ಯತಿ ಸ್ವಂತೀ -143


23-05-2018
ನಾನು ಎಂಟನೆಯ ತರಗತಿಗೆ ಬರುವ ವೇಳೆಗೆ ಬಹಳವೇ ಆಟದ ಬುದ್ಧಿಯವನಾಗಿಬಿಟ್ಟಿದ್ದೆ. ಅಮ್ಮನಿಗೆ ಏನೋ ಕಳವಳ. ಇವನನ್ನು ಹೀಗೇ ಆಟವಾಡಲು ಬಿಟ್ಟರೆ ಹತ್ತನೇ ತರಗತಿಯನ್ನೂ ಮುಟ್ಟಲಾರ ಎಂದೆನಿಸಿಬಿಟ್ಟಿದೆ. ಅದನ್ನು ಅವರು ಬಾಯಿ ಬಿಟ್ಟು ಹೇಳಿದ್ದರು ಕೂಡ.
ಡಿಸೆಂಬರ್ ಮೂವತ್ತೊಂದು ಬಂದಾಗ ನನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿದರು ಅಮ್ಮ. ಜನವರಿ ಒಂದರಂದು ನಾನು ಮಹಾಜನಾ ಹೈಸ್ಕೂಲಿಗೆ ಅಜ್ಜಿ ಮನೆಯಿಂದ ಹೋಗಲು ಶುರು ಮಾಡಿದೆ.
ಅಂದ ಹಾಗೆ ಏಳನೇ ಕ್ಲಾಸನ್ನೂ ಆಟವಾಡಿಕೊಂಡು ಪಾಸ್ ಮಾಡಿದ್ದೆ. 64 ಪರ್ಸೆಂಟ್ ತೆಗೆದುಕೊಂಡಿರಬಹುದೆಂದು ನೆನಪು. ಮಹಾಜನಾ ಪ್ರೌಢಶಾಲೆಗೆ ನನ್ನನ್ನು ಸೇರಿಸಿದರು.
ಈಗ ಲೋಕೋ ಕಾಲೋನಿಯ ಮನೆಯಿಂದ ಕಾಳಿದಾಸ ರಸ್ತೆಯಲ್ಲಿ ನಡೆದು ಮಹಾಜನಾ ಹೈಸ್ಕೂಲು ತಲುಪುತ್ತಿದ್ದೆ. ನನ್ನ ಜೊತೆ ಓದಿದ ರಘುನಾಥ್, ಶ್ರೀಧರ್ ಇಲ್ಲಿಗೂ ಬಂದರು. ಜೊತೆಗೆ ನನ್ನ ಬಾಲ್ಯದ ಗೆಳೆಯ ಎನ್ ಆರ್ ಮೊಹಲ್ಲಾದಲ್ಲಿ ನನ್ನಜ್ಜಿಯ ಅಣ್ಣನ ಮನೆಯ ಬಳಿ ಇದ್ದ ನರಸಿಂಹ ಒಂಟಿಕೊಪ್ಪಲ್ ಹದಿನಾರನೇ ಕ್ರಾಸ್ ಮನೆಗೆ ಬಂದಿದ್ದ. ಅವನ ತಂದೆಯವರೂ ರೈಲ್ವೇಯಲ್ಲಿ ಕೆಲಸ. ಅವನ ತಾಯಿ ಗುಡ್‍ಷೆಪರ್ಡ್ ಕಾನ್ವೆಂಟ್‍ನಲ್ಲಿ ಟೀಚರ್. ನರಸಿಂಹನಿಗೆ ಒಬ್ಬ ತಮ್ಮ, ಇಬ್ಬರು ತಂಗಿಯರು.
ಅವನ ಮನೆಗೆ ಸಮಯ ಸಿಕ್ಕಾಗ ಹೋಗುತ್ತಿದ್ದೆ. ಜನವರಿ ತಿಂಗಳಿನಿಂದ ದಿನವೂ ಹೋಗುತ್ತಿದ್ದ ನೆನಪು.
ಏಕೆಂದರೆ ಹೈಸ್ಕೂಲ್ ಮೇಷ್ಟರು ಕೆಜಿ ಆರ್ ಮನೆಯಲ್ಲಿ ಸುಧಾ ಪತ್ರಿಕೆ, ನರಸಿಂಹನ ಮನೆಯಲ್ಲಿ ಚಂದಮಾಮ ಪತ್ರಿಕೆ ಬರುತ್ತಿದ್ದವು.
