ಯತಿ ಸ್ವಂತೀ -148



28-05-2018

ನಮ್ಮ ಅಜ್ಜಿಯ ಮನೆಯನ್ನು ಐದನೇ ಮುಖ್ಯರಸ್ತೆಯ ಆಖೈರು ಮನೆಗೆ ಬದಲಾಯಿಸಿದರು.

ಪಾಪಾರಾಂ ಹೌಸ್ ಇದ್ದ ಗೋಕುಲಂ ರಸ್ತೆ ದಾಟಿದರೆ ಉದಯರವಿ. ರಾಷ್ಟ್ರಕವಿ ಕುವೆಂಪು ಅವರ ಮನೆ. ಅವರನ್ನು ಅನೇಕ ಸಲ ಅವರ ಮನೆಯ ಗೇಟಿನಲ್ಲಿ ಕಂಡಿದ್ದೇನೆ. ಕೆಲವೊಮ್ಮೆ ಗರಿಗರಿಯಾದ ಶ್ವೇತವಸ್ತ್ರಧಾರಿಯಾಗಿ ಗೋಕುಲಂ ರಸ್ತೆಯಲ್ಲಿ ನಡೆದು ಹೋಗುತ್ತಿರುವುದನ್ನು ಕಂಡಿದ್ದೇನೆ. 

ಶರಪಂಜರದ ನಾಯಕ ಗಂಗಾಧರ್ ಮತ್ತು ಕೆ.ಎಸ್.ಅಶ್ವತ್ಧ್ ಅಭಿನಯದ 'ಬಾಂಧವ್ಯ' ಚಿತ್ರದ ಒಂದು ದೃಶ್ಯದ ಚಿತ್ರೀಕರಣ ಕಂಡಿದ್ದೇನೆ. ಅಶ್ವತ್ಥ್ ಒಂದು ಗಾಡಿಯನ್ನು ಅಪ್‍ನಲ್ಲಿ ಎಳಕೊಂಡು ಹೋಗುವಾಗ ಹಿಂದಿನಿಂದ ಗಂಗಾಧರ್ ಅದನ್ನು ತಳ್ಳುತ್ತಾರೆ. ಅಬ್ಬಬ್ಬಾ ಅದೇನು ಮೇಕಪ್ ಕೆಲವು ನಟರ ಮುಖಕ್ಕೆ! ಬೆಂಗಳೂರು ಸಂಪಿಗೆ ದೇವರ ಪೂಜೆಗೆ ಮೈಸೂರು ಮಲ್ಲಿಗೆ ಮೆಚ್ಚಿ ಬರೋ ಹೆಣ್ಣಿಗೆ ಕಮ್ಮಿ ಬೆಲೆ ಮಾರಿಗೆ ಕೊಳ್ಳೇ ಬನ್ನಿ ಇಲ್ಲಿಗೆ, ಎಲ್ಲಾದರೂ ಹೋಗು ಮರೆಯಾಗು ಮೊರೆಹೋಗು ನಿನ್ನನು ಬಿಡದು ಬಾಂಧವ್ಯ ಬಿಡದೋ ಮಮತೆಯ ಬಾಂಧವ್ಯ ಈ ಎರಡೂ ಹಾಡುಗಳು ಇವತ್ತಿಗೂ ಕೇಳುತ್ತಿರುತ್ತೀರಿ.

ಇನ್ನೊಮ್ಮೆ ಕಲ್ಯಾಣಕುಮಾರ್, ವಂದನಾ ಮತ್ತು ಒಂದು ಬೈಕ್. 'ಮೈಸೂರು ಟಾಂಗ' ಚಿತ್ರದ ಚಿತ್ರೀಕರಣ ನೋಡಿದ್ದೇನೆ.

ಹ್ಞಾಂ... ಅಜ್ಜಿಯ ಮನೆಗೂ ಉದಯರವಿಗೂ ನಡುವೆ ಹದಿನಾರು ಒಂದೇ ರೀತಿಯ ಮನೆಗಳನ್ನು ಕಟ್ಟಿದ್ದರು ಸರ್ಕಾರದವರು. ಇನ್ನೂ ಯಾರೂ ಅವಕ್ಕೆ ವಾಸಕ್ಕೆ ಬಂದಿರಲಿಲ್ಲ. 

ನಮ್ಮ ಅಜ್ಜಿಯ ಮನೆ ಎತ್ತರದಲ್ಲಿ ಕೊನೆಯಲ್ಲಿತ್ತು. 

