ಯತಿ ಸ್ವಂತೀ -164
13-06-2018
ನನ್ನ ನಾಲ್ಕನೇ ಸೋದರತ್ತೆಯ ನನಗಿಂತ ಚಿಕ್ಕ ಗಂಡು ಮಕ್ಕಳಿಗೆ ಅವರ ಸೋದರತ್ತೆ ಇಂಗ್ಲಿಷ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು.
ಅವುಗಳ ಶೀರ್ಷಿಕೆಗಳನ್ನು ಕುತೂಹಲದಿಂದ ಓದಿದೆ.
ಐಲ್ಯಾಂಡ್ ಆಫ್ ಅಡ್ವೆಂಚರ್, ಮಿಸ್ಟರಿ ಆಫ್ ದ ಬರ್ನ್ಟ್ ಕಾಟೇಜ್, ಮ್ಯಾಲೊರಿ ಟವರ್ಸ್, ಸೈಂಟ್ ಕ್ಲೇರ್ಸ್, ಹೀಗೆ.
ಎಲ್ಲವೂ ಒಂದೊಂದು ಸರಣಿ. ಯಾರು ಇದರ ಲೇಖಕ? ಎಂದೆ.
ಅವರು ಇಂಗ್ಲಿಷ್ ಪುಸ್ತಕಗಳಲ್ಲಿ ನನಗಿಂತ ಜಾಣರು.
ಲೇಖಕ ಅಲ್ಲ ಲೇಖಕಿ. ಎನಿಡ್ ಬ್ಲೈಟನ್ ಅಂತ ಅಂದರು.
ಅಬ್ಬಾ, ಎಂಟು ಅಡ್ವೆಂಚರುಗಳು, ಹದಿನೈದು ಮಿಸ್ಟರಿಗಳು, ಆರಾರು ಮ್ಯಾಲೊರಿ ಮತ್ತು ಕ್ಲೇರ್ಸ್.
ಇನ್ನೂ ಬರೆದಿದ್ದಾರೆ ಆಕೆ ಸೀಕ್ರೆಟ್ ಸೆವೆನ್ ಮತ್ತು ಫೇಮಸ್ ಫೈವ್ ಸರಣಿಗಳು. ಇವುಗಳಲ್ಲಿ ಅನೇಕವು ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಾಗಿವೆ.
ಒಂದೆರಡು ತಗೊಂಡು ಓದಿದೆ. ಪ್ರತಿ ಪದದ ಅರ್ಥ ಗೊತ್ತಾಗದೇ ಕೇಳುತ್ತಿದ್ದೆ. ಆಗ ನನ್ನ ಮಾವ ಭರದ್ವಾಜ್ ಶಬ್ದಕೋಶ ಕೊಟ್ಟರು.
ಈಗಲೂ ನಾನು ಅನೇಕ ನವ ಲೇಖಕರಿಗೆ ದಯವಿಟ್ಟು ಶಬ್ದಕೋಶ ನೋಡಿ ನಿಮ್ಮ ಪದಪ್ರಯೋಗ ಸರಿ ಇದೆಯೇ ಎಂದು ಪರೀಕ್ಷಿಸಿ ಎನ್ನುತ್ತೇನೆ.
ಈ ಪುಸ್ತಕಗಳನ್ನು ಅದೆಷ್ಟು ಬಾರಿ ಓದಿರುವೆನೆಂದರೆ ಇತ್ತೀಚೆಗೆ ಮತ್ತೆ ಓದಿದೆ ಎಂದರೆ ನೋಡಿಕೊಳ್ಳಿ!
ಅಕ್ಷರಮಾಲೆ ಸಾಹಸಿಗರು ಎಂಬ ಮಕ್ಕಳ ಕಾದಂಬರಿ ಕೂಡ ಸ್ವಲ್ಪ ದೂರ ಬರೆದಿದ್ದೆ.
ಈಕೆ ಬರೆದಿದ್ದು ನಲವತ್ತರ ದಶಕದಲ್ಲಿ. ಎಂತಹ ಅದ್ಭುತ ಸಾಹಸಗಳೆಂದರೆ ಈಗಲೂ ಮಕ್ಕಳು ಇವನ್ನು ಓದಿದರೆ ಚೆನ್ನ ಅನಿಸುತ್ತದೆ.