ಅವನ್ನು ಓದುವುದೇ ಖುಷಿ. ಚಂದಮಾಮದ ರಕ್ಕಸಕೊಳ್ಳ, ಚಂದಮಾಮನ ಮಂದಹಾಸ, ನವಾಬ ನಂದಿನಿ, ದುರ್ಗೇಶ ನಂದಿನಿ ಆಗ ಓದಿದ್ದೆ. ಈಗ ಕತೆಗಳು ನೆನಪಿಲ್ಲ. 
ಸುಧಾದಲ್ಲಿ ಬಿ ಪುಟ್ಟಸ್ವಾಮಯ್ಯನವರ ಧಾರಾವಾಹಿ ದ್ವಾಸುಪರ್ಣಾ ಅರ್ಥವಾಯಿತೋ ಬಿಟ್ಟಿತೋ ಸ್ಪರ್ಧಾತ್ಮಕವಾಗಿ ನಾನು, ನರಸಿಂಹ ಓದುತ್ತಿದ್ದೆವು. ಆ ಮನೆಯೊಂದಿಗೆ ನನಗೆ ಯಾವುದೋ ಅವಿನಾಭಾವ ಸಂಬಂಧವಿತ್ತು. ಅದು ಸ್ಪಷ್ಟವಾಗಿದ್ದ 1979ರಲ್ಲಿ. ಅದರ ವಿಷಯ ಆಮೇಲೆ.
ನಾನಿನ್ನೂ 1966 ಜೂನ್ ನಂತರದ ದಿನಗಳಲ್ಲಿ ಇದ್ದೇನೆ.
ಕನ್ನಡ ಮಾಧ್ಯಮದಲ್ಲಿ ಓದಿದ ನನ್ನನ್ನು ಇಂಗ್ಲೀಷ್ ಮೀಡಿಯಂಗೆ ಸೇರಿಸಿಬಿಟ್ಟರು.
ಓ ಎಂದರೆ ಠೋ ಎನ್ನಲು ಬರದಿದ್ದ ಸಮಯವದು.
ನಮ್ಮ ಅಪ್ಪ ರಾತ್ರಿ ಒಂಬತ್ತು ಗಂಟೆಗೆ ರೇಡಿಯೋದಲ್ಲಿ ಕೇಳುತ್ತಿದ್ದ ದಿಸ್ ಈಸ್ ಆಲಿಂಡಿಯಾ ರೇಡಿಯೋ. ದ ನ್ಯೂಸ್ ರೆಡ್ ಬೈ ಸುರುಜಿತ್ ಸೇನ್ ಅಥವಾ ಇನ್ಯಾರೋ... ಆ ಮಾತುಗಳೇ ನನಗೆ ಠಸ್‍ಪುಸ್ ಎಂದು ಕೇಳಿಸುತ್ತಿತ್ತು.
ಈಗ ನೋಡಿದರೆ ಇಂಗ್ಲೀಷ್ ಮೀಡಿಯಂ. ಕನ್ನಡ ಮೇಷ್ಟರು ರಾಘವಚಾರ್ ಕ್ಲಾಸ್ ಎಂದರೆ ಖುಷಿ. ಅನಸೂಯ, ಅನಸೂಯ, ವಿಶ್ವೇಶ್ವರ, ರಾಮಕೃಷ್ಣ, ಶ್ರೀಕಂಠರಾವ್, ಅಂಜನಕುಮಾರಿ ... ಜಿಪಿ ಸುಬ್ಬರಾಯ... ಇಷ್ಟೇ ಹೆಸರುಗಳು ನಮ್ಮ ಮೇಡಂ, ಮೇಷ್ಟರುಗಳದ್ದು ನನಗೆ ಇಂದಿಗೂ ನೆನಪಿದೆ.
ಇದ್ಯಾವ ಗ್ರಾಚಾರ? ಏನೂ ಅರ್ಥವಾಗದಿದ್ದರೆ ಪರೀಕ್ಷೆ ಬರೆಯುವುದು ಹೇಗೆ? ಮುಂದಿನ ತರಗತಿಗೆ ಹೋಗುವುದು ಹೇಗೆ?
-0-0-0-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102