ಯತಿ ಸ್ವಂತೀ -166



15-06-2018

ಜೇಮ್ಸ್ ಹ್ಯಾಡ್ಲಿ ಛೇಸ್ ಜೊತೆಗೆ ಅರ್ಲ್ ಸ್ಟ್ಯಾನ್ಲಿ ಗಾರ್ಡನರ್ ಅವರ ಪೆರಿ ಮೇಸನ್ ಎಂಬ ಲಾಯರನ ಕಥೆಗಳನ್ನು ಕೆಲವು ಓದಿದೆ. ಏಕೋ ಅಷ್ಟೊಂದು ಹಿಡಿಸಲಿಲ್ಲ. ಒಳ್ಳೆಯ ವಿಟ್ ಇದ್ದ ಪುಸ್ತಕಗಳು. ಅವನ ಡೆಲಾ ಸ್ಟ್ರೀಟ್ ಎಂದರೆ ಮಹಾ ಸುಂದರಿ ಎಂಬ ಊಹೆ ನನಗೆ ಬಂದಿತ್ತು.

ಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಷೆರ್ಲಾಕ್ ಹೋಮ್ಸ್ ಮತ್ತು ಅಗಾಥಾ ಕ್ರಿಸ್ಟೀಯ ಹರ್ಕ್ಯೂಲ್ ಪಾಯ್ರೋ ನನ್ನ ಇನ್ನಿಬ್ಬರು ಫೇವರಿಟ್ ಪಾತ್ರಗಳು.

ಜೊತೆ ಜೊತೆಗೆ ನನ್ನ ಕಾಲೇಜು ಓದುವಿಕೆ ಮುಂದುವರಿದಿತ್ತು. ಸದಾ ಗೆಳೆಯರೊಂದಿಗೆ ಆಟ ಆಡುತ್ತಾ ಮೈಸೂರಿನಲ್ಲಿ ಕಾಲ ಕಳೆದವನಿಗೆ ಇಲ್ಲಿ ಹೆಚ್ಚು ಸ್ನೇಹಿತರಿರಲಿಲ್ಲ.

ಬಿ.ಕೆ.ಅರುಣ್ ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ಚರ್ಚೆ ನಡೆಯುತ್ತಿತ್ತು. ಸಿನಿಮಾಗಳಿಗೆ ಹೋಗುವುದೂ ಅವನೊಂದಿಗೇ ನಡೆಯುತ್ತಿತ್ತು.

ಹರೀಶ ಎನ್ನುವ ಹುಡುಗ ಒಬ್ಬ ಹೆಚ್ಚಿನ ಪರಿಚಯವಾದ. 13ನೇ ಮೆಯ್ನ್‍ನಲ್ಲಿದ್ದ ಅವನ ಮನೆಗೆ ಹೋಗುತ್ತಿದ್ದೆ.

ಅವನ ದೊಡ್ಡಮ್ಮನ ಪತಿ ಜನಪ್ರಿಯ ನಟ ಕೆ.ಎಸ್.ಅಶ್ವತ್ಥ್‍ರವರು.

ಎರಡು ವರ್ಷಗಳ ಹರೀಶನೊಂದಿಗಿನ  ಒಡನಾಟದ ನಂತರ ಮೈಸೂರಿಗೆ ಬಂದೆ.

ಆ ನಂತರ ಹರೀಶ ಇನ್ನಿಲ್ಲ ಎಂಬ ಸುದ್ದಿ ಕೇಳಿ ವ್ಯಥೆಯಾಯಿತು.

ಆಲೋಚಿಸಿದರೆ, ಪ್ರೈಮರಿ ಶಾಲೆಯ ಸಹಪಾಠಿ ಶ್ರೀನಿವಾಸ ರಂಗಾಚಾರ್ ಮತ್ತು  ಕೃಷ್ಣಮೂರ್ತಿ, ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಸಹಪಾಠಿ ಶ್ರೀಧರ್, ಪಿ.ಯು.ಸಿ. ಸಹಪಾಠಿ ಹರೀಶ, ಇಂಜಿನಿಯರಿಂಗ್ ಸಹಪಾಠಿಗಳಾದ ಓಡೋ ತಿಮ್ಮಯ್ಯ ಮತ್ತು ಅರುಣ್ ಕಾಗಲ್ಕರ್ ... ಛೇ ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಎನಿಸುತ್ತದೆ. ಬಾಳಿ ಬದುಕಬೇಕಾದವರು ಇಲ್ಲದೇ ಹೋಗಿಬಿಟ್ಟರಲ್ಲಾ...

