಎಲ್ಲವೂ ಚೆನ್ನಾಗಿ ಓದಿದ್ದರೂ, ಕನ್ನಡದಲ್ಲಿ ಮಾತ್ರ 49 ಬಂದುಬಿಟ್ಟಿತು!

ಉಳಿದ ಎಲ್ಲ ವಿಷಯಗಳಲ್ಲೂ 64% ಇತ್ತು.

ಕನ್ನಡ ಮೇಷ್ಟ್ರು ಎಚ್ ಎಸ್ ರಾಘವೇಂದ್ರರಾವ್ ‘ಯತ್ರಾಜಾ, ನಾನು ಚೆನ್ನಾಗಿ ಮಾರ್ಕ್ಸ್ ತಗೊಳ್ತಾರೆ ಅಂದುಕೊಂಡಿದ್ದವರಲ್ಲಿ ನೀನೊಬ್ಬನೇ ಕಡಿಮೆ ತಗೊಂಡಿರೋದು’ ಅಂದುಬಿಟ್ಟರು.

ಅಷ್ಟು ಹೊತ್ತಿಗೆ ಅವರೆಂದರೆ ಭಯ, ಭಕ್ತಿ ಜೊತೆಗೆ ಸಲಿಗೆ ಕೂಡ ಇತ್ತು. ‘ಹೋಗಿ ಸಾರ್, ಈ ಕಾಂಪೋಜಿಷನ್ ಬರೆಯೋಕ್ಕೆ ಯಾರಿಗೆ ಆಗತ್ತೆ? ಅಷ್ಟಷ್ಟು ಬರೆಯೋದು ನನಗೆ ಆಗಲ್ಲ’ ಅಂದುಬಿಟ್ಟಿದ್ದೆ.

ಮೊದಲ ಪಿ.ಯು.ಸಿ.ಯಲ್ಲಿ ಪ್ರಬಂಧ ಬರೆಯುವುದು ಹೆಚ್ಚಾಗಿತ್ತು. ಬರೆದು ಕೈ ನೋವು ಬಂದು ಎಷ್ಟು ಬೇಕೋ ಅಷ್ಟೇ ಬರೆದಿದ್ದೆ.

ಈಗ ನನ್ನ ಮಾತುಗಳು ನನಗೇ ನಗು ತರಿಸುತ್ತವೆ. ಕಾದಂಬರಿಗಳನ್ನು, ಕಥೆಗಳನ್ನು ಕೆಲವು ವರ್ಷಗಳ ಕಾಲ ಕಾಗದದ ಮೇಲೆ ಪೆನ್ನಿನಿಂದ ಬರೆಯುತ್ತಿದ್ದೆ. ಮೇಷ್ಟರಿಗೆ ‘ಹೋಗಿ ಸಾರ್’ ಎಂದಿದ್ದು ಈಗ ಉಲ್ಟಾ ಆಗಿದೆ. ಅಫ್ ಕೋರ್ಸ್, ನಾನು ಬರೆದ ಕಾದಂಬರಿ ‘ಚಿರಸ್ಮಿತ’ಗೆ ಎಚ್ಚೆಸ್ಸಾರ್ ಸರ್ ಮುನ್ನುಡಿ ಬರೆದಿದ್ದು ನನ್ನ ಸುಕೃತ. ಇದರ ಕಥೆ ಆಮೇಲೆ.

ಕಾಲೇಜಿನಲ್ಲಿ ಇಂಟರ್‍ಕೊಲೀಜಿಯೇಟ್ ಕನ್ನಡ ಮತ್ತು ಹಿಂದೀ ಹಾಡುಗಳ ಗಾಯನ ಸ್ಪರ್ಧೆ ಇರುತ್ತಿತ್ತು.

