ಯತಿ ಸ್ವಂತೀ -135
15-05-2018
ಮೊಹರಂ ಬಂದರೆ ಮುಸ್ಲಿಮರ ಮನೆಗಳಲ್ಲಿ ಸಿಹಿ ಪೂರಿ, ಖೀರು. ಕ್ರಿಸ್ಮಸ್ ಬಂದರೆ ಕೇಕ್, ಬಿಸ್ಕತ್ತು ಆ್ಯಂಗ್ಲೋ ಇಂಡಿಯನ್ ಮತ್ತು ಕ್ರಿಶ್ಚಿಯನ್ನರ ಮನೆಗಳಲ್ಲಿ. ಕೃಷ್ಣ ಜಯಂತಿ ಬಂದರೆ ಚಕ್ಕುಲಿ, ಮುಚ್ಚೋರೆ, ತೇಂಗೊಳಲು ಇತ್ಯಾದಿ ಕರಿದ ತಿಂಡಿಗಳನ್ನೂ, ಹಣ್ಣು ಮತ್ತು ತರಕಾರಿಗಳನ್ನೂ ದೇವರ ವಿಗ್ರಹ ಇಟ್ಟ ಜಾಗದ ಮೇಲ್ಭಾಗದಲ್ಲಿ ಚೌಕಗಳಿರುವ ಮರದ ಪಟ್ಟಿಗಳಿಗೆ ಹೊಡೆದಿರುವ ಮೊಳೆಗಳಿಗೆ ದಾರದ ಸಹಾಯದಿಂದ ಜೋತಾಡಿಸುತ್ತಿದ್ದೆವು. ಇದಕ್ಕೆ ಫಲವಸ್ತ್ರ ಎನ್ನುವ ಹೆಸರಿದೆ.
ಇಂದಿಗೂ ಈ ಪದ್ಧತಿ ನಮ್ಮ ಮನೆಯಲ್ಲಿದೆ.
ನಾಲ್ಕನೆಯ ಇಯತ್ತೆ ಮುಗಿದಾಗ ನನಗೆ ಎಂಟು ವರ್ಷಗಳು ತುಂಬಲು ನಾಲ್ಕು ತಿಂಗಳು ಇದ್ದವು. ಬಾಲಕರ ಸರ್ಕಾರಿ ಮಾಧ್ಯಮಿಕ ಶಾಲೆಗೆ ನನ್ನನ್ನು ಸೇರಿಸಿದರು.
ಮನೆಯಿಂದ ಹೊರಟು ಬಲಕ್ಕೆ ತಿರುಗಿ ಎಂಟೊಂಬತ್ತು ಮನೆಗಳನ್ನು ದಾಟಿದರೆ ಮುಖ್ಯ ರಸ್ತೆ. ಅಲ್ಲಿ ಬಲಕ್ಕೆ ತಿರುಗಿದರೆ ಯಾದವಗಿರಿಗೆ ದಾರಿ. ಎಡಕ್ಕೆ ಹದಿನೈದು ಅಡಿ ಹೋಗಿ ಎಡಕ್ಕೆ ತಿರುಗಿದರೆ ಸಿಟಿಗೆ ದಾರಿ. ಬಲಗಡೆಗೆ ತಿರುಗಿದರೆ ಕೃಷ್ಣರಾಜಸಾಗರಕ್ಕೆ ದಾರಿ.
ಸ್ವಲ್ಪ ದೂರದಲ್ಲಿ ಎಡಕ್ಕೆ ಚೆಲುವಾಂಬ ಪಾರ್ಕ್. ರಸ್ತೆಯ ಇನ್ನೊಂದು ಬದಿ ಮೈಸೂರು ಆಕಾಶವಾಣಿ. ನಮ್ಮ ಶಾಲೆಗೆ ಹೋಗಲು ಇವುಗಳನ್ನು ದಾಟಿ ಮುಂದೆ ಹೋದರೆ ಎಡಕ್ಕೆ ರಾಮಕೃಷ್ಣ ಆಶ್ರಮ. ಬಲಕ್ಕೆ ರೈಲ್ವೆ ಅತ್ಯುನ್ನತ ಅಧಿಕಾರಿಗಳ ಬಂಗಲೆಗಳು. ಅದರಾಚೆ ಭಾರತೀ ಸ್ತ್ರೀ ಸಮಾಜ ಶಾಲೆ. ನನ್ನ ದೊಡ್ಡ ತಂಗಿ ಅಲ್ಲಿ ಇನ್ನೆರಡು