ಯತಿ ಸ್ವಂತೀ -163
12-06-2018
ನನ್ನ ಇಬ್ಬರು ಸೋದರತ್ತೆಯರ ಮನೆಗಳು ಸುಬ್ರಮಣ್ಯನಗರದಲ್ಲಿ ಎದುರುಬದುರು ಇದ್ದವು. ಒಂದು ಮನೆಯಲ್ಲಿ ಅತ್ತೆ, ಮಾವ, ಇಬ್ಬರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ಇನ್ನೊಂದು ಮನೆಯಲ್ಲಿ ಅತ್ತೆ, ಮಾವ, ಇಬ್ಬರು ಪುಟ್ಟ ಗಂಡುಮಕ್ಕಳು.
ಈ ಪುಟ್ಟ ಗಂಡುಮಕ್ಕಳಲ್ಲಿ ಮೊದಲನೆಯವನೊಂದಿಗೆ ನಮ್ಮ ಅತ್ತೆ ಮೈಸೂರಲ್ಲಿ, ಕೆಲವು ಕಾಲ ನಮ್ಮ ಮನೆಯಲ್ಲಿದ್ದು ಮಹಾರಾಣಿ ಕಾಲೇಜಿನಲ್ಲಿ ಉಪಾಧ್ಯಾಯಿನಿ ಆಗಿದ್ದರು.
ಆ ಅತ್ತೆಯ ಎರಡನೆಯ ಮಗ, ನನ್ನ ಎರಡನೆಯ ತಂಗಿಗಿಂತ ಎಂಟು ತಿಂಗಳು ಚಿಕ್ಕವನು.
ಇನ್ನೊಂದು ಅತ್ತೆಯ ಮಕ್ಕಳೆಲ್ಲಾ ನನಗಿಂತ ದೊಡ್ಡವರು. ಕೊನೆಯ ಮಗನೂ ನನಗಿಂತ ಎರಡು ಮೂರು ತಿಂಗಳು ದೊಡ್ಡವನು.
ನನ್ನ ಕೆಲಸ ಏನೆಂದರೆ ಶನಿವಾರ ಕಾಲೇಜು ಮುಗಿಸಿ, ಮನೆಗೆ ಬಂದು (ಇದು ನನ್ನ ಕೊನೆಯ ಸೋದರತ್ತೆಯ ಮನೆ), ಮನೆಯ ಬಳಿ ಬಸ್ ಹತ್ತಿ ಮಲ್ಲೇಶ್ವರಂಗೆ ಹೋಗಿ, ಅಲ್ಲಿಂದ ನಡೆಯುವುದೋ ಅಥವಾ ಸುಬ್ರಮಣ್ಯನಗರದ ಕೊನೆಯ ಆಲದ ಮರದ ಸ್ಟಾಪ್ ಬಳಿ ಇಳಿದು ಡೌನ್‍ನಲ್ಲಿ ನಡೆದು ಅವರ ಮನೆ ತಲುಪುವುದೋ ಮಾಡುತ್ತಿದ್ದೆ. ಇದು ಆಲ್‍ಮೋಸ್ಟ್ ಪ್ರತಿ ವಾರದ ರಿಚುವಲ್.
ಆ ಎರಡು ಮನೆಗಳಲ್ಲಿ ಖುಷಿಯಿಂದ ಇದ್ದು, ಅವರನ್ನೂ ಖುಷಿ ಪಡಿಸಿ, (ಒಂಥರಾ ನ್ಯಾಚುರಲೀ ಕಾಮಿಕಲ್ ಅಂತಾನೋ, ಒಬ್ಬರೇ ಸೋದರ ಮಾವನ ಒಬ್ಬನೇ ಮಗ ಎಂದೋ ನನ್ನನ್ನು ಬಹಳವೇ ಆದರಿಸುತ್ತಿದ್ದರು ಎರಡೂ ಮನೆಯವರು!) ಮತ್ತೆ ಭಾನುವಾರ ಸಂಜೆ ಬಸ್ ಹತ್ತಿ ಜಯನಗರ ತಲುಪುವುದು. ಸೋಮವಾರ ಯಥಾಪ್ರಕಾರ ಅದೇ ರೊಟೀನ್.
ಬಸ್ ಆಗೆಲ್ಲಾ ಕೆಂಪೇಗೌಡ ರಸ್ತೆಯಲ್ಲಿ ಎರಡೂ ಕಡೆ ಹೋಗುತ್ತಿತ್ತು. ಇಡೀ ರಸ್ತೆಯಲ್ಲಿ ಟಾಕೀಸುಮಯ.
