ಯತಿ ಸ್ವಂತೀ -139
19-05-2018
ನಾನು ಐದನೇ ಕ್ಲಾಸಿನಲ್ಲಿದ್ದಾಗ ನಮ್ಮ ಶಾಲೆಯಿಂದ ಒಂದು ಟ್ರಿಪ್ ಹೋಗಿದ್ದೆವು. ಅದೊಂದು ಹೊಸ ಅನುಭವ ನಮಗೆ.
ತಿರುಮಕೂಡ್ಲು ನರಸೀಪುರ, ಸೋಮನಾಥಪುರ, ತಲಕಾಡು ಮತ್ತು ಬ್ಲಫ್ಫು (ಶಿವನಸಮುದ್ರ).
ಏನೋ ಖುಷಿ. ಬಸ್ಸಿನಲ್ಲಿ ಕೂಗಾಡುತ್ತಾ ಹೋಗಿದ್ದೆವು. ನನ್ನ ತರಗತಿಯ ಕೆಲವರ ಹೆಸರು ನೆನಪಿದೆ. ಶ್ರೀಧರ, ರಘುನಾಥ್, ವಾಯ್‍ಚಲ್, ಬಾಬ್ಬಿ ಸ್ಟೀವನ್‍ಸನ್.
ಉಪ್ಪಿಟ್ಟು ಮಾಡಿಸಿದ್ದರು ಶಾಲೆಯವರು. ಅದನ್ನು ತಿಂದೆ ವು. ಮಧ್ಯಾಹ್ನ ಸಾಂಬಾರ್ ಅನ್ನ, ಮೊಸರನ್ನ, ಮೈಸೂರು ಪಾಕ್ (?) ಎಲ್ಲವೂ ಇದ್ದವು.
ನರಸೀಪುರ ಅಷ್ಟು ನೆನಪಿಲ್ಲ. ಸೋಮನಾಥಪುರದ ಹೊಯ್ಸಳ ರೀತಿಯ ಶಿಲ್ಪದ ನೆನಪಿದೆ. ಏಕೆಂದರೆ ಇನ್ನೊಮ್ಮೆ ಹೋಗಿದ್ದೆ. ತಲಕಾಡು ಕೂಡ ಮತ್ತೊಮ್ಮೆ ಹೋಗಿದ್ದರಿಂದ ನೆನಪಿದೆ. ಆದರೆ ತಲಕಾಡಿನಲ್ಲಿ ಯಾವ ದೇವಸ್ಥಾನವನ್ನೂ ನೋಡಲಾಗಿರಲಿಲ್ಲ ಮೊದಲ ಸಲ. ಏಕೆಂದರೆ ಮರಳಿನಲ್ಲಿ ಮುಚ್ಚಿಹೋಗಿತ್ತು.
ಮೈಸೂರು ಅರಸರಿಗೆ ಅಲಮೇಲಮ್ಮನ (ಶ್ರೀರಂಗಮ್ಮನ?)ಶಾಪ ಎನ್ನುತ್ತಾರೆ. ತಲಕಾಡು ಮರಳಾಗಿ....
ಮತ್ತೊಮ್ಮೆ ನಾನು, ನನ್ನ ಪತ್ನಿ, ಇಬ್ಬರು ಮಕ್ಕಳು, ಮಾವ ಮತ್ತು ಅತ್ತೆ ಹೋಗಿದ್ದೆವು. ಆಗ ತಲಕಾಡು ದೇವಸ್ಥಾನಗಳಿಗೆ ಭೇಟಿ ನೀಡಿದ್ದೆವು. ಕೀರ್ತಿನಾರಾಯಣ, ವೈದ್ಯನಾಥೇಶ್ವರ.
ಬ್ಲಫ್‍ನಲ್ಲಿ ನೀರು ನೋಡಿ ಖುಷಿ ಆದೆವು. ಇನ್ನೊಮ್ಮೆ ಹೋದಾಗ ಒಂದೇ ಒಂದು ತೊಟ್ಟು ನೀರು ಕೂಡ ಇರಲಿಲ್ಲ! ಮತ್ತೊಮ್ಮೆ ಹೋದಾಗ ನಾನೊಬ್ಬ ಮಾತ್ರ ಭರಚುಕ್ಕಿಗೆ ಇಳಿಯಲಿಲ್ಲ. ಉಳಿದವರೆಲ್ಲ ಹರಿಗೋಲಿನಲ್ಲಿ ಹೋದರೆಂದು ತಿಳಿದು ಹೊಟ್ಟೆಯುರಿದಿತ್ತು. ಏನು ಮಾಡಲಿ? ನನಗೆ ಪಾದ ಹೊರಳಿ ತಡೆಯಲಾಗದಷ್ಟು ನೋವು.
