ಯತಿ ಸ್ವಂತೀ -145



25-05-2018

ನಮಗೆ ಸೋಷಿಯಲ್ ಸ್ಟಡೀಸ್ ಮತ್ತು ಇಂಗ್ಲೀಷ್ ತೆಗೆದುಕೊಳ್ಳುತ್ತಿದ್ದವರು ಅನಸೂಯ ಮೇಡಂ. ಗಿಣಿ ಮೂಗಿನ ಆ ಮೇಡಂ ಕೈಯಲ್ಲಿ ಪುಸ್ತಕಗಳನ್ನು ಹಿಡಿದು ನಡೆದು ಬರುತ್ತಿದ್ದರೆ ಅವರ ಸೀರೆಯ ಸೆರಗು ಏರುತಿಹುದು ಹಾರುತಿಹುದು ಬಾನಿನಗಲ ಪಟಪಟ ಎನ್ನುವಂತೆ ಅಷ್ಟೆತ್ತರದಲ್ಲಿ ಹಾರಾಡುತ್ತಿತ್ತು.

ತರಗತಿಯಲ್ಲಿ ಬಾಯ್ತೆರೆದರೆ ಇಂಗ್ಲೀಷ್ ಭಾಷೆ ಪಟಪಟನೆ ಉದುರುತ್ತಿತ್ತು.

ನನ್ನ ಜೊತೆಗೆ ರಮೇಶ (ಕಪ್ಪೆ ಎನ್ನುತ್ತಿದ್ದರು ಇವನನ್ನು. ಯಾಕೆಂದು ತಿಳಿಯದು) ಮತ್ತು ಬಾಬ್ಬಿ ಸ್ಟೀವನ್‍ಸನ್. ರಮೇಶ ಅವರ ತಂದೆ ರೈಲ್ವೇಯಲ್ಲಿ ದೊಡ್ಡ ಕೆಲಸದಲ್ಲಿದ್ದರು. ನಮ್ಮ ತಂದೆಯವರ ತಂದೆ ಹಿಂದೆ ಇದ್ದ ದೊಡ್ಡ ಮನೆಯಲ್ಲಿ ಅವನಿದ್ದ. ಆ ಮನೆಯ ಮುಂದೆ ನಮ್ಮ ಮೊದಲ ಸೋದರತ್ತೆಯ ಮೊದಲ ಮಗ ರಾಜಸಿಂಹ ಒಂದು ವರ್ಷದವನಾಗಿದ್ದಾಗ ತೆಗೆದ ಪಟಗಳು ಇವೆ ಮನೆಯಲ್ಲಿ. ಅವೆಲ್ಲವೂ 1957ಕ್ಕೆ ಮುಂಚಿನದು; ಅಂದರೆ ನಾನು ಹುಟ್ಟುವುದಕ್ಕೆ ಮೊದಲಿನವು.

ರಮೇಶ ಮಹಾ ತರಲೆ. ಒಂಬತ್ತನೇ ಕ್ಲಾಸಿಗೆ ಹೋಗದೇ ಎಂಟರಲ್ಲಿ ಎರಡನೇ ವರ್ಷ ಇದ್ದ ಎಂದು ನೆನಪು. ನನ್ನ ಚಿಕ್ಕಪ್ಪ ಒಬ್ಬ ಇದ್ದ. ಅಂದರೆ ನನ್ನ ತಂದೆಯ ತಾಯಿಯ ತಂಗಿಯ ಕೊನೆಯ ಮಗ. ಅವನೂ ನನ್ನ ತರಗತಿ! ಪಾಪ, ಇತ್ತೀಚೆಗೆ ಈ ಲೋಕ ಬಿಟ್ಟು ತೆರಳಿಬಿಟ್ಟ.

ಹ್ಞಾಂ... ಈ ಅನಸೂಯ ಮೇಡಂ ಬಹಳ ಸ್ಟೈಲಾಗಿ ‘ಪಾಡನ್’ ಎನ್ನುತ್ತಿದ್ದರು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ ಅವರಿಗೆ ಅರ್ಥವಾಗಿರದಿದ್ದರೆ.

ಅವರ ಈ ಪಾಡನ್(ಪಾರ್ಡನ್) ನಮಗೆಲ್ಲಾ ಖುಷಿ ಕೊಡ್ತಿತ್ತು. ಒಂದು ರೀತಿ ರಾಗವಾಗಿ ಇದನ್ನು ಹೇಳುತ್ತಿದ್ದರು.

