ಯತಿ ಸ್ವಂತೀ -158
07-06-2018
ಹತ್ತನೇ ಕ್ಲಾಸ್ ಪರೀಕ್ಷೆ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಬಂದೆ. (ಈ 'ಬಂದೆ' ಯಾಕೆಂದರೆ ಆಗ ಬಂದವನು ಈಗಲೂ ಇಲ್ಲೇ ಇದ್ದೀನಿ!)
ಕಾಲೇಜಿಗೆ ಎಲ್ಲಿ ಸೇರುವುದು ಎಂದು ಬಹಳ ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. ಏಕೆಂದರೆ ನನ್ನ ಸೋದರತ್ತೆ ಮತ್ತು ಅವರ ಪತಿ (ಅಂಕಲ್) (ನಾನು ಅವರ ಮನೆಯಲ್ಲಿಯೇ ಇರಬೇಕಿತ್ತು.) ಜಯನಗರದ ನ್ಯಾಷನಲ್ ಕಾಲೇಜು ಎಂದು ನಿರ್ಧರಿಸಿಬಿಟ್ಟಿದ್ದರು.
ಭರದ್ವಾಜ್ ಎನ್ನುವವರು ನಮ್ಮ ಅಂಕಲ್ ಜೊತೆ ಹಾಕಿ ಆಡುತ್ತಿದ್ದರೆಂದು ನೆನಪು. ಅವರು ನ್ಯಾಷನಲ್ ಕಾಲೇಜು ಜಯನಗರಕ್ಕೆ ಪ್ರಿನ್ಸಿಪಾಲ್ ಆಗಿದ್ದರು. ಅವರನ್ನು ರಿಕ್ವೆಸ್ಟ್ ಮಾಡೋಣ ಎಂದಿದ್ದರು ಅಂಕಲ್.
ನನ್ನ ಫಲಿತಾಂಶ ಬಂದಿತು. ಸೆಕೆಂಡ್ ಕ್ಲಾಸ್!
ಆಟವಾಡಿಕೊಂಡು ‘ಓದಿದರೆ’ ಇದೇ ಫಲಿತಾಂಶ ಅಲ್ಲವೇ?
ಈಗ ಮುಂದಿದ್ದ ಸಮಸ್ಯೆ ... ನ್ಯಾಷನಲ್ ಕಾಲೇಜು ಜಯನಗರದಲ್ಲಿ ಪಿ.ಯು.ಸಿ.ಗೆ ಸೀಟು ಸಿಗುವುದೇ?
ಅವರ ಬಳಿಗೆ ಹೋದೆವು. ಸೀಟು ಸಿಕ್ಕಿತು!
ಆಗ ನ್ಯಾಷನಲ್ ಕಾಲೇಜು ಜಯನಗರದಲ್ಲಿ ಕೇವಲ ಆರು ರೂಮುಗಳು ಮತ್ತು ಒಂದು ಲ್ಯಾಬ್, ಲೈಬ್ರರಿ ಇದ್ದ ಕಲ್ಲು ಕಟ್ಟಡ ಇದ್ದವು.
ನನ್ನ ಅದೃಷ್ಟಕ್ಕೆ ಹಿಂದಿನ ವರ್ಷ ಎರಡು ಸೆಕ್ಷನ್ ಮಾತ್ರ ಫಸ್ಟ್ ಪಿಯುಸಿ ಇದ್ದಿದ್ದರಿಂದ ಈ ಸಲ ನಾಲ್ಕು ಸೆಕ್ಷನ್ ಫಸ್ಟ್ ಪಿಯುಸಿ ಆರಂಭಿಸಿದರು. ಏಕೆಂದರೆ ಆರು ರೂಮುಗಳಲ್ಲಿ ಬೆಳಗ್ಗೆ ಪಿಯುಸಿ ಮತ್ತು ಮಧ್ಯಾಹ್ನ ಡಿಗ್ರೀ ತರಗತಿಗಳಿದ್ದವು.
ಅಂತೂ ಸೀಟು ಗಿಟ್ಟಿಸಿದೆ. ಪಿ.ಸಿ.ಎಂ.ಬಿ. ಗೆ.
