ಯತಿ ಸ್ವಂತೀ -136
16-05-2018
ನಾನು 5ನೇ ತರಗತಿ ಸೇರಿದಾಗ ಸುಧಾ ಪತ್ರಿಕೆ ಆರಂಭವಾಗಿತ್ತು. ಚಂದಮಾಮ ಅದಕ್ಕೆ ಮುಂಚೆಯೇ ಬೆರಗುಗಂಗಳಿಂದ ನೋಡಿ ಓದಲು ಪ್ರಯತ್ನ ಮಾಡುತ್ತಿದ್ದೆ. 'ವಪ' ಅವರ ಮುಖಚಿತ್ರಗಳಲ್ಲಿ ಪುರುಷರ ಮತ್ತು ಸ್ತ್ರೀಯರ ಒಡವೆಗಳಲ್ಲಿ ಒಂದು ಫಳಫಳ ಇಷ್ಟ ಆಗುತ್ತಿತ್ತು.
ವಿಕ್ರಮಾದಿತ್ಯನ ಬೆನ್ನ ಮೇಲಿನ ದೆವ್ವ ನೋಡಿ ಹೆದರಿದರೂ ಓದುವಾಸೆ..!
ಬಹಳ ಸಲ ಅಂದುಕೊಳ್ಳುತ್ತಿದ್ದೆ ಈ ಛಲ ಬಿಡದ ತ್ರಿವಿಕ್ರಮನಿಗೆ ಉತ್ತರ ಗೊತ್ತಿಲ್ಲದ ಪ್ರಶ್ನೆ ಇಲ್ಲವಾ ಅಂತ. ಎಷ್ಟೋ ವರ್ಷಗಳ ನಂತರ ಪಂಚ ವಿಂಶತಿ ಕಥೆಯನ್ನು ಓದಿದೆ. ತಮಿಳು ಭಾಷೆಯಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ ಸಿನಿಮಾ ಕೂಡ ಬಂದವು ವಿಕ್ರಮನಿಗೆ ಉತ್ತರ ತಿಳಿಯದ ಪ್ರಶ್ನೆ ಬಗ್ಗೆ!
ಸುಧಾ ಪತ್ರಿಕೆಯಲ್ಲಿ ಬಾಲವಿಹಾರ ಓದುವ ಆಸೆ. ಆಗ ಸುಧಾ ಬೆಲೆ ನಲವತ್ತು ಪೈಸೆ ನನಗೆ ನೆನಪಿರುವ ಮಟ್ಟಿಗೆ.
ಒಮ್ಮೆ ಯಾದವಗಿರಿಯ ಕಡೆಯಿಂದ ಹೊರಟು ಧೋಭಿಘಾಟ್ ಪಕ್ಕ ಹೋಗುವಾಗ ಜೋರಾಗಿ ಹಾಡು 'ಹೂವೂ ಚೆಲುವೆಲ್ಲಾ ನಂದೆಂದಿತು'.
ಹಣ್ಣೆಲೆ ಚಿಗುರಿದಾಗ ಚಿತ್ರದ ಹಾಡಿನ ಚಿತ್ರೀಕರಣ... ಕಲ್ಪನಾಳೇ ಬಹುಶಃ ನಾನು 3ಡಿ ಆಯಾಮದಲ್ಲಿ ಕಂಡ ಮೊದಲ ಜನಪ್ರಿಯ ಚಿತ್ರತಾರೆ.
ಮನೆಯ ಬಳಿ ರೈಲ್ವೆ ಗಾರ್ಡ್ ಆಗಿದ್ದ ಚನ್ನಬಸಪ್ಪ ಮೊದಲ ನಟ. ಸಿನಿಮಾದಲ್ಲಿ ನಿರಂಜನ್. ಮಣ್ಣಿನ ಮಗ ಚಿತ್ರದಲ್ಲಿ ಕಲ್ಪನಾ ತಂದೆಯಾಗಿ, ಪುಣ್ಯ ಪುರುಷ ಚಿತ್ರದಲ್ಲಿ ಚಂದ್ರಕಲಾ ತಂದೆಯಾಗಿ ನಟಿಸಿದ್ದರು ಎಂದು ನೆನಪು
ಹ್ಞಾಂ ಕೋಗಿಲೆಯು ಗಾನದಲ್ಲಿ... ಸಾಲಿನವರೆಗೆ ಶೂಟಿಂಗ್. ಮತ್ತೆ ಮತ್ತೆ ಅದೇ ಸಾಲುಗಳು. ಅಬ್ಬಾ.. ಬೋರ್ ಹೊಡೆದು ಶಾಲೆಗೆ ಧಾವಿಸಿದ್ದೆ.
ಅಣ್ಣಾವ್ರ ಮೊದಲ ದರ್ಶನ ಕೂಡ ಅದೇ ಸಿನಿಮಾ ಶೂಟಿಂಗ್. ಬೇರೊಂದು ಮನೆಯಲ್ಲಿ.
ಎಲ್ಲ ನಟರ ತಲೆಯ ಬಹಳ ಮೇಲೆ ಒಂದೊಂದು ಕೋಲಿನ ತುದಿಗೆ ಮೈಕ್ ಕಟ್ಟಿ ಅವರ ಮಾತುಗಳ ಧ್ವನಿಮುದ್ರಣ ಮಾಡಿಕೊಳ್ಳುತ್ತಿದ್ದರು.
Comments
Post a Comment