ಅಬ್ಬಾ ಸಂಜೆಯಾದರೆ ಸಾಕು ಯಮಸೊಳ್ಳೆಗಳು!

ಆ ಹದಿನಾರು ಮನೆಗಳನ್ನೂ ಜನರಿದ್ದಿದ್ದರೆ ಸೊಳ್ಳೆಗಳು ಮನೆಗಳನ್ನು ಹಂಚಿಕೊಳ್ಳುತ್ತಿದ್ದುವೇನೋ!

ಸರಿ, ಬಿಲ್ವಪತ್ರೆ ಕಾಯಿ ತಂದು ಒಣಗಿಸಿ ಪುಡಿ ಮಾಡಿ ಅದನ್ನು ಒಂದು ಬಾಣಲೆಯಲ್ಲಿ ಸುಟ್ಟು ಆ ಬಾಣಲೆ ಹಿಡಿದು ಘಾಟಿನ ಹೊಗೆಯನ್ನು ಇಡೀ ಮನೆಗೆ ಹಾಕುತ್ತಿದ್ದೆವು. ಅನೇಕ ಸೊಳ್ಳೆಗಳು ಹೊರಟುಹೋಗುತ್ತಿದ್ದವು, ಬಹುಶಃ ಶಾಪ ಹಾಕಿ.

ಇನ್ನೂ ಕೆಲವು ಭಂಡ ಸೊಳ್ಳೆಗಳನ್ನು ಕೊಲ್ಲಲು ಮತ್ತೊಂದು ಉಪಾಯ ಹೂಡುತ್ತಿದ್ದೆವು, ನಾನು ನನ್ನ ಕೊನೆಯ ಮಾಮ ಕಣ್ಣ ಮತ್ತು ನನ್ನ ಮೊದಲ ಸೋದರ ಮಾವನ ಮಗ ವಿನಯ್.

ಸೊಳ್ಳೆ ಪರದೆ ಕಟ್ಟಿ ತೆರೆಯನ್ನು ಮೇಲಕ್ಕೆತ್ತಿ ಕಟ್ಟುವುದೋ, ಒಂದು ಸಂದಿ ಬಿಡುವುದೋ ಮಾಡುತ್ತಿದ್ದೆವು. ಸೊಳ್ಳೆಗಳು ಪರದೆಯ ಒಳಗೆ ಬರುತ್ತಿದ್ದವು ಪಾಪ!

ಆಮೇಲೆ ಅವುಗಳ ಮಾರಣಹೋಮ. ನಿಜಕ್ಕೂ ಆ ಹದಿನಾರು ಮನೆಗಳು ಬಂದಾಗ ನೆಮ್ಮದಿಯ ನಿಟ್ಟುಸಿರಿಟ್ಟಿದ್ದೆವು. ಒಂದಿಷ್ಟು ಹೊಸ ಜನ ಸಿಕ್ಕರೆಂದು ಸೊಳ್ಳೆಗಳು ಆ ಕಡೆಗೆ ಹೋಗಿದ್ದರಿಂದ.

ಅಂದ ಹಾಗೆ ಪ್ರತಿ ಜನವರಿಯಲ್ಲಿ ನನ್ನ ದೊಡ್ಡ ಸೋದರ ಮಾವನ ಹೆದರಿಕೆಗೆ ಓದುವೆನೆಂದು ಇಲ್ಲಿಗೆ ಕಳಿಸುತ್ತಿದ್ದರು ಅಮ್ಮ. ಆದರೆ ಆ ಮಾಮ ಒಳ್ಳೆಯವರು. ಬೆಲ್ಟ್ ತಗೊಂಡು ಒಮ್ಮೆ ಹೆದರಿಸಿದ್ದಿರಬೇಕು, ಅಕ್ಕನ ಮೇಲಿನ ಪ್ರೀತಿಗೆ.

ನಾನು ಮಜವಾಗಿಯೇ ಇದ್ದೆ. ಆದರೆ ಫೆಯ್ಲ್ ಆಗದೇ ಪ್ರತಿವರ್ಷ ಪಾಸಾಗುತ್ತಿದ್ದೆ. ಅದಕ್ಕೇ ಅಮ್ಮ ಎಂಟು, ಒಂಬತ್ತು ಮತ್ತು ಹತ್ತನೇ ಕ್ಲಾಸಿನಲ್ಲಿ ಅಜ್ಜಿ ಮನೆಗೆ ಕಳಿಸಿದ್ದರು!

-0-0-0-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102