ಯತಿ ಸ್ವಂತೀ -142
22-05-2018
ನಮ್ಮ ರೈಲ್ವೇ ಸ್ಟೇಷನ್‍ನಲ್ಲಿ ಒಂದು ವಿಶೇಷವಿತ್ತು. ಬೆಂಗಳೂರು ಮತ್ತು ಅರಸೀಕೆರೆಯಿಂದ ಬರುತ್ತಿದ್ದ ರೈಲುಗಾಡಿಗಳ ಎಂಜಿನ್‍ಗಳು ದಕ್ಷಿಣ ದಿಕ್ಕಿಗೆ ತಿರುಗಿಕೊಂಡು ಮೈಸೂರು ತಲುಪುತ್ತಿದ್ದವು. ಚಾಮರಾಜನಗರದ ರೈಲು ಉತ್ತರಕ್ಕೆ ಮುಖ ಮಾಡಿಕೊಂಡಿರುತ್ತಿತ್ತು.
ಇವನ್ನು ಮತ್ತೆ ಆಯಾ ಯಥಾಸ್ಥಿತಿಗೆ ತರಲು ಅವುಗಳ ‘ಮುಖ’ವನ್ನು ತಿರುಗಿಸಬೇಕಿತ್ತು.
ಅದಕ್ಕೆ ಒಂದು ಟರ್ನ್ ಟೇಬಲ್ ಇತ್ತು.
ಅದೊಂದು ವೃತ್ತಾಕಾರದ ವೇದಿಕೆ. ಅದನ್ನು ಒಂದು ಹಳ್ಳದಲ್ಲಿ ಒಂದು ಉಕ್ಕಿನ ಕಂಬಿಯ ಆಧಾರದಿಂದ ನಿಲ್ಲಿಸಿದ್ದರು. ಆ ವೇದಿಕೆಗೆ ಎರಡು ಕಡೆ ಲಂಬವಾಗಿದ್ದ ಕಂಬಿಗಳು ಬೆಸುಗೆ ಹಾಕಲ್ಪಟ್ಟಿದ್ದವು.
ಎಂಜಿನ್ ಅನ್ನು ಅದರ ಮೇಲೆ ನಿಲ್ಲಿಸಿ ಇಬ್ಬರು ರೈಲ್ವೇ ಉದ್ಯೋಗಿಗಳು ಅದನ್ನು ತಿರುಗಿಸುತ್ತಿದ್ದರು. ಸಲೀಸಾಗಿ ತಿರುಗುವ ವೇದಿಕೆಯದು. ಚೆನ್ನಾಗಿ ಎಣ್ಣೆ ಪಣ್ಣೆ ಹಾಕಿರುತ್ತಿದ್ದರು.
ಅದೋ ಮತ್ತೆ ಚಾಮರಾಜನಗರದ ಎಂಜಿನ್ ದಕ್ಷಿಣಕ್ಕೂ, ಬೆಂಗಳೂರು ಅರಸೀಕೆರೆ ಎಂಜಿನ್ನುಗಳು ಉತ್ತರಕ್ಕೂ ತಿರುಗಿಕೊಂಡವು!
ಇದಕ್ಕೆ ಪರ್ಯಾಯವಾಗಿ ಒಂದು ‘ತ್ರಿಕೋಣ’ವಿತ್ತು. ಅದು ನಮ್ಮ ಮನೆಯ ಮುಂದಿನ ಫೀಲ್ಡ್ ದಾಟಿದರೆ ಅಲ್ಲಿತ್ತು.
ದಕ್ಷಿಣಕ್ಕೆ ಮುಖ ಮಾಡಿದ ಎಂಜಿನ್ ಉತ್ತರದಿಂದ ಪೂರ್ವ ದಿಕ್ಕಿಗೆ ಬಂದಾಗ ಅಲ್ಲೊಂದು ಪಾಯಿಂಟ್ ಸನ್ನೆ ಇತ್ತು. ಅದನ್ನು ಇನ್ನೊಂದೆಡೆಗೆ ಎಳೆದರೆ ಕಂಬಿಗಳು ಮತ್ತೊಂದು ಜೊತೆ ಕಂಬಿಗಳೊಂದಿಗೆ ಹೊಂದಿಕೊಳ್ಳುತ್ತಿದ್ದವು. ಆಗ ಎಂಜಿನ್ ಪಶ್ಚಿಮ ದಿಕ್ಕಿಗೆ ತಿರುಗಿ, ನಂತರ ಉತ್ತರಕ್ಕೆ ತಿರುಗುತ್ತಿತ್ತು.
