ಯತಿ ಸ್ವಂತೀ -165
14-06-2018
ಜೇಮ್ಸ್ ಹ್ಯಾಡ್ಲಿ ಛೇಸ್ ಇಂಗ್ಲೆಂಡಿನವನು. ಅದೆಷ್ಟು ಚೆನ್ನಾಗಿ ಅಮೆರಿಕನ್ ಸಂಸ್ಕøತಿ ಮೈಗೂಡಿಸಿಕೊಂಡನೆಂದರೆ ಅವನ ಕೆಲವು ಕಾದಂಬರಿಗಳಲ್ಲಿ ಬರುವ ಅಮೆರಿಕಾದ ವರ್ಣನೆ ಅಮೋಘ.
ಮಯಾಮಿ ಬಳಿ ಪ್ಯಾರಡೈಸ್ ಸಿಟಿ ಎನ್ನುವ ಒಂದು ನಗರವನ್ನು ಹುಟ್ಟು ಹಾಕಿ ಅಲ್ಲಿ ನಡೆದಿದೆ ಎನ್ನುವಂತಹ ಕಾದಂಬರಿಗಳನ್ನು ಬರೆಯುತ್ತಿದ್ದ.
ಒಂದು ಅಕ್ಷರ ಕೂಡ ಅನಗತ್ಯವಾಗಿ ಇಲ್ಲ ಎನ್ನುವಂತಹ ಬರವಣಿಗೆ. ಬಹುಶಃ ನನಗೂ ಅದೇ ರೀತಿಯ ಶೈಲಿ ಅಂಟಿಕೊಂಡಿದೆ.
ಏಕೆಂದರೆ ನನ್ನ ಕೆಲವು ಕಾದಂಬರಿಗಳಲ್ಲಿ ಹೆಚ್ಚು ಪದಗಳಿಲ್ಲ. ಆದರೆ ಅಬ್ಬಾ... ಎಷ್ಟು ದೊಡ್ಡದು! ಎನಿಸದಿರದು.
ಉದಾಹರಣೆಗೆ ನನ್ನ ಅಸಂಗತ ಕಾದಂಬರಿ ಗಾಥೆ. ಇರುವುದು 160 ಪುಟಗಳಾದರೂ ಬಹಳ ಸ್ಟಫ್ ಅದರಲ್ಲಿ ಇದೆ ಎನಿಸದಿರದು.
ಛೇಸ್‍ಗೆ ಮತ್ತೆ ವಾಪಸ್ ಬರೋಣ. ಮಿಶನ್ ಟು ವೆನಿಸ್ ಓದಿದಾಗ ಅಬ್ಬಾ... ಈ ನಗರವನ್ನೊಮ್ಮೆ ನೋಡಲೇಬೇಕು ಎಂದು ಮೊದಲ ಸಲವೇ ಅನ್ನಿಸಿತು. ಅದು ಸುಮಾರು ನಲವತ್ತರ ದಶಕದ ವೆನಿಸ್ ನಗರ.
ಆ ನಂತರ ಛೇಸ್ ಕಾದಂಬರಿಗಳನ್ನು ಓದುತ್ತಲೇ ಹೋದೆ.
ನೋಚೂರ್ ಲೈಬ್ರರಿಯಲ್ಲಿದ್ದುದನ್ನೆಲ್ಲಾ ಖಾಲಿ ಮಾಡಿದೆ.
ಮೊಟ್ಟ ಮೊದಲನೆಯ ಸಲ ನನ್ನ ದೃಷ್ಟಿಕೋನ ಬದಲಾಯಿತು.
ಅಲ್ಲಿಯವರೆಗೆ ರಾಮಾಯಣ, ಮಹಾಭಾರತ ಮೊದಲುಗೊಂಡು ನಮ್ಮ ಭಾರತೀಯ ಚಿತ್ರಗಳಲ್ಲಿ ಕೂಡ ಎಷ್ಟು ಬೇಗ ಸಾಧ್ಯ ಆಗ ‘ಇಂತಹವರು ಒಳ್ಳೆಯವರು, ಇಂತಹವರು ಕೆಟ್ಟವರು’ ಎನ್ನುವ ಭಾವನೆ ನಮಗೆ ಬರುವಂತೆ ಬರೆಯುತ್ತಿದ್ದರು ಆಗಿನ ಲೇಖಕರು.
