ಯತಿ ಸ್ವಂತೀ -147


27-05-2018

ಸೋದರಮಾವನ ಸ್ಟಂಟ್! 
ನನ್ನ ತಾಯಿಗೆ ಮೂವರು ತಮ್ಮಂದಿರು. ಮೂರನೆಯ ಮಾವ ಕೃಷ್ಣ ಕುಮಾರ್ ನನಗಿಂತ ಆರು ವರ್ಷ ದೊಡ್ಡವನು. ಮಹಾ ಚೇಷ್ಟೆ ಅವನದು. ಅವನನ್ನು ಕಣ್ಣ ಎಂದು ಕರೆಯುತ್ತಿದ್ದೆವು. ನನ್ನ ದೊಡ್ಡ ಸೋದರಮಾವನ ಮಗ ವಿನಯ್ ನನಗಿಂತ ನಾಲ್ಕು ವರ್ಷ ಚಿಕ್ಕವನು. ನಾನು ಲೋಕೋ ಕಾಲೋನಿ ಮನೆಯಿಂದ ಒಂಟಿಕೊಪ್ಪಲ್‌ಗೆ ಶಾಲೆಗೆ ಬರುತ್ತಿದ್ದೆ ಅಲ್ಲವಾ? ನಾನು ಓದುತ್ತಿರಲಿಲ್ಲ ಎಂಬುದು ನನ್ನ ತಾಯಿಯವರಿಗೆ ಚಿಂತೆ ಹತ್ತಿಸಿತ್ತು! ಅದಕ್ಕೇ ನನ್ನನ್ನು ಪ್ರತಿ ವರ್ಷ ಜನವರಿ ತಿಂಗಳಲ್ಲಿ ನನ್ನ ಅಜ್ಜಿ ಮನೆಗೆ ಕಳುಹಿಸುತ್ತಿದ್ದರು. ಅಲ್ಲಿ ಸೋದರಮಾವನ ಬಗ್ಗೆ ನನಗಿರುವ ಹೆದರಿಕೆಯಿಂದಲಾದರೂ ಓದಲಿ ಅನ್ನೋದು ಅವರ ಅಭಿಲಾಷೆ! ನನಗೆ ಅಲ್ಲಿ ಹೋಗುವುದಕ್ಕೆ ಬೇಸರ ಇರಲಿಲ್ಲ. ಶಾಲೆಗೆ ಹತ್ತಿರ. ಅಜ್ಜಿ ಮತ್ತು ಮಾಮಿ ಇಬ್ಬರ ಅಡುಗೆ ಉಣ್ಣುವ ಭಾಗ್ಯ! ಅಜ್ಜಿ ಮಾಡುತ್ತಿದ್ದ ರುಚಿ ರುಚಿ ಬಿಸ್ಕೆಟ್ ರೊಟ್ಟಿ ಬೇರೆ ಯಾರೂ ಮಾಡಿಕೊಟ್ಟಿಲ್ಲ! ಅವರದು ದೊಡ್ಡ ಮನೆ. 
ಗೇಟಿನಿಂದ ಇಪ್ಪತ್ತು ಅಡಿ ನಡೆದರೆ ಬಾಗಿಲು. ವರಾಂಡಾ. ಅದರಲ್ಲಿ ಬಲಗಡೆಗೆ ದೊಡ್ಡ ಸೋದರಮಾವನ ರೂಂ. ಎಡಗಡೆ ಬೀರೂಗಳನ್ನಿಟ್ಟು ಅದರ ಆ ಬದಿಯಲ್ಲಿ ನನ್ನ ಅತಿ ಕಿರಿಯ ಸೋದರಮಾವನ ಮೇಕ್ ಶಿಫ್ಟ್ ರೂಂ. ನಂತರ ದೊಡ್ಡ ಹಾಲ್. ಬಲಗಡೆ ಅಜ್ಜಿ ತಾತನ ರೂಂ. ಎಡಗಡೆ ಉದ್ದಕ್ಕೂ ಹಲಗೆಗಳ 'ಗೋಡೆ' ಇಟ್ಟು ಆಚೆಬದಿಗೆ ಸ್ಕ್ರೀನ್ ರೂಂ. ಮತ್ತೆ ಒಂದು ಮೊಗಸಾಲೆ. ಅದರ ಬಲಗಡೆ ಊಟದ ದೊಡ್ಡ ಕೊಠಡಿ. ಅದರಿಂದ ಕೆಳಗೆ ಅಜ್ಜಿಯ ಮಡಿ ಅಡುಗೆಮನೆ. ಮೊಗಸಾಲೆಯ ಎಡಗಡೆ ಮಾಮಿಯ ಅಡುಗೆಮನೆ. ಮುಂದೆ ಮತ್ತೊಂದು ಹಜಾರ. ಎಡಗಡೆ ದೊಡ್ಡ ಸ್ನಾನದ ಮನೆ. ಹಿತ್ತಿಲ ಬಾಗಿಲು. ಔಟ್‌ಹೌಸ್. 