ಅಫ್ ಕೋರ್ಸ್ ಇವುಗಳಲ್ಲಿ ಟೆಲಿಫೋನ್ ಬಿಟ್ಟರೆ ಬೇರಾವ ಉಪಕರಣಗಳೂ ಇಲ್ಲ.
ಇದೇ ಸಮಯದಲ್ಲಿ ಮನೆಯ ಬಳಿ ನೋಚೂರ್ ಲೈಬ್ರರಿ ಶುರುವಾಯ್ತು. ಅದರ ಮಾಲೀಕ ನನ್ನ ವಯಸ್ಸಿನ ಉದಯಕುಮಾರ್ ಅಥವಾ ಬಾಬು.
ಅವನ ಲೈಬ್ರರಿಯಲ್ಲಿ ಜೇಮ್ಸ್ ಹ್ಯಾಡ್ಲಿ ಛೇಸ್, ಡೆಸ್ಮಂಡ್ ಬ್ಯಾಗ್ಲಿ, ಆಲಿಸ್ಟೈರ್ ಮ್ಯಾಕ್ಲೀನ್, ಅರ್ಲ್ ಸ್ಟ್ಯಾನ್ಲಿ ಗಾರ್ಡನರ್, ಸರ್ ಆರ್ಥರ್ ಕಾನನ್ ಡಾಯ್ಲ್ ಪುಸ್ತಕಗಳಿದ್ದವು.
ಎಲ್ಲವನ್ನೂ ಒಂದೊಂದು ಆರಂಭಿಸಿದೆ. ಛೇಸ್ ನನ್ನ ಮನವನ್ನು ಗೆದ್ದ. ನನ್ನ ಸೋದರಮಾವನ ಬಳಿ ಇದ್ದು ನನಗೆ ಕೊಡದೇ ಇಟ್ಟುಕೊಂಡಿದ್ದ ಮಿಶನ್ ಟು ವೆನಿಸ್ ಕೂಡ ಇತ್ತು.
ಕಂಪಿಸುವ ಕರಗಳಲ್ಲಿ ಹಿಡಿದು ಓದಲಾರಂಭಿಸಿದೆ. ಏನೋ ಒಂದು ರೀತಿಯ ಥ್ರಿಲ್.
ಅರ್ಥವಾಗದಿದ್ದಾಗ ಡಿಕ್ಶನರಿ ತೆರೆದು ಅರ್ಥ ಅರಿಯುತ್ತಿದ್ದೆ. ಕ್ರಮೇಣ ‘ಇದು ಕೋತಿವಿದ್ಯೆ’ ಎನಿಸತೊಡಗಿತು.
ಡೆಸ್ಮಂಡ್ ಬ್ಯಾಗ್ಲಿಯ ದ ಟೈಟ್ ರೋಪ್ ಮನ್ ನನಗೆ ಬಹಳ ಇಂಪ್ರೆಸ್ ಮಾಡಿತು.
ಅದರಲ್ಲಿ ನಾಯಕನನ್ನು ಒಂದು ಅಪರಿಚಿತ ದೇಶಕ್ಕೆ ಒಯ್ದು ಅವನ ರೂಪ, ವಯಸ್ಸು ಬದಲಿಸಿರುತ್ತಾರೆ ಶತ್ರುಗಳು.
ನನ್ನ ಅಸಂಗತ ಕಾದಂಬರಿ 'ಗಾಥೆ' ಬರೆಯುವಾಗ ಅಯಾಚಿತವಾಗಿ ಈ ಸನ್ನಿವೇಶವನ್ನು ಬಳಸಿದ್ದೇನೆ. ಲೇಖಕ ಶ್ರೀ ನಾಗೇಶ್ ಕುಮಾರ್ ಅದನ್ನು ಗುರುತಿಸಿದ್ದರು!
ಆದರೆ ನನ್ನ ಮನವನ್ನು ಸಂಪೂರ್ಣವಾಗಿ ಅಪಹರಿಸಿದವನು ಜೇಮ್ಸ್ ಹ್ಯಾಡ್ಲಿ ಛೇಸ್.
-0-0-0-0-0 -
Comments
Post a Comment