ಆರನೇ ಕ್ಲಾಸಿನಲ್ಲಿ ಎಲ್ಲಿಗೂ ಹೋಗಲಿಲ್ಲವೇನೋ.
ಏಳನೇ ತರಗತಿಯಲ್ಲಿದ್ದಾಗ ಮೈಸೂರು, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ, ರಂಗನತಿಟ್ಟು ಹೋದ ನೆನಪಿದೆ.
ಕೃಷ್ಣರಾಜ ಸಾಗರಕ್ಕೆ ಹೋದರೆ ನನಗೆ ಬೃಂದಾವನ ವನಕ್ಕಿಂತ, ಅಲ್ಲಿನ ಕಾರಂಜಿಗಳು, ವರ್ಣದೀಪಗಳಿಗಿಂತ ವಿಶ್ವೇಶ್ವರಯ್ಯ ನಾಲೆ ಎಂದರೆ ಹುಚ್ಚು.
ಅಲ್ಲಿ ಕಾವೇರಿ ನೂರು ಅಡಿಗಳಷ್ಟು ಕೆಳಕ್ಕೆ ಧುಮುಕಿ ಮತ್ತೆ ಮೇಲೆದ್ದು ಭೋರ್ಗರೆಯುತ್ತಾಳೆ. ಬಹುಶಃ ಆ ಜೋರು ಇರುವುದರಿಂದಲೇ ಮಂಡ್ಯದ ಕಬ್ಬು, ಬತ್ತದ ಗಿಡಗಳಿಗೆ ಕಾವೇರಿಯ ನೀರುಣಿಸಲು ರೈತರಿಗೆ ಸಾಧ್ಯವಾಗಿರುವುದೇನೋ!
ಕೃಷ್ಣರಾಜ ಸಾಗರದ ಅಣೆಕಟ್ಟೆಯ ಬಳಿ ನಿಂತು ಇಳಿಜಾರಿನಲ್ಲಿ ನೋಡಿದಾಗ ಕಾವೇರಿಯು ಶ್ರೀರಂಗಪಟ್ಟಣದ ಹಾದಿ ಹಿಡಿದಿರುವುದು ಕಾಣುತ್ತದೆ.
ಅಲ್ಲೇ ಬಲಮುರಿ ಕ್ಷೇತ್ರವಿದೆ. ಬಲಮುರಿಯಲ್ಲಿ ಇರುವ ಒಂದು ಚಿಕ್ಕ ಕಟ್ಟೆ. ಅದರ ಮೇಲೆ ಅಮೆರಿಕದ ಬಫೆಲೋ ಬಳಿಯ ನಯಾಗರಾ ಜಲಪಾತದಂತೆ ನೀರು ಆ ಕಟ್ಟೆಯ ಮೇಲಿನಿಂದ ಧುಮುಕುತ್ತದೆ. ಅನೇಕಾನೇಕ ಕನ್ನಡ, ತಮಿಳು, ತೆಲುಗು ಮತ್ತು ಹಿಂದೀ ಸಿನಿಮಾಗಳಲ್ಲಿ ಆ ಬಲಮುರಿ ‘ಫಾಲ್ಸ್’ ಕಾಣಿಸಿಕೊಂಡಿದೆ.
ಬಲಮುರಿಯಿಂದ ಒಂದು ಹರಿಗೋಲಿನಲ್ಲಿ ಪ್ರಯಾಣ ಮಾಡಿದರೆ ನಮ್ಮ ಸೋದರಮಾವ + ಚಿಕ್ಕಪ್ಪನ ಜಾಯಿಂಟ್ ವೆಞ್ಚರ್ ಇತ್ತು. ಅದೊಂದು 12 ಎಕರೆಯ ದ್ವೀಪ. ಅಲ್ಲಿ ಕಬ್ಬು ಬೆಳೆದಿದ್ದರು ನನ್ನ ಸೋದರ ಮಾವ ಮತ್ತು ಚಿಕ್ಕಪ್ಪ (ಇವರಿಬ್ಬರೂ ನನ್ನ ದೊಡ್ಡಮ್ಮನ ಇಬ್ಬರು ಮಕ್ಕಳನ್ನು ಮದುವೆಯಾಗಿದ್ದಾರೆ).
ನಾನು ಕಬ್ಬು ಸಿಗಿಯುತ್ತಿರುವ ಪಟವೊಂದಿದೆ, ಆ ಸುಂದರ ದ್ವೀಪದ ಮಧುರ ನೆನಪಾಗಿ.
-0-0-0-
Comments
Post a Comment