ಒಮ್ಮೆ ಟರ್ನ್ ಟೇಬಲ್ ಕೆಟ್ಟಾಗ ನಮ್ಮ ಮನೆಯ ಮುಂದೆ ಎಂಜಿನ್‍ಗಳ ಭರಾಟೆ ಶುರುವಾದವು. ಈಗಿನಷ್ಟು ರೈಲುಗಳು ಆಗ ಇರಲಿಲ್ಲ. ಆದರೂ ಸಾಕಷ್ಟು ಇದ್ದವು.
ನಮ್ಮ ಮನೆಯ ಮುಂದೆ ಒಂದು ಎಂಜಿನ್ ಕಂಬಿಯಿಂದ ಕೆಳಕ್ಕೆ ಜಾರಿಕೊಂಡಿತು!
ಮತ್ತೆ ಅದನ್ನೆತ್ತಲು ಕ್ರೇನ್. ವಾಹ್.... ಅದೆಷ್ಟು ಮಜಾ ಇತ್ತು ಅಂತೀರಿ...
ಇವೆಲ್ಲವನ್ನೂ ನಾನು ಈಗ ಕೇವಲ ನೆನೆಸಿಕೊಳ್ಳಲು ಮಾತ್ರ ಸಾಧ್ಯ.
ರೈಲುಗಾಡಿಗಳ ಸಾಲನ್ನು ಫಾರ್ಮೇಷನ್ ಎನ್ನುತ್ತಾರೆ. ಯಾವ ಊರಿಗೂ ಹೋಗದ ಫಾರ್ಮೇಷನ್‍ಗಳು ನಮ್ಮ ಮನೆಯ ಮುಂದಿನಿಂದ ರೈಲ್ವೇ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿ ನಿಂತಿರುತ್ತಿದ್ದವು. ಅವುಗಳೊಳಗೆ ಹತ್ತಿ ಆ ಕಡೆ ಇಳಿಯುವುದೊಂದು ಮಜಾ. ಎರಡು ಬೋಗಿಗಳ ನಡುವೆ ಇರುವ ಕೊಂಡಿಯನ್ನು ಹತ್ತಿ ಇಳಿಯುವುದೊಂದು ಥ್ರಿಲ್. ಅದು ಸ್ವಲ್ಪ ಎತ್ತರವಾದ ಮೇಲೆ ಮಾಡಿದ ಕೆಲಸ.
ಕೆಲವು ಸಲ ಒಂದು ಒಂಟಿ ವ್ಯಾಗನ್ ನಮ್ಮ ಮನೆಯ ಬಳಿ ಟ್ರಯಾಂಗಲ್ ಮೇಲೆ ಇರುತ್ತಿತ್ತು. ಅದನ್ನು ಕಷ್ಟ ಪಟ್ಟು ‘ಅಪ್’ಗೆ ನೂಕಿಕೊಂಡು ಹೋಗಿ ಆಮೇಲೆ ಅದನ್ನು ಹತ್ತಿ ‘ಡೌನ್’ನಲ್ಲಿ ಜುಂಯ್ ಎಂದು ಬರುವುದು. ಪಾಯಿಂಟ್ ಸನ್ನೆಯ ದಿಕ್ಕು ಬದಲಿಸಿ ಇನ್ನೊಂದು ಕಡೆಗೆ ಅದನ್ನು ತೆಗೆದುಕೊಂಡು ಹೋಗುವುದು.
ದೊಡ್ಡವರಾಗುತ್ತಾ ಆಗುತ್ತಾ, ಹೈಸ್ಕೂಲಿಗೆ ಬರುತ್ತಿದ್ದಂತೆ ಅವೆಲ್ಲವನ್ನೂ ಬಿಟ್ಟೆವು.
ಐಸ್‍ಪೈಸ್, ಗುಲ್ಟೋರಿಯಾಗಳೆಲ್ಲಾ ಮಾಯವಾದವು. ಕ್ರಿಕೆಟ್, ಫುಟ್‍ಬಾಲ್ (ಮನೆಯ ಮುಂದಿನ ದೊಡ್ಡ ಫೀಲ್ಡ್‍ನಲ್ಲಿ).
ಹೈಸ್ಕೂಲಿಗೆ ಬಂದೊಡನೆ ನನ್ನ ಜೀವನದಲ್ಲಿ ಜನವರಿ ಬಂದಾಗ ಬದಲಾವಣೆ ಬಂದಿತು.
-0-0-0-
Comments
Post a Comment