ಯತಿ ಸ್ವಂತೀ -156
05-06-2018
ಜೀವನ ಅನ್ನೋದು ಸದಾ ಮುಂದೋಡುವ ರೈಲಿನಂತೆ. ನನ್ನ ಜೀವನವೂ ಅನೇಕ ಮಜಲುಗಳಲ್ಲಿ ಓಡಿತು. ಬಲು ಚಿಕ್ಕಂದಿನಲ್ಲೇ ರೇಡಿಯೋ ಕೇಳುವ ಅಭ್ಯಾಸ ಮಾಡಿಸಿದ ನನ್ನ ಅಮ್ಮ, ನನಗೆ ಸಂಗೀತ ಕಛೇರಿಗಳಿಗೆ ಹೋಗುವ ಅಭ್ಯಾಸವನ್ನೂ ಮಾಡಿಸಿದರು.
ಝಾನ್ಸಿ ಲಕ್ಷ್ಮೀಬಾಯಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದ ಬಳಿಯ ಚೌಡಯ್ಯ ನೆನಪಿನ ಸಂಗೀತ ಸಂಸ್ಥೆಯ ಕಛೇರಿಗಳಿಗೆ ನನ್ನನ್ನು ಕರೆದೊಯ್ದಿದ್ದರು.
ನಮ್ಮ ಮನೆಯಿಂದ ಬಹಳ ದೂರವೇನಿರಲಿಲ್ಲ ಅದು. ಮನೆಯಿಂದ ರೈಲ್ವೇ ನಿಲ್ದಾಣ. ಅದನ್ನು ದಾಟಿ ನೇರ ನಡೆದರೆ ಪೆಟ್ರೋಲ್ ಬಂಕ್, ಮೆಟ್ರೋಪೋಲ್ ಹೊಟೇಲ್, ಮಹಾರಾಣಿ ಕಾಲೇಜು, ಮುಂದಿನ ವೃತ್ತವೇ ರಾಮಸ್ವಾಮಿ ಸರ್ಕಲ್. ಎಡಗಡೆಗೆ ತಿರುಗಿದರೆ ನಮ್ಮೂರಿನ ಮೊದಲ ನೂರಡಿ ರಸ್ತೆ ಅಥವಾ ಡಬ್ಬಲ್ ರೋಡ್. ಅಲ್ಲೇ ಲಕ್ಷ್ಮಿ, ಗಾಯತ್ರಿ ಟಾಕೀಸುಗಳು.
ಎಡಗಡೆಯ ಸುಬ್ಬರಾಯನ ಕೆರೆ ಎದುರಿಗೆ ಶಾಂತಲಾ ಟಾಕೀಸು. ಎಡಗಡೆಗೆ ಇನ್ನೂ ಸ್ವಲ್ಪ ಮುಂದೆ ಹೋದರೆ ಮರಿಮಲ್ಲಪ್ಪ ಶಾಲೆ.
ರಾಮಸ್ವಾಮಿ ವೃತ್ತದಲ್ಲಿ ಬಲಗಡೆಯ ರಸ್ತೆಯಲ್ಲಿಯೇ ದೊಡ್ಡ ಪೆಂಡಾಲ್ ಹಾಕಿರುತ್ತಿದ್ದರು.
ಎಂ.ಎಲ್. ವಸಂತಕುಮಾರಿ, ಯೇಸುದಾಸ್ ಇನ್ನೂ ಅನೇಕರ ಕಛೇರಿಗಳನ್ನು ಕೇಳಿದ ನೆನಪಿದೆ.
ಕೆಲವು ರಾಗಗಳ ಹೆಸರುಗಳು ಗೊತ್ತಿರಲಿಲ್ಲ. ಆದರೆ ಅವನ್ನು ನಾನು ಹೆಚ್ಚು ಸಲ ಕೇಳಿದ್ದ ಹಾಡುಗಳಿಗೆ ಹೋಲಿಸಿ ‘ಓಹೋ, ಇದು ಈ ರಾಗ’ ಎಂದು ನಿರ್ಧರಿಸಿಕೊಳ್ಳುತ್ತಿದ್ದೆ.
ಉದಾಹರಣೆಗೆ ಸಾಮಜವರಗಮನ ಕೀರ್ತನೆ ಕೇಳಿದಾಗ ಇದು ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ತರಹವೇ ಇದೆಯಲ್ಲಾ ಎನ್ನುವ ತಾಳೆ ಮಾಡಿಕೊಳ್ಳುತ್ತಿದ್ದೆ.
ನನ್ನ ದೊಡ್ಡ ತಂಗಿ ಹಿಂದಿನ ಮನೆಯ ಶಾಂತು ಅವರ ಬಳಿ ಸಂಗೀತ ಕಲಿಯುತ್ತಿದ್ದಳು. ಅವಳು ಮನೆಯಲ್ಲಿ ಅಭ್ಯಾಸ ಮಾಡುವಾಗ ‘ನೋಡಮ್ಮಾ, ನಾ ಹಾಡೋದನ್ನ ತಪ್ಪಿಸ್ತಾನೆ’ ಎಂದು ನನ್ನ ತಂಗಿ ನನ್ನಮ್ಮನ ಬಳಿ ದೂರುವಷ್ಟು ಅವಳಂತೆಯೇ, ಅವಳ ಜೊತೆಗೇ ಹಾಡಲು ಪ್ರಯತ್ನಿಸುತ್ತಿದ್ದೆ.
ನತಸಹೋದರೂ ನೀ ರಾಜು ಜೇಸಿ ರಾಕ ಎನ್ನುವ ಸಾಲನ್ನು ಕಾಪಿ ನಾರಾಯಣಿ ರಾಗದ ಸರಸಸಾಮದಾನಭೇದದಂಡ ಚತುರದಲ್ಲಿ ಕೇಳಿದಾಗ ರಾಜು ಎನ್ನುವ ಕಡೆ ನಾನು ಎಂದು ಕಿರಿಚುತ್ತಿದ್ದೆ. ನನ್ನನ್ನು ಮನೆಯಲ್ಲಿ ರಾಜು ಎಂದು ಕರೆಯುತ್ತಾರೆ.
ಇನ್ನೊಂದು ಹಾಡಲ್ಲಿ ಚುಚ್ಚುಬಾರ ಎಂದು ಹಾಡುವಂತೆ ಕೇಳಿಸಿದಾಗ ನೇರವಾಗಿ ಅವಳ ತೋಳಿನ ಮೇಲೆ ಹೋಗಿ ಚುಚ್ಚುತ್ತಿದ್ದೆ.
ಸರಳೆ, ವರಸೆ, ಅಲಂಕಾರ, ಪಿಳ್ಳಾರಿ ಗೀತೆಗಳು ಎಲ್ಲವೂ ಬಾಯಿಪಾಠವಾಗಿತ್ತು ನನಗೆ.
ಆದರೆ ನಾನು ಶಾಸ್ತ್ರೋಕ್ತವಾಗಿ ಸಂಗೀತ ಕಲಿತಿರಲಿಲ್ಲ!
ಅದೂ ಆಯಿತು ಎರಡು ಸಲ. ಮುಂದೆಂದಾದರೂ ಆ ವಿಫಲಪ್ರಯತ್ನಗಳ ಬಗ್ಗೆ ಹೇಳುವಾ!
ಮನೆಯಲ್ಲಿ ನನ್ನ ತಂದೆಯ ತಾಯಿ ಇದ್ದರು. ಅವರು ರೇಡಿಯೋ ಕೇಳುತ್ತಿದ್ದರು. ಸಂಗೀತ ಇಷ್ಟ ಅವರಿಗೆ. ಮೋಹನ, ಕಲ್ಯಾಣಿ, ಶಂಕರಾಭರಣ, ಹಿಂದೋಳ ಕೇಳುತ್ತಿದ್ದರು. ಶುಭ ಪಂತುವರಾಳಿ, ತೋಡಿ ಬಂದರೆ ಟಕ್ಕೆಂದು ರೇಡಿಯೋ ಆರಿಸಿಬಿಡುತ್ತಿದ್ದರು.
ಅವು ಗೋಳುರಾಗಗಳು ಅನ್ನುತ್ತಿದ್ದರು. ಯಾಕೆ ಪಾಟೀ (ಅಜ್ಜಿಗೆ ನಮ್ಮ ಭಾಷೆಯಲ್ಲಿ ಹೀಗೇ ಹೆಸರು) ಆರಿಸಿದಿರಿ? ಅಂದರೆ ‘ಹಿಹಿ’ ಎಂದು ಒಮ್ಮೆ ನಕ್ಕುಬಿಡುತ್ತಿದ್ದರಷ್ಟೇ!
Comments
Post a Comment