ಮೆಜೆಸ್ಟಿಕ್, ಗೀತಾ, ಸಂತೋಷ್, ನರ್ತಕಿ, ಸಪ್ನಾ, ಹಿಮಾಲಯ, ಅಲಂಕಾರ್, ಕಲ್ಪನಾ, ಸಾಗರ್, ತ್ರಿವೇಣಿ, ಕೆಂಪೇಗೌಡ, ಪ್ರಭಾತ್, ಸ್ಟೇಟ್ಸ್ (ಈಗಿನ ಭೂಮಿಕಾ), ಮೇನಕಾ. ಸ್ವಲ್ಪ ಸೈಡಿನಲ್ಲಿ ಸಂಗಂ, ಕಪಾಲಿ, ಮೂವೀಲ್ಯಾಂಡ್, ಅಭಿನಯ್.
ಈಗ ಇವುಗಳಲ್ಲಿ ಎಷ್ಟು ಉಳಿದುಕೊಂಡಿವೆ ಎಂದು ಸಿನಿಪ್ರಿಯ ರಸಿಕರೇ ಉತ್ತರಿಸಬಹುದು!
ಹೆಚ್ಚುಕಡಿಮೆ ಎಲ್ಲ ಥಿಯೇಟರುಗಳಿಗೂ ಹೋಗಿದ್ದೇನೆ. ಆಗೆಲ್ಲಾ ಅದೊಂದು ಹುಚ್ಚು. ಯಾವ ಯಾವ ಥಿಯೇಟರು ನೋಡಿಲ್ಲವೋ ಅದಕ್ಕೊಮ್ಮೆ ವಿಜ್ಹಿಟ್.
ಹ್ಞಾಂ... ನನ್ನ ಅತ್ಯಂತ ಕುತೂಹಲದ ಕೆಲಸವೆಂದರೆ ಸ್ಟೇಟ್ಸ್ ಥಿಯೇಟರನ್ನು ನೋಡುವುದು. ಸಾಗರ್‍ನಲ್ಲಿ ಬಂದ ಬಂಗಾರದ ಮನುಷ್ಯ ಚಿತ್ರವು ನಂತರ ಸ್ಟೇಟ್ಸ್‍ಗೆ ಬದಲಾಯಿಸಿತೆಂದು ನೆನಪು.
ಶನಿವಾರ ಮಧ್ಯಾಹ್ನ ಮ್ಯಾಟಿನಿ, ಭಾನುವಾರ ಸಂಜೆ ಫಸ್ಟ್‍ಷೋಗೆ ನಿಂತ ಜನರನ್ನು ಒಮ್ಮೆ ನೋಡಿ ಬೆರಳು ಕಚ್ಚುವುದು... ಇದೇನು, ಈ ಚಿತ್ರ ಇಷ್ಟೊಂದು ಓಡ್ತಿದೆ! ನನಗೇಕೆ ಇದನ್ನು ನೋಡಲು ಮನಸ್ಸು ಬಂದಿಲ್ಲ? ಓ, ಕಾದಂಬರಿಯಂತೆ ಇಲ್ಲ ಎಂದು ನನ್ನ ದೂರು.
ಆಗ ತಿಳಿಯದು ನನಗೆ. ಬರೆದಿದ್ದನ್ನೆಲ್ಲಾ ಹಾಗೆ ಸೆಲುಲಾಯ್ಡ್ ಮೇಲೆ ಎರಡೂವರೆ ಗಂಟೆಯಲ್ಲಿ ಇಳಿಸುವುದು ಕಷ್ಟ ಅಂತ.
ಆಮೇಲೆ ಯಾವಾಗಲೋ ಡಿವಿಡಿಯಲ್ಲಿ ನೋಡಿ, ಅಂತಿಮ ದೃಶ್ಯಕ್ಕೆ ಕಣ್ಣಿನಲ್ಲಿ ನೀರು ತುಂಬಿಕೊಂಡೆ ಎನ್ನೋದು ಬೇರೆ ವಿಷಯ.
ನನ್ನ ಪುಸ್ತಕ ಪಠಣದ ವಿಷಯ ಹೇಳಹೊರಟು... ನಾಳೆ ನೋಡೋಣ!
-0-0-0-0-0 -
Comments
Post a Comment