ಯತಿ ಸ್ವಂತೀ -144-
24-05-2018
ಅಮ್ಮ ನಮಗೆ ಎಂದಿಗೂ ಯಾವ ತರಕಾರಿಯನ್ನೂ ತಿನ್ನಬೇಡ ಎಂದಿಲ್ಲ. ಮಕ್ಕಳು ಎಲ್ಲವನ್ನೂ ತಿಂದು ಅರಗಿಸಿಕೊಳ್ಳಬೇಕೆನ್ನುವುದು ಅವರ ಅಭಿಲಾಷೆಯಾಗಿತ್ತು. “ಏ... ಇದು ತಿನ್ನಲ್ಲ ಅದು ತಿನ್ನಲ್ಲ ಅಂದರೆ ಸರಿಯಿಲ್ಲ. ಎಲ್ಲ ತಿನ್ಬೇಕು” ಎನ್ನುತ್ತಿದ್ದರು.
ನಮಗೆ ಆಲೂಗೆಡ್ಡೆ, ಕಾಳುಗಳ ಕೊಳಂಬ್ (ಹುಳಿಗೆ ನಮ್ಮ ಭಾಷೆಯ ಪದ) ನಮಗೆ ಇಷ್ಟ. ಅಮ್ಮ ಇವನ್ನು ತಿನ್ನುತ್ತಿರಲಿಲ್ಲ. ಅವು ‘ವಾಯು’ ತರುವ ಪದಾರ್ಥ ಎಂದು ಅವರ ಅಭಿಪ್ರಾಯ.
ಅದಕ್ಕೇ ನಾವು ಹಟ ಮಾಡಿ ಇವನ್ನು ಮಾಡಿಸಿಕೊಂಡು ತಿಂದಾಗ, ಅವರು ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ.
ಅವರ ಅಮ್ಮನ ಮನೆಗೆ ಹೊರಟುಹೋಗುತ್ತಿದ್ದರು. ಒಂಟಿಕೊಪ್ಪಲ್ (ವಿವಿ ಪುರಂ) ಐದನೇ ಮೆಯಿನ್‍ನಲ್ಲಿತ್ತು ನನ್ನ ಅಜ್ಜನ ಮನೆ.
ಅಲ್ಲಿ ಹೋಗಲು ಬಸ್. ನಂಬರ್ 2 ಅಂದುಕೊಳ್ತೇನೆ. ಬಸ್‍ಸ್ಟಾಂಡ್ ಇಂದ ಪಾಪಾರಾಂ ಹೌಸ್. ಕೊನೆಯ ನಿಲ್ದಾಣದ ಹಿಂದಿನ ಸ್ಟಾಪ್ 8ನೇ ಕ್ರಾಸ್. ಬಸ್ಸು ಆರನೇ ಮೆಯಿನ್‍ನಲ್ಲಿ ಹೋಗುತ್ತಿತ್ತು. ಮೊದಲು 5ನೇ ಮೆಯಿನ್‍ನಲ್ಲಿ ಬರುತ್ತಿತ್ತೆಂಬ ನೆನಪು.
ಅಜ್ಜಿ ಮನೆ 5 ನೇ ಮೆಯಿನ್ ಅಂದೆನಲ್ಲವಾ? ಬಸ್ ಟಿಕೆಟ್ ದರ 5 ಪೈಸೆಗಳು ಎಂದು ನೆನಪು.
ಅಮ್ಮ 6ನೇ ಮೆಯಿನ್ ಎಂಟನೇ ಕ್ರಾಸ್‍ನಲ್ಲಿ ಇಳಿದು, 8ನೇ ಕ್ರಾಸ್‍ನಲ್ಲಿ ಕೆಲವು ಗಜ ನಡೆದು ಎಡಕ್ಕೆ ತಿರುಗಿದರೆ ಮೊದಲನೆಯದು ಅಪ್ಪಳಾಚಾರ್ ಅವರ ಮನೆ. ಆ ಹೆಸರು ಕೇಳಿದರೆ ನಗು. ಈಗಲೂ ಅದು ಹೇಗೆ ಅಪ್ಪಳಾಚಾರ್ ಎಂದು ಹೆಸರಿಟ್ಟುಕೊಳ್ಳುವರೆಂಬ ಆಶ್ಚರ್ಯ. ಓಬಳಯ್ಯ ಎನ್ನುವುದು ಅಹೋಬಿಲಯ್ಯ ಎನ್ನುವುದರ ಅಪಭ್ರಂಶವಾದಂತೆ ಅಪ್ಪಳಾಚಾರ್ ಕೂಡ ನರಸಿಂಹ ದೇವರ ಹೆಸರೇನು?