ಕಾಲೇಜು ಯಥಾಪ್ರಕಾರ. ಶನಿವಾರ ಭಾನುವಾರಗಳಂದು ಮೊದಮೊದಲು ಸುಬ್ರಹ್ಮಣ್ಯನಗರಕ್ಕೆ ಹೋಗುತ್ತಿದ್ದೆ. ಆ ನಂತರ ಮೊದಲ ಪಿ.ಯು.ಸಿ. ಯಲ್ಲಿ ಎನ್‍ಸಿಸಿ ಸೇರಿದೆ. ನನಗೋ ಷರ್ಟ್ ಟಕ್ ಇನ್ ಮಾಡುವುದೆಂದರೆ ಅಲರ್ಜಿ. ಆದರೆ ವಿಧಿಯಿಲ್ಲ. 

ಮರುವರ್ಷ ನ್ಯಾಷನಲ್ ಸೋಷಿಯಲ್ ಸರ್ವೀಸ್‍ಗೆ ಸೇರಿಕೊಂಡೆ. ಏನು ಮಾಡಿದೆವು? ಬಹುಶಃ ಕಳೆ ಕೀಳುವುದು, ಮರ ನೆಡುವುದು ಮಾಡಿರಬಹುದು. ನೆನಪಿಲ್ಲ.

ನನ್ನ ಸೋದರತ್ತೆಯ ಮನೆಯಲ್ಲಿ ನಾನು, ಅಂಕಲ್, ಸೋದರತ್ತೆ ಮೂವರೇ.

ಅಂಕಲ್ ಎಚ್ ಎ ಎಲ್‍ನಲ್ಲಿದ್ದರು. ಬೆಳಗ್ಗೆ ಬಸ್‍ನಲ್ಲಿ, ನಂತರ ವ್ಯಾನ್‍ನಲ್ಲಿ, ನಂತರ ಕ್ಯಾಬ್‍ನಲ್ಲಿ ಹೋಗುತ್ತಿದ್ದರು.

ಆಂಟಿ ಮಹಿಳಾ ಸಮಾಜದ ಸದಸ್ಯೆ. ಅವರು ಅನೇಕ ಸಲ ಅಡುಗೆ ಮಾಡಿಟ್ಟು ಬೀಗ ಹಾಕಿಕೊಂಡು ಸಮಾಜಕ್ಕೆ ಹೊರಟುಹೋಗುತ್ತಿದ್ದರು. 

ನಾನು ಮನೆಗೆ ಬಂದು, ಮನೆಯ ಮುಂದಿದ್ದ ಅಪಾರವಾಗಿದ್ದ ಕುಂಡಗಳಲ್ಲಿ ಒಂದಾದ ದಟ್ಟವಾಗಿ ಬೆಳೆದಿದ್ದ ಫರ್ನ್ ಕುಂಡದಿಂದ ಮನೆಯ ಬೀಗದ ಕೈ ತೆಗೆದುಕೊಂಡು ಮನೆಯೊಳಗೆ ಹೋಗುತ್ತಿದ್ದೆ.

ಇತ್ತೀಚೆಗೆ ಅಮೆರಿಕನ್ ಸೀರಿಯಲ್‍ಗಳಲ್ಲಿ ಅವರು ಬೀಗದ ಕೈಯನ್ನು ಅವರ ಮನೆಯ ಮುಂದಿನ ಕಾಲೊರಸಿನ ಅಡಿಯಲ್ಲಿ ಮುಚ್ಚಿಟ್ಟು ಹೋಗುವುದನ್ನು ಕಂಡು ನನಗೆ ನನ್ನ ಜಯನಗರದ ವಾಸದ ನೆನಪಾಯಿತು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102