ನನಗೆ ರಮೇಶನ ಕುಮ್ಮಕ್ಕು. ಏ ಯತಿ, ಕೇಳೋ ಕೇಳೋ ಪಾಡನ್ ಅನ್ನಿಸೋ ಅಂತ.

“ಮಿಸ್... ಪ್ಟ್ ಕ್ಯಾಪಿಟ... ಯಾವ್ದು ಮಿಸ್?” ಎನ್ನುತ್ತಿದ್ದೆ ವಿಧಿಯಿಲ್ಲದೇ, ಕೆಲವು ಅಕ್ಷರಗಳನ್ನು ನುಂಗಿ.

ಅನಸೂಯ ಮೇಡಂ ‘ಪಾಡನ್!’ ಅನ್ನುವರು ತಕ್ಷಣವೇ. ನಮಗೆಲ್ಲಾ ಮುಸಿಮುಸಿ ನಗು.

ಆಮೇಲೆ ಮತ್ತೊಮ್ಮೆ ಜೋರಾಗಿ ಸ್ಪಷ್ಟವಾಗಿ ಈಜಿಪ್ಟ್ ಕ್ಯಾಪಿಟಲ್ ಯಾವ್ದು ಮಿಸ್? ಎನ್ನುತ್ತಿದ್ದೆ. ಪಾಪ ಅವರು ಸರಿಯಾದ ಉತ್ತರ ಕೊಟ್ಟರೆ ರಮೇಶ ಅದನ್ನು ಬೇರೊಂದು ರೀತಿಯಲ್ಲಿ ಜೋರಾಗಿ ಅರಚಿ ಹೇಳುತ್ತಿದ್ದ. ಎಲ್ಲರಿಗೂ ನಗು.

ಹೀಗೇ ದಿನವೂ ಇಂಗ್ಲೀಷ್‍ನಲ್ಲೇ ‘ಜೀವ’ ತಿನ್ನುತ್ತಿದ್ದರು ಅನಸೂಯ. 

ಆ ಶುಭದಿನ ಅನಸೂಯ ಬರುವ ಮುಂಚೆ ತರಗತಿಯಲ್ಲಿ ಏನೋ ಗಲಾಟೆ. ಸುರೇಶನೇ ಇರಬೇಕು. ಮೇಡಂ ಬಂದೊಡನೆ ‘ನೋಡಿ ಮಿಸ್ ಇವ್ನು ಹೊಡೀತಾನೆ’ ಎಂದುಬಿಟ್ಟ.

ತಕ್ಷಣವೇ ಅನಸೂಯ, ‘ಯಾರಪ್ಪಾ?’ ಅಂತ ಕನ್ನಡದಲ್ಲಿ ಕೇಳಿಬಿಟ್ಟರು.

ನಮ್ಮ ಕಿವಿಗಳಿಗೆ ಅದು ನಾರದಗಾನ, ಅಮೃತವರ್ಷಿಣಿ ರಾಗದಂತೆ ಕೇಳಿಸಿತ್ತು.

ಅಬ್ಬಾ, ಇವರಿಗೆ ಕನ್ನಡ ಆಡೋಕ್ಕೆ ಬರ್ತದೆ ಕ್ಲಾಸಿನಲ್ಲಿ!

ಅಂದೇ ಕೊನೆ. ಅವರೆಂದೂ ಇಂಗ್ಲೀಷ್‍ನಲ್ಲಿ ಸಂಭಾಷಿಸಲಿಲ್ಲ. ಕೇವಲ ಪಾಠಗಳು ಇಂಗ್ಲೀಷ್‍ನಲ್ಲಿ ಇರುತ್ತಿದ್ದವು. ನಮ್ಮ ಸಂಭಾಷಣೆಗಳೆಲ್ಲಾ ಕನ್ನಡದಲ್ಲಿ.

ಅಬ್ಬಾ ಇಂಗ್ಲೀಷ್ ಮೀಡಿಯಂ ಅಂದರೆ ನಾನು ಅಂದುಕೊಂಡಷ್ಟು ಕಷ್ಟ ಇಲ್ಲ ಎನಿಸಿದ ಮೊದಲ ಕ್ಷಣವದು!

-0-0-0-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102