ಯತಿ ಸ್ವಂತೀ -140
20-05-2018
1968ರಲ್ಲಿ ಅಯ್ಯ ಮತ್ತೊಂದು ಟೂರ್ ಹೋಗಲು ಸಿದ್ಧತೆ ನಡೆಸಿದರು. ಈ ಸಲ ದೆಹಲಿ ಎಂದು ನಿರ್ಧರಿಸಿದ್ದರು.
ನಮ್ಮ ಅಯ್ಯನ ತಾಯಿ ಅಂದರೆ ನನ್ನ ಅಜ್ಜಿ ಕೂಡ ಈ ಸಲ ನಮ್ಮೊಂದಿಗೆ ಟೂರ್ ಬರುವ ವಿಷಯ ತಿಳಿಯಿತು.
ನನ್ನ ಎರಡನೆಯ ತಂಗಿಗಾಗ ಒಂದೂವರೆ ವರ್ಷಗಳು. ಈ ಸಲ ಅವಳನ್ನು ನಮ್ಮ ತಾಯಿಯ ದೊಡ್ಡ ಅಕ್ಕನ ಮನೆಯಲ್ಲಿ ಬಿಡುವ ತೀರ್ಮಾನವಾಯಿತು. ಬಹಳ ಚಿಕ್ಕವಳು ಎಂದು. ಹಿಂದಿನ ಸಲ ನನ್ನ ದೊಡ್ಡ ತಂಗಿಗೆ ದಕ್ಷಿಣ ಭಾರತ ಮಿಸ್ ಆಗಿತ್ತು. ಈಗ ಅವಳಿಗೆ ಒಂಬತ್ತು ವರ್ಷಗಳಾದ್ದರಿಂದ ಅವಳನ್ನು ಈ ಟೂರ್‍ಗೆ ಕನ್ಸಿಡರ್ ಮಾಡಿದರು!
ಅಮ್ಮ, ನಾನು, ಅಯ್ಯ, ದೊಡ್ಡ ತಂಗಿ ಮತ್ತು ಅಜ್ಜಿ ಊರಿಗೆ ಹೊರಟೆವು. ನನ್ನ ಚಿಕ್ಕ ತಂಗಿಯನ್ನು ರೈಲ್ವೇ ನಿಲ್ದಾಣಕ್ಕೆ ಕರೆತಂದಿದ್ದರು ನಮ್ಮ ದೊಡ್ಡಮ್ಮ. ಇಷ್ಟು ಹೊತ್ತಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ದೊಡ್ಡದಾಗಿ ಕಟ್ಟಲ್ಪಟ್ಟಿತ್ತು. ನಮ್ಮ ದೊಡ್ಡಪ್ಪನಿಗೆ ಬೇರೆ ಮನೆಯನ್ನು ಕೊಡಲಾಗಿತ್ತು. ನನ್ನ ಪುಟ್ಟ ತಂಗಿ ಟಾಟಾ ಮಾಡಿದಳು!
ಅಲ್ಲಿ ಗ್ರ್ಯಾಂಡ್ ಟ್ರಂಕ್ ಎಕ್ಸ್‍ಪ್ರೆಸ್ (ಜಿ.ಟಿ) ಹತ್ತಿ ದೆಹಲಿಗೆ ಹೋದೆವು. ಅಮ್ಮ ದಿನವೂ ಎರಡು ಸಲ ಕಾಫಿ ಮಾಡುತ್ತಿದ್ದರು ರೈಲಿನಲ್ಲಿ. ಮನೆಯಿಂದ ನೆಸ್‍ಕೆಫೆ ಕಾಫಿ ಪುಡಿ ಮತ್ತು ನೆಸ್ಲೆ ಮಿಲ್ಕ್‍ಮೆಯ್ಡ್ ತಂದಿದ್ದರು. ರೈಲುಗಾಡಿಯ ಪ್ಯಾಂಟ್ರಿಯಿಂದ ಬಿಸಿನೀರು ತರಿಸಿ, ಅದಕ್ಕೆ ಕಾಫಿಪುಡಿ ಮತ್ತು ಮಿಲ್ಕ್‍ಮೆಯ್ಡ್ (ಸಕ್ಕರೆ ಹಾಕಿದ ಥಿಕ್ ಮಿಲ್ಕ್) ಬೆರೆಸಿ ಕಾಫಿ ಮಾಡುತ್ತಿದ್ದರು.
