ಯತಿ ಸ್ವಂತೀ -141
21-05-2018
ನಾನು, ನನ್ನ ದೊಡ್ಡ ತಂಗಿ ನಮ್ಮ ಮನೆಯ, ಬಂಧುಗಳ ಸಮಾರಂಭಗಳಲ್ಲಿ ಹಾಡುತ್ತಿದ್ದೆವು. ನಮ್ಮೂರ್‍ನಾಗ್ ನಾನೊಬ್ನೆ ಜಾಣ, ವಹರೆ ಮೇರ ಮುರುಗ ಈ ಎರಡು ಹಾಡುಗಳು ಬಹಳ ಸಲ ಹಾಡಿದ್ದೇವೆ.
ಹಾಡು, ಹಾಡು ಎನ್ನುತ್ತಿದ್ದರು ಎಲ್ಲ. ನಮ್ಮ ತಾಯಿಯ ತಂದೆಯವರ 70ನೇ ಹುಟ್ಟುಹಬ್ಬದಲ್ಲಿ ಬಸ್‍ನಲ್ಲಿ ಬೃಂದಾವನ ಉದ್ಯಾನವನಕ್ಕೆ ನಮ್ಮ ತಾಯಿಯ ಕಡೆಯ ಹೆಚ್ಚು ಕಡಿಮೆ ಎಲ್ಲರೂ ಹೋಗಿದ್ದೆವು. ಆಗ ನಮ್ಮಿಬ್ಬರದೇ ಮುಖ್ಯ ಮನರಂಜನೆ. ಇಬ್ಬರಿಗೂ ನೋ ಹ್ಯಾಂಗಪ್ಸ್. ಹಾಡು ಎಂದೊಡನೆ ಹಾಡಿಬಿಡೋದೇ!
ಇದೇ ಬುದ್ಧಿ ನನಗೆ ಎಲ್ಲೆಲ್ಲೂ ಇತ್ತು. ನನ್ನ ದೊಡ್ಡಮ್ಮನ ಮಗನ 60ನೇ ವಯಸ್ಸಿನಲ್ಲೂ ಯತ್ರಾಜ್ ಮಾಮಾ ಹಾಡೂ ಎಂದೊಡನೆ ಬಾನಿಗೊಂದು ಎಲ್ಲೆ ಎಲ್ಲಿದೇ ಹಾಡಿದ್ದೆ.
ಹಿಂದೊಮ್ಮೆ ರೋಟರಾಕ್ಟ್ ಕ್ಲಬ್‍ನಲ್ಲಿ ಕ್ಲಬ್‍ಸರ್ವಿಸಸ್ ಡೈರೆಕ್ಟರ್ ಮತ್ತು ಮಾಸಪತ್ರಿಕೆ ‘ಡೆಡಿಕೇಶನ್’ ಸಂಪಾದಕನಾಗಿದ್ದಾಗ ನನ್ನ ಹುಟ್ಟು ಹಬ್ಬದಂದು ಶಾಂತಿನಗರದ ‘ವಾತ್ಸಲ್ಯ’ದಲ್ಲಿ ಹಾಡಿದ್ದೆ ಮರೆಯದಿರೂ ಸ್ನೇಹ ಎಂದು.
ನಮ್ಮ ಕಂಪೆನಿ ಮಂತ್ರ ಶುರುವಾದ ದಿನ ‘ಮೈ ಶಾಯರ್ ತೋ ನಯೀ’ ಹಾಡಿದ್ದೆ.
ಟ್ಯಾಲಿಯಲ್ಲಿದ್ದಾಗ ಒಮ್ಮೆ ಶಮ್ಮಿಕಪೂರ್ ಮತ್ತೊಮ್ಮೆ ಮುಖೇಶನ ಹಾಡುಗಳಿಗೆ ‘ಕುಣಿ’ದಿದ್ದೆ.
ಮಂಜಣ್ಣ ಡಿವಿಜಿ ಹುಟ್ಟು ಹಬ್ಬ ಮಾಡಿದಾಗ ಮತ್ತೆ ಮುಖೇಶ್ ಹಾಗೂ ಹಳೆಯ ಹಾಡುಗಳಿಗೆ ಮತ್ತೆರಡು ಸಲ ಥೈಥಕ!
ನಾಟಕ, ನೃತ್ಯ ಕೂಡ ರಂಗಸ್ಥಳದಲ್ಲಿ ಮಾಡಿದ್ದುಂಟು. ಗಂಡ್ಸಲ್ವೇ ಗಂಡ್ಸು ನಾಟಕ ನನಗೆ 20 ವರ್ಷಗಳಾಗಿದ್ದಾಗ, ಅಳಿಯ ದೇವರು ನನಗೆ 15 ವರ್ಷಗಳಾಗಿದ್ದಾಗ ನಟಿಸಿದ್ದೆ.