ಈಗ ಎಚ್ ಎನ್ ಕಲಾಕ್ಷೇತ್ರ ಇರುವ ಜಾಗದಲ್ಲಿ ವಿಶಾಲವಾದ ಮೈದಾನವಿತ್ತು. ಒಂದೊಂದು ಕ್ಲಾಸಿನವರು ಒಬ್ಬರ ಹಿಂದೆ ಒಬ್ಬರು ನಿಂತು ‘ಯಂ ಶೈವಾ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ’ ಎಂದು ಶ್ಲೋಕಗಳನ್ನು ಹೇಳಿ ನಂತರ ತರಗತಿಗೆ ಹೋಗುತ್ತಿದ್ದೆವು.
ಬೆಳಗ್ಗೆ ಎಂಟೂವರೆಯಿಂದ ಹತ್ತೂವರೆ. ಮತ್ತೆ ಹತ್ತೂ ಮುಕ್ಕಾಲರಿಂದ ಹನ್ನೆರಡೂ ಮುಕ್ಕಾಲು. ಮಧ್ಯಾಹ್ನ ಲಂಚ್. ಲ್ಯಾಬ್ ಇದ್ದರೆ ಮಧ್ಯಾಹ್ನ ಮೂರೂವರೆಯಿಂದ ಐದೂವರೆ.
ನಮ್ಮ ಸೋದರತ್ತೆಯ ಮನೆ ಜಯನಗರ ನಾಲ್ಕನೇ ಟಿ ಬ್ಲಾಕ್ ಹದಿನಾರನೇ ಮುಖ್ಯರಸ್ತೆಯಲ್ಲಿತ್ತು. ಭರ ಭರ ಎಂದು ಎರಡೂ ಕಡೆಯಿಂದ ಒಂಬತ್ತನೇ ಬ್ಲಾಕಿಗೆ ಹೋಗುವ ಬಸ್ಸುಗಳು ಓಡಾಡುತ್ತಿದ್ದವು.
ಮನೆಯ ಪಕ್ಕದ ಮೂವತ್ತೈದನೇ ಎ ಕ್ರಾಸಿನಲ್ಲಿ ನಡೆದು, ರಾಘವೇಂದ್ರ ಸ್ವಾಮಿ ಗುಡಿಯ ನಂತರ ಹನ್ನೊಂದನೆಯ ಮುಖ್ಯರಸ್ತೆಗೆ ಬಂದು ಅಲ್ಲಿಂದ ಮೂವತ್ತಾರನೆಯ ಕ್ರಾಸಿನಲ್ಲಿ ನಡೆದು ನಂದಾ ಟಾಕೀಸ್ ರಸ್ತೆ ದಾಟಿ, ಪಾರ್ಕ್ ಪಕ್ಕ ಬಲಗಡೆಗೆ ತಿರುಗಿ ಮತ್ತೆ ಎಡಗಡೆಗೆ ತಿರುಗಿದರೆ ನಮ್ಮ ನ್ಯಾಷನಲ್ ಕಾಲೇಜು ಜಯನಗರ.
ಬಹುಶಃ ನಾನು ಪ್ಯಾಂಟ್ ಹಾಕಿದ್ದು ಇಲ್ಲೇ ಎಂದು ನೆನಪು. ಇಡೀ ಹೈಸ್ಕೂಲಿನ ಕೊನೆಯ ವರೆಗೂ ಶಾರ್ಟ್ಸ್ ಧರಿಸಿ ಹೋದಂತೆ ಜ್ಞಾಪಕ.
ಪ್ಯಾಂಟ್ ಶರಟು ಧರಿಸಿ ಒಂದು ರೀತಿಯ ಥ್ರಿಲ್‍ನೊಂದಿಗೆ ಕಾಲೇಜು ಪ್ರವೇಶಿಸಿದೆ. ಹೇಳಿ ಕೇಳಿ ಕಾಲೇಜು. ಶಾಲೆಯ ದಿನಗಳನ್ನು ಹಿಂದಿಕ್ಕಿದ ಸಮಯ.
ಬಹಳ ಚೆನ್ನಾಗಿದ್ದ ಸಮಯ ನನ್ನ ಪಿಯುಸಿ ದಿನಗಳು. ಕಿಶೋರಾವಸ್ಥೆಗೆ ಬಂದ ಕಾಲ ಕೂಡ. ನನಗಾಗ ಹದಿನೈದು ವರ್ಷ ತುಂಬಲು ಇನ್ನೂ ಒಂದು ತಿಂಗಳಿತ್ತು.
-0-0-0-0-0 -
Comments
Post a Comment