ಇನ್ನೂ ಸ್ವಲ್ಪ ಮುಂದೆ ಬಂದರೆ ಮನೆಯೊಳಗೆ ಅಂಗಡಿ ಇಟ್ಟುಕೊಂಡಿದ್ದ ಒಬ್ಬರು. ಅವರ ಮನೆಯ ಪಕ್ಕದಲ್ಲಿ ಮೈಸೂರಿನ ಮುನಿಸಿಪಲ್ ಕೌನ್ಸಿಲರ್ ಆಗಿದ್ದ ಸೌಂದರ್ಯಮ್ಮನವರ ಮನೆ. ಭಾರೀ ಸ್ಟೈಲಿಶ್ ಲೇಡಿ ಆಕೆ ಆಗಿನ ಕಾಲಕ್ಕೇ. ಮು. ಕೌ. ಆಗಿದ್ದಾಗ ಕುದುರೆಯ ಮೇಲೆ ಸವಾರಿ ಹೋಗುತ್ತಿದ್ದ ಪಟಗಳನ್ನು ಅವರ ಮನೆಯಲ್ಲಿ ಕಂಡಿದ್ದೇನೆ. ಅವರ ಮಗಳ ಮಗ ಶ್ರೀವತ್ಸ(ವಚ್ಚು) ನನ್ನ ಗೆಳೆಯ. ಅವನು ಮದ್ರಾಸಿನಿಂದ ಬಂದಾಗಲೆಲ್ಲ ನನ್ನೊಂದಿಗೆ ಆಡುತ್ತಿದ್ದ.
ಮುಂದೊಂದು ದಿನ ಬಹಳ ವರ್ಷಗಳ ನಂತರ ನಾನು ಮಸ್ಕತ್ ತಲುಪಿದ ಮರುದಿನವೇ ನನಗೆ ಅವನ ಭೇಟಿ ಮಸ್ಕತ್‍ನಲ್ಲಿ ಆಗಿತ್ತು!
ಸೌಂದರ್ಯಮ್ಮನ ಮನೆ ಎದುರಿಗೆ ಕೆ. ಎಸ್. ನಾಗರತ್ನಮ್ಮ ಅವರ ಮನೆ. ಒಂದು ಕಾಲದಲ್ಲಿ ನಮ್ಮ ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಕಬ್ಬಳ್ಳಿ ಸಾವ್ಕಾರ್ರು ಅಂತ ಅವರ ಮನೆಯವರ ಬಗ್ಗೆ ಹೇಳುತ್ತಿದ್ದೆವು. ಅವರ ಮನೆಯ ಪಕ್ಕದ್ದೇ ಅಜ್ಜಿಯ ಮನೆ.
ಹ್ಞಾಂ... ಅಜ್ಜಿಯ ಮನೆಗೆ ಹೋಗಿ ಅಮ್ಮ ವಾಪಸ್ಸು ಬಂದ ನಂತರ “ಏನು ತಿಂದೆ?” ಎಂದಾಗ “ಆಲೂಗೆಡ್ಡೆ” ಎಂದೋ, “ಅಲಸಂದೆ ಕಾಳಿನ ಕೊಳಂಬು” ಎಂದೋ ಅಮ್ಮ ಹೇಳಿದರೆ ನಾನು ನನ್ನ ದೊಡ್ಡ ತಂಗಿ ಹಾಗೇ ಆಗಬೇಕು, ಹಲ್ಲು ಮುರೀಬೇಕು, ನಾ ನಗಬೇಕು, ನೀ ಅಳಬೇಕು ಎಂದು ರೇಗಿಸುತ್ತಿದ್ದೆವು.
-0-0-0-
Comments
Post a Comment