ಆದರೆ ಛೇಸ್ ಬರೆದ ಕೆಲವು ಕಾದಂಬರಿಗಳಲ್ಲಿ ನಾಯಕ ಕಳ್ಳತನ ಮಾಡಿದರೂ, ಹಾದರ ಮಾಡಿದರೂ, ಕೊಲೆ ಮಾಡಿದರೂ ಅವನ ಬಗ್ಗೆ ‘ಅಯ್ಯೋ ಪಾಪ!’ ಎನ್ನಿಸಿತ್ತು. ಬಹುಶಃ ಅದು ನನ್ನ ವಯಸ್ಸಿನ ಪ್ರಭಾವವೂ ಇರಬಹುದು. ಎಲ್ಲವನ್ನೂ ‘ರೆಬೆಲಿಯಸ್’ ಆಗಿ ನೋಡುವ ವಯಸ್ಸು.
ಅಥವಾ ಛೇಸ್‍ನ ಬರವಣಿಗೆ ಅಷ್ಟು ಶಕ್ತಿಯುತ. ದ ವೇರಿ ಟ್ರಾನ್ಸ್‍ಗ್ರೆಸರ್, ಶಾಕ್ ಟ್ರೀಟ್‍ಮೆಂಟ್ ಎರಡು ಉದಾಹರಣೆಗಳಷ್ಟೇ.
ಛೇಸ್‍ನ ‘ನೋ ಆರ್ಕಿಡ್ಸ್ ಫಾರ್ ಮಿಸ್ ಬ್ಲ್ಯಾಂಡಿಷ್’ ಓದಿ ಇಬ್ಬರು ಡಾಕ್ಟರೇಟ್ ಪಡೆದಿರುವರೆಂದು ಓದಿದ್ದೆ.
ಬಹುಶಃ ಅದು ಅವನ ಮೊದಲ ಕಾದಂಬರಿ. ಅಪಹೃತಳಾದ ಒಬ್ಬ ಶ್ರೀಮಂತ ಹುಡುಗಿಯ ಕಥೆ ಅದು.
ಛೇಸ್ ಜೊತೆಜೊತೆಗೇ ಆರಂಭಿಸಿದ ಡೆಸ್ಮಂಡ್ ಬ್ಯಾಗ್ಲಿಯ ಕೆಲವು ಪುಸ್ತಕಗಳು ಇಷ್ಟವಾದವು. ಟೈಟ್ ರೋಪ್ ಮನ್, ಗೋಲ್ಡನ್ ಕೀಲ್, ರನ್ನಿಂಗ್ ಬ್ಲೈಂಡ್.
ಆಲಿಸ್ಟೇರ್ ಮ್ಯಾಕ್‍ಲೀನ್ ಬರೆದ ನೈಟ್ ವಿಥೌಟ್ ಎಂಡ್, ವ್ಹೆನ್ ಎಯಿಟ್ ಬೆಲ್ಸ್ ಟಾಲ್, ಪಪೆಟ್ ಆನ್ ಎ ಚೆಯಿನ್ ಚೆನ್ನಾಗಿದ್ದವು. ನೈಟ್ ವಿಥೌಟ್ ಎಂಡ್ 74 ಪುಟ ಓದಿ ಬೋರ್ ಎಂದು ಬಿಸಾಡಿದ್ದೆ. ನನಗೆ ಪುಸ್ತಕ ಪೂರ್ತಿ ಮಾಡದಿದ್ದರೂ, ಕೊನೆಯನ್ನು ಓದುವ ಹಂಬಲವಿಲ್ಲ.
ಅನೇಕರು ಸಸ್ಪೆನ್ಸ್ ಕಾದಂಬರಿಗಳಲ್ಲಿ ಕೊನೆಯ ಪುಟವನ್ನು ಮೊದಲು ಓದುವರಂತೆ! ಅವರಿಗೆ ಆ ಸಸ್ಪೆನ್ಸ್ ತಡೆದುಕೊಳ್ಳಲು ಆಗುವುದಿಲ್ಲವಂತೆ!
Comments
Post a Comment