ಎಚ್ ಎನ್ ಮೀರಾ ಎನ್ನುವ ಹೆಸರು ನೆನಪಿದೆ. ವಿರಹಾ ನೋವು ನೂರು ತರಹಾ ಮತ್ತು ಜೋಕೆ ನಾನು ಬಳ್ಳಿಯ ಮಿಂಚು ಹಾಡಿದ್ದರು. ಬಹುಮಾನ ಗೆದ್ದಿದ್ದರು. ಅವರು ಮುಂದೊಂದು ದಿನ ನಮ್ಮ ಕಿರ್ಲೋಸ್ಕರ್ ಕಾಲೋನಿಯ ಮನೆಯ ಬಳಿ ಶಂಕರಮಠದಲ್ಲಿ ಶಾಸ್ತ್ರೀಯ ಸಂಗೀತ ಹಾಡಲು ಬಂದಿದ್ದಾಗ ಗುರುತಿಸಿ ಮಾತನಾಡಿಸಿದ್ದು ನೆನಪಿದೆ.

ಒಂದು ಥರಾ ಚಿನ್ನದ ಜೀವನ ಅದು. ಜವಾಬ್ದಾರಿ ಇಲ್ಲ. ಕಿಶೋರಾವಸ್ಥೆಯ ದಿನಗಳು. ನಮ್ಮ ಕಾಲೇಜಿನಲ್ಲಿನ ಒಂದು ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದಾಗ ಸಹಪಾಠಿ ಹುಡುಗಿಯರು ಬಂದು ಮಾತನಾಡಿಸಿದಾಗ ಏನೋ ಸಂಕೋಚ, ಏನೋ ಸಂತೋಷ, ಏನೋ ಉಲ್ಲಾಸ ಈ ದಿನ ಅನ್ನಿಸಿತ್ತು!

ಕಾಲೇಜಿನಲ್ಲಿ ಒಮ್ಮೆ ಯಾವುದೋ ಚುನಾವಣೆ. ಇಬ್ಬರೇ ಇದ್ದರು ಸ್ಪರ್ಧೆಯಲ್ಲಿ. ಅವರಲ್ಲೊಬ್ಬ ನನ್ನನ್ನು ಬಲವಂತವಾಗಿ ನಿಲ್ಲಿಸಿದನೆಂದು ನೆನಪು. ನೀನೇ ಗೆಲ್ಲುವೆ ಎಂದಿದ್ದರು ಎಲ್ಲ. ಆದರೆ ನಾನು ಆ ಇಬ್ಬರಲ್ಲಿನ ಕಮ್ಮಿ ಜನಪ್ರಿಯನ ಕೈಗೊಂಬೆಯಾಗಿದ್ದೆ.

ಕೊನೆಯ ದಿನ ನನ್ನ ಕ್ಯಾಂಡಿಡೆಸಿಯನ್ನು ಮರಳಿ ಪಡೆದಿದ್ದೆ. ಆ ಕಮ್ಮಿ ಜನಪ್ರಿಯನೇ ಗೆದ್ದಿದ್ದ.

ನನ್ನನ್ನು ಬೈದವರೆಷ್ಟು ಜನವೋ!

ನನಗೆ ನೆನಪಿರುವ ಮಟ್ಟಿಗೆ ಪಿ.ಯು.ಸಿ. ಫಸ್ಟ್ ಯಿಯರ್ ಪರೀಕ್ಷೆ ಆದ ನಂತರ ಪ್ರಾಕ್ಟಿಕಲ್ ಪರೀಕ್ಷೆಗೆ ಮುಂಚೆ ನನಗೆ ಎಷ್ಟು ಹೊತ್ತಾದರೂ ನಿದ್ರೆ ಬರುತ್ತಿರಲಿಲ್ಲ.

ಆಗೆಲ್ಲಾ ನನ್ನ ಫಸ್ಟ್ ಪಿಯುಸಿ ಫಿಸಿಕ್ಸ್ ಪುಸ್ತಕವನ್ನು ಕೈಗೆತ್ತಿಕೊಂಡು ಓದಲುಪಕ್ರಮಿಸುತ್ತಿದ್ದೆ.

ಪುಸ್ತಕ ಟಪ್ ಎಂದು ಪಕ್ಕಕ್ಕೆ ಬಿದ್ದು ನಾನು ನಿದ್ರಾದೇವಿಯನ್ನು ಆಲಿಂಗಿಸುತ್ತಿದ್ದೆ!
                        -0-0-0-0-0 -


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102