ದೆಹಲಿಯಲ್ಲಿ ನನ್ನ ಅಮ್ಮನ ಚಿಕ್ಕಮ್ಮನ ಮಗ ಇದ್ದರು. ಅವರ ಮನೆಗೆ ಹೋದೆವು.
ದೆಹಲಿಯ ನಗರ ಪ್ರದಕ್ಷಿಣೆ ಮಾಡಿದೆವು. ಕೆಂಪುಕೋಟೆ, ಅದರ ಒಳಗಿನ ದಿವಾನಿ ಖಾಸ್ ಇತ್ಯಾದಿ, ಹುಮಾಯೂನನ ಸಮಾಧಿ, ಕುತುಬ್ ಮಿನಾರ್.
ಕುತುಬ್ ಮಿನಾರ್‍ನಲ್ಲಿ ಮೊದಲ ಹಂತದವರೆಗೂ ಆಗ ಹೋಗಬಹುದಿತ್ತು. ಅಲ್ಲಿಯವರೆಗೆ ಧುಸ್ಸು ಬುಸ್ಸು ಎಂದು ಹತ್ತಿದ ನೆನಪು. ಮೇಲಿನಿಂದ ನೋಡಿದರೆ ಮೇಲೆ ಹತ್ತದಿದ್ದ ನಮ್ಮ ಅಜ್ಜಿ ಕುತುಬ್ ಮಿನಾರ್ ಬುಡದಲ್ಲಿ ಕುಳಿತಿದ್ದವರು ಪುಟ್ಟ ಗೊಂಬೆಯಂತೆ ಕಾಣಿಸುತ್ತಿದ್ದರು.
ಇತ್ತೀಚೆಗೆ ತೆರೆ ಘರ್ ಕೆ ಸಾಮನೇ ಚಿತ್ರ ನೋಡಿದೆ. ಆಗಿನ ಕಾಲಕ್ಕೆ ಕುತುಬ್‍ಮಿನಾರ್‍ನ ತುಟ್ಟತುದಿಗೆ ಹೋಗಬಹುದಿತ್ತು. ನಾಯಕ ದೇವ್ ಆನಂದ್ ಮತ್ತು ನಾಯಕಿ ನೂತನ್ ಅಲ್ಲಿಯವರೆಗೆ ಹತ್ತಿ ಅಲ್ಲಿಂದ ಇಳಿಯುತ್ತಾ ‘ದಿಲ್‍ಕ ಭವರ್ ಕರೆ ಪುಕಾರ್ ಪ್ಯಾರ್ ಕಾ ರಾಗ್ ಸುನೋ’ ಹಾಡುತ್ತಾರೆ.
ಬಹುಶಃ ಅನೇಕ ನಿರಾಸೆ ಹೊಂದಿನ ಪ್ರೇಮಿಗಳು ಕುತುಬ್‍ಮಿನಾರ್ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆಂದೋ ಏನೋ, ಈಗ ಕುತುಬ್‍ಮಿನಾರ್ ಕೇವಲ ಕೆಳಗಿನಿಂದ ವೀಕ್ಷಿಸುವ ಚಾರಿತ್ರಿಕ ಕಟ್ಟಡವಾಗಿದೆ.
ದೆಹಲಿಯ ಅಫ್ಜಲ್ ಖಾನ್ ರಸ್ತೆಯ ಮಾರುಕಟ್ಟೆಗೆ ಹೋದ ನೆನಪಿದೆ.
ಬಿರ್ಲಾ ಮಂದಿರ್ (ಲಕ್ಷ್ಮೀನಾರಾಯಣ್ ದೇವಸ್ಥಾನ) ನೋಡಿದೆವು. ಮೊಟ್ಟಮೊದಲ ಸಲ ಬಿಳಿಯ ಶಿಲೆಯ ದೇವರ ಮೂರ್ತಿಯನ್ನು ಕಂಡಿದ್ದು.
-0-0-0-
Comments
Post a Comment