ರಾತ್ರಿ ಬಾತ್‌ರೂಮಿಗೆ ಎದ್ದರೆ ಕಣ್ಣು ಮುಚ್ಚಿಕೊಂಡು ಹೋಗಿ ಬರುತ್ತಿದ್ದೆ. ನಾನು ಮಹಾ ಭಯಸ್ಥ (ಆಗಿದ್ದೆ). 
ಒಮ್ಮೆ ನಾನು, ವಿನಯ್, ಕಣ್ಣ ಮಾತ್ರ ಮನೆಯಲ್ಲಿ ಇದ್ದೆವು. ರಾತ್ರಿ ಒಂಬತ್ತು ಇರಬಹುದು. ಹೊರಗೆ ಹೋಗುವೆ ಮನೆ ಕಡೆ ಹುಷಾರು ಎಂದು ಕಣ್ಣ ಹೊರಟುಬಿಟ್ಟ. ನಾನು ವಿನಯ್ ಬಾಗಿಲು ಹಾಕಿಕೊಂಡು ಚದುರಂಗ ಆಡುತ್ತಿದ್ದೆವು. ಟಕ್ಕನೆ ದೀಪಗಳೆಲ್ಲಾ ಆರಿಹೋದವು. ಏನೋ ಶಬ್ದ. ಯಾರದೋ ಉಸಿರಾಟದ್ದು! ಅಲ್ಲಿ ಇದ್ದಕ್ಕಿದ್ದಂತೆ ಟಾರ್ಚ್ ಬೆಳಕು ಬಿದ್ದಿತ್ತು, ಒಂದು ಭಯಾನಕ ಮುಖದ ಮೇಲೆ! ಆ ಮುಖದ ಮೇಲೆ ಹಗ್ಗವೊಂದು ಚಿಕ್ಕ ಚಿಕ್ಕ ಚೌಕಗಳ ಆಕಾರದಲ್ಲಿ ಬಿಗಿಯಲ್ಪಟ್ಟಿತ್ತು. ಆ ಚೌಕಗಳ ನಡುವೆ ಹೊಳೆಯುವ ಕಣ್ಣುಗಳು ಮತ್ತು ತೆರೆದ ಬಾಯಿಯಲ್ಲಿ ಭಯಾನಕವಾಗಿ ಕಾಣುತ್ತಿದ್ದ  ಹಲ್ಲುಗಳು. ನನ್ನ ಹೃದಯ ಕ್ಷಣಕಾಲ ನಿಂತು ಲಬೋಲಬೋ ಎಂದು ಹೊಡೆದುಕೊಳ್ಳಲಾರಂಭಿಸಿತು. ಗಡಗಡನೆ ಕಂಪಿಸಲಾರಂಭಿಸಿದೆವು. ಅಬ್ಬಾ... ಎಂತಹ ನೈಟ್‌ಮೇರ್..! ಆ ಮುಖ ಸಾಧಾರಣದ ನಗೆ ನಕ್ಕಾಗಲೇ ಅವನು ಕಣ್ಣ ಎಂದು ನಮ್ಮಿಬ್ಬರಿಗೆ ಅರಿವಾಗಿದ್ದು! ಹಿಂದಿನ ಬಾಗಿಲಿನ ಚಿಲಕವನ್ನು ಮೊದಲೇ ತೆಗೆದಿಟ್ಟು ಹೋಗಿ, ಆ ಭಯಂಕರ ಮುಖದೊಂದಿಗೆ ಒಳಗೆ ಬಂದು ನಮ್ಮನ್ನು ಹೆದರಿಸಿದ್ದ. ಮನಸ್ಸು ನಿರಾಳವಾದ ಮೇಲೆ ನಿಕ್ಕರ್ ಮುಟ್ಟಿ ನೋಡಿಕೊಂಡೆ. ಒದ್ದೆ ಆಗಿರಲಿಲ್ಲ ಸಧ್ಯ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102