ಕಂ ಸೆಪ್ಟೆಂಬರ್ ಮತ್ತು ಸ್ಪ್ಯಾನಿಷ್ ಜಿಪ್ಸಿ ಹಾಡುಗಳಿಗೆ ನನ್ನ ತಂಗಿಯೇ ನನ್ನ ಡ್ಯಾನ್ಸ್ ಪಾರ್ಟ್‍ನರ್.
ದುರದೃಷ್ಟವಶಾತ್, ಆ ಪಟಗಳು ಯಾವುವೂ ನನ್ನ ಬಳಿ ಇಲ್ಲ. ಈಗಲೇ ನನ್ನ ಬಳಿ ಹತ್ತುಸಾವಿರ ಪಟಗಳಿರಬಹುದಾ ಎನ್ನುವವರಿದ್ದಾರೆ!
ಆ ಪಟಗಳೂ ಇದ್ದಿದ್ದರೆ! ಎನಿಸದಿರದು.
ಆದರೆ ನೋ ರಿಗ್ರೆಟ್ಸ್. ಇಲ್ಲ, ಇಲ್ಲ ಅಷ್ಟೇ.
ಮನದೊಳಗೆ ಅದರ ನೆನಪು ಭದ್ರವಾಗಿದೆ.
ಗೀತ್‍ಮಾಲಾ ಕಾರ್ಯಕ್ರಮದಲ್ಲಿ ಪ್ರತಿ ಬುಧವಾರ ರಾತ್ರಿ ಎಂಟು ಗಂಟೆಗೆ ಸಿಗ್ನೇಚರ್ ಟ್ಯೂನ್ ಟಡಡಾ ಟಡಡ ಡಡಡಾ .. ಅಂತ ಬರ್ತಿತ್ತು.
ಅದು ನಮ್ಮ ಸ್ಪ್ಯಾನಿಷ್ ಜಿಪ್ಸಿ ಡ್ಯಾನ್ಸ್ ಹಾಡಿನ ಒಂದು ಅರಿತಾಗ ಏನೋ ಒಂದು ರೋಮಾಂಚನ!
ಮೈಸೂರು ಚೆಲುವಾಂಬ ಪಾರ್ಕಲ್ಲಿ ಬುಧವಾರ ರಾತ್ರಿ ಎಂಟು ಗಂಟೆಗೆ ರೇಡಿಯೋ ಹಚ್ಚುತ್ತಿದ್ದರು. ಅಲ್ಲಿ ಗೀತ್‍ಮಾಲಾ ಕೇಳಿದ ನೆನಪಿದೆ.
ರಾಮಕೃಷ್ಣ ಆಶ್ರಮದ ಒಳಗೆ ಹೋಗಿ ಆ ದೈವಮೌನವನ್ನು ಮನಸಾರೆ ಆನಂದಿಸಿದ ದಿನಗಳಿವೆ.
ನಮ್ಮ ಮೈಸೂರು ವೆಂಕಟರಮಣ ಗುಡಿಯಲ್ಲಿ ಟಣ್ ಢಣ್ ಟಣ್ ಢಣ್ ಸದ್ದುಗದ್ದಲಗಳ ನಡುವೆ ಭಗವಂತನ ಮಂಗಳಾರತಿಯಲ್ಲಿ ದೇವದೇವನ ನಾಮದ ಮೇಲೆ ಫಳಫಳವೆನ್ನುವ ಜ್ಯೋತಿಯನ್ನು ನೋಡಿ ಆನಂದಿಸಿದ್ದೇನೆ.
ಅರಮನೆಯ ಹೊರಗಡೆ ಇರುವ ಹನುಮಂತನ ಗುಡಿಯಲ್ಲಿ ಹೆದರಿದ ಮಕ್ಕಳಿಗೆ ನಮ್ಮ ದೂರದ ಬಂಧು ಪುರೋಹಿತ ಸಿಂಹರಾಜರು ‘ಹೋ’ ಎಂದು ಕಿರುಚಿ ಮಕ್ಕಳನ್ನು ‘ಬೆದರಿಸಿ’ ನಂತರ ತಾಯಿತ ಕಟ್ಟುತ್ತಿದ್ದುದು ನೆನಪಿದೆ. ಬೂಬಮ್ಮಗಳು ಕೂಡ ತಮ್ಮ ಮಕ್ಕಳಿಗೆ ತಾಯಿತ ಕಟ್ಟಿಸುತ್ತಿದ್ದುದನ್ನು ಕಂಡಿದ್ದೇನೆ.
-0-0-0-
Comments
Post a Comment