ಯತಿ ಸ್ವಂತೀ -138



18-05-2018

ಮಿಡ್ಲ್ ಸ್ಕೂಲಿನಲ್ಲಿ ಕುಮುದವಲ್ಲಿ ಮೇಡಂ, ಅವರ ತಂದೆ ಶೆಲ್ವಪಿಳ್ಳೆ ಅಯ್ಯಂಗಾರ್, ಶ್ರೀನಿವಾಸ ಐಯಂಗಾರ್ ಮತ್ತು ನನ್ನ ಪ್ರೈಮರಿ ಶಾಲೆಯಿಂದ ಬಂದ ನಾಗಲಕ್ಷ್ಮಮ್ಮ ಮಿಸ್ ನೆನಪಿದ್ದಾರೆ.

ಈ ಎಲ್ಲ ಮೇಷ್ಟರು ಮತ್ತು ಮೇಡಂಗಳು ಬೋರ್ಡ್ ಮೇಲೆ ಬರೆದಾದ ಏನಾದರೂ ಅಕ್ಷರ ತಪ್ಪಿದ್ದರೆ ಮೇಲೆದ್ದು ಡಸ್ಟರ್‍ನಲ್ಲಿ ಅಳಿಸಿ, ಚಾಕ್‍ಪೀಸ್ ತೆಗೆದುಕೊಂಡು ತಿದ್ದಿಬಿಡುತ್ತಿದ್ದೆ. ಸುಮ್ಮನೆ ನಕ್ಕುಬಿಡುತ್ತಿದ್ದರು.

ಯಾರೂ ನನ್ನನ್ನು ತಲೆಹರಟೆ ಎನ್ನಲಿಲ್ಲ. ಗಂಗಣ್ಣ ಮೇಷ್ಟರು ಬಂದರು.

ಅವರ ಮೇಲೂ ಅದೇ ಪ್ರಯೋಗ ಮಾಡಿದೆ. ಬಿಳಿಯ ಚಾಕ್‍ಪೀಸ್ ಪುಡಿ ಅಂಟಿಕೊಂಡಿದ್ದ ಕೈಯಲ್ಲೇ ನನ್ನ ಕೆನ್ನೆಯ ಮೇಲೊಂದು, ಕೈ ಮೇಲೊಂದು ಮತ್ತು ತೊಡೆಯ ಮೇಲೊಂದು ಬಾರಿಸಿದರು. ಆಗೆಲ್ಲ ನಾನು ಚಡ್ಡಿ ಹಾಕಿ ಸ್ಕೂಲಿಗೆ ಹೋಗುತ್ತಿದ್ದೆ.

ನನಗಾಗ ಪಿತ್ಥದ ಗಂಧೆ ಆಗುತ್ತಿತ್ತು. ಎಲ್ಲಿ ಗೀರಿದರೆ, ಎಲ್ಲಿ ಏಟು ಬಿದ್ದರೆ ಆ ಜಾಗ ಅದೇ ಶೇಪ್‍ನಲ್ಲೇ ಊದಿಕೊಳ್ಳುತ್ತಿತ್ತು.

ಇದು ನನ್ನ ಸಹಪಾಠಿಗಳಿಗೆ ಗೊತ್ತಿತ್ತು. ಆದರೆ ಗಂಗಣ್ಣ ಹೊಸಬರು. ನನ್ನ ಮೈಮೇಲಿನ ಊತಗಳನ್ನೂ, ನನ್ನ ಅಳುವನ್ನೂ ಕಂಡು ಬೆದರಿ ಮೆತ್ತಗಾದರು. ಇನ್ಮೇಲೆ ಹೊಡೆಯಲ್ಲ ಅಂದರು!

ತಮಾಷೆ ಎಂದರೆ ಈ ಪ್ರೂಫ್ ರೀಡಿಂಗ್ ಕೆಲಸ ನನ್ನ ಜೀವನದಲ್ಲಿ ಇಂದಿನವರೆಗೂ ಮುಂದುವರಿದಿದೆ. 1993ರಲ್ಲಿ ನನ್ನದೇ ಪ್ರಕಾಶನ ಸಂಸ್ಥೆಗಳನ್ನು ಆರಂಭಿಸಿದಾಗ ಅವುಗಳಲ್ಲಿ ಪ್ರಕಟವಾದ ಪುಸ್ತಕಗಳ ತಿದ್ದುಪಡಿ ನಾನೇ ಮಾಡಿದೆ. ಕೆಲವು ಸಲ ಗೆಳೆಯ ವಿದ್ಯಾರಣ್ಯ ಅವರ ಪ್ರಕಾಶನದ ಪುಸ್ತಕಗಳ ಪ್ರೂಫ್ ರೀಡಿಂಗ್ ಕೂಡ ಮಾಡಿದೆ.

ಈಗ ಅದು ನನ್ನ ವೃತ್ತಿಯೂ ಆಗಿದೆ. ನನಗೆ ಒಂದಿಷ್ಟು ಹಣವನ್ನೂ ಸಂಪಾದಿಸಿ ಕೊಡುತ್ತಿದೆ.

ಹ್ಞಾಂ... ನನ್ನ ಸೋದರಮಾವ ನಾರಾಯಣ ನನ್ನ ತೊಡೆಯ ಮೇಲೆ ರಂಧ್ರಗಳಿರುವ ಮೊಗಚುವ ಕೈಯಿಟ್ಟು, ಪೆನ್ನಿನ ನಿಬ್‍ನಿಂದ ಚುಚ್ಚುತ್ತಿದ್ದ ಪ್ರತಿ ರಂಧ್ರದೊಳಗೂ. ಆಮೇಲೆ ಅದೇ ರೀತಿ ಬನಾರಸ್ ಸೀರೆಯ ಬುಟ್ಟಾಗಳಂತೆ ಆ ಜಾಗಗಳು ಊದಿಕೊಳ್ಳುತ್ತಿದ್ದವು. ಸ್ವಲ್ಪ ಸಮಯದ ನಂತರ ಅದು ಮಾಯವಾಗುತ್ತಿತ್ತು.

ಕೆಲವು ವರ್ಷಗಳ ನಂತರ ನನ್ನ ಜೀವನದಿಂದಲೇ ಆ ಗಂಧೆಗಳು ಮಾಯವಾಗಿರುವುದು ಪವಾಡವೇ ಸರಿ!

ಮನೆಯ ಬಳಿ ಸಂಜೆಯ ವೇಳೆ ಕ್ರಿಕೆಟ್ ಆಡುವುದು ಆರಂಭವಾಗಿತ್ತು. ಸಿನಿಮಾಗಳನ್ನು ನೋಡಲಾರಂಭಿಸಿದೆ.

ಪಕ್ಕದ ಮನೆಗೆ, ಎದುರು ಮನೆಗೆ 1968ರಲ್ಲಿ ಹೊಸಬರು ಬಂದರು.

ಅವರೊಂದಿಗಿನ ನಮ್ಮ ಸ್ನೇಹ ಇಂದಿಗೂ ಉಳಿದುಕೊಂಡಿದೆ ಎಂದರೆ ಅಚ್ಚರಿ ಅಲ್ಲವೇ?

ಎದುರು ಮನೆಯ ಮುತ್ತುಕುಮಾರಸಾಮಿ ಅವರ ಪತ್ನಿ ಸಿವಗಾಮಿ ಅಮ್ಮನಿಗೆ ಬಹಳ ಒಳ್ಳೆಯ ಸ್ನೇಹಿತೆಯಾದರು. ಪಕ್ಕದ ಮನೆಯ ವೆಂಕ ನನಗೆ ತಮ್ಮನೇ ಆಗಿಬಿಟ್ಟ.

ನಾವು ರಾತ್ರಿ ಊಟ ಮಾಡಿ ಆಕಾಶವಾಣಿಯಲ್ಲಿ ಕನ್ನಡ ಹಾಡು ಕೇಳುತ್ತಾ ಮಲಗಿದಾಗ ಎದುರು ಮನೆಯ ಶಿವ ಆಂಟಿಯ ಜೊತೆ ಅಮ್ಮ ಮಾತಾಡುತ್ತಾ ಇರುತ್ತಿದ್ದರೆಂದು ನೆನಪು.

ಮುಂದೊಮ್ಮೆ ನನಗೆ ತಮಿಳುನಾಡಿಗೆ ಹೆಚ್ಚು ಟೂರ್ ಬಿದ್ದಾಗ ಶಿವ ಆಂಟಿಯ ಮಗ ಶಿವಕುಮಾರನ ಒಂದನೇ ತರಗತಿ ತಮಿಳು ಪುಸ್ತಕ ತೆಗೆದುಕೊಂಡು ತಮಿಳು ಅಕ್ಷರಗಳನ್ನು ಕಲಿತುಕೊಂಡೆ.

ರಸ್ತೆಯಲ್ಲಿನ, ಬಸ್ ಮೇಲಿನ ಫಲಕಗಳನ್ನು ಓದಬೇಕಿತ್ತಲ್ಲ!
-0-0-0-0-0 -

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102