ಯತಿ ಸ್ವಂತೀ -151
31-05-2018
ಮೈಸೂರಿನ ಎರಡು ವಿಶೇಷಗಳು ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದವು.
ಒಂದು ವಿಜಯದಶಮಿಯಂದು ಮಹಾರಾಜರ ಜಂಬೂ ಸವಾರಿ. ಇನ್ನೊಂದು ದಸರಾ ವಸ್ತು ಪ್ರದರ್ಶನ.
ದಸರಾ ವಸ್ತು ಪ್ರದರ್ಶನ ರೈಲು ನಿಲ್ದಾಣ ದಾಟಿ ಎಡಗಡೆ ತಿರುಗಿ ರೈಲ್ವೇ ಆಫೀಸಸ್ ದಾಟಿದರೆ ಬೆಂಗಳೂರಿಗೆ ಹೋಗುವ ರಸ್ತೆ ದಾಟಿದರೆ ಇದ್ದ ಕಟ್ಟಡವೇ ಆಗ ದಸರಾ ವಸ್ತು ಪ್ರದರ್ಶನ ನಡೆಯುತ್ತಿದ್ದ ಕಟ್ಟಡ.
ಎರಡು ಭಾಗವಿದ್ದ ಟಿಕೆಟ್. ಎರಡನೇ ಭಾಗದ ಟಿಕೆಟ್ ಜೀವಣ್ಣ ರಾಯನ ಕಟ್ಟೆಯಲ್ಲಿ ಕೆಲವು ಅಂಗಡಿಗಳು, ಸಾಹಸಿಗಳು, ವಿಶೇಷಗಳು ಇರುತ್ತಿದ್ದವು.
ಮುಖ್ಯ ಕಟ್ಟಡದ ವೇದಿಕೆಯ ಮೇಲೆ ಶಾಂತಿ ನಿವಾಸ ನಾಟಕ ನೋಡಿದ್ದೆ. ಅಶ್ವತ್ಥ್ ಪಂಢರೀಬಾಯಿ ಗಂಡ ಹೆಂಡತಿ. ಪಂಢರೀಬಾಯಿ ಅತ್ತೆ ರಮಾದೇವಿ. ಈಕೆ ಸಿನಿಮಾಗಳಲ್ಲಿ ಪರ್ಮನೆಂಟ್ ದುಷ್ಟ ಅತ್ತೆ. ಅಶ್ವತ್ಥ್ ತಂಗಿ ಬಿ. ಜಯಾ. ಈ ಅತ್ತೆ ನಾದಿನಿ ಸೇರಿ ಪಂಢರೀಬಾಯಿಯನ್ನು ಗೋಳು ಹುಯ್ದುಕೊಳ್ಳುತ್ತಾರೆ.
ಮತ್ತೊಂದು ನಾಟಕ ಕಿತ್ತೂರು ಚೆನ್ನಮ್ಮ. ಅವಳ ರಾಜ್ಯಕ್ಕೆ ದ್ರೋಹ ಬಗೆಯುವ ಕಿತ್ತೂರ ಜನರಿಗೆ ಬ್ರಿಟಿಷ್ ಅಧಿಕಾರಿಗಳು ವಿಚಿತ್ರ ಆಕ್ಸೆಂಟ್‌ನಲ್ಲಿ 'ನಮಗೆ ಕಿತ್ತೂರು ಕೊಡಿಸಿ. ನಿಮಗೆ ನಾವು ಬಹುನಾಮಗಳನ್ನು ಕೊಡುತ್ತೇವೆ' ಎಂದ ಡಯಲಾಗ್ ಈವತ್ತಿಗೂ ಮರೆತಿಲ್ಲ.
ಜೀವಣ್ಣ ರಾಯನ ಕಟ್ಟೆಯಲ್ಲಿ ಸಾವಿನ ಬಾವಿ ಇರುತ್ತಿತ್ತು. ಒಂದು ಸಿಲಿಂಡರ್ ಆಕಾರದ ಹದಿನೈದು ಅಡಿ ಆಳ ಮತ್ತು ಹತ್ತಡಿ ವ್ಯಾಸದ ಬಾವಿ. ಅದರ ಒಳ ಮೇಲ್ಮೈ ಮೇಲೆ ಝುಂಯ್ ಎಂದು ಇಬ್ಬರು ಬೈಕ್ ಓಡಿಸುತ್ತಿದ್ದರು. ನ್ಯೂಟನ್ನನ ಗುರುತ್ವಾಕರ್ಷಣೆಯ ಸಿದ್ಧಾಂತಕ್ಕೆ ಎದುರು ಜವಾಬು ಹೇಳುವಂತೆ.
ರಾಧಾ ಎಂಬ ಹುಡುಗಿ. ಎರಡೂ ಕೈಗಳಿರಲಿಲ್ಲ ಅವಳಿಗೆ. ಅವಳು ಅವಳ ಕಾಲುಗಳ ಸಹಾಯದಿಂದ ತಲೆ ಬಾಚಿಕೊಂಡು ಹೂ ಮುಡಿದುಕೊಂಡು ಸೀಮೆಎಣ್ಣೆ ಸ್ಟವ್ ಹೊತ್ತಿಸಿ ಟೀ ಮಾಡಿ ಕಾಲಿನಲ್ಲಿ ಕಪ್ ಹಿಡಿದು ಟೀ ಕುಡಿಯುತ್ತಿದ್ದಳು. ಇವಕ್ಕೆ ಬೇರೆ ಟಿಕೆಟ್.
ನಂತರ ಮೈಸೂರು ಅರಮನೆಯ ಎದುರಿನ ದೊಡ್ಡ ಕೆರೆ ಮೈದಾನದಲ್ಲಿ ಶಾಶ್ವತ ಎಕ್ಸಿಬಿಶನ್ ಸಿದ್ಧವಾಯಿತು. ಏಕೆಂದರೆ, ಜೆಕೆ ಗ್ರೌಂಡ್ಸ್ (ಜೀವಣ್ಣ ರಾಯನ ಕಟ್ಟೆ) ಮತ್ತು ಮೂಲ ದಸರಾ ವಸ್ತು ಪ್ರದರ್ಶನದ ಕಟ್ಟಡ ಎರಡೂ ಮೈಸೂರು ಮೆಡಿಕಲ್ ಕಾಲೇಜಿನ ಭಾಗವಾದವು.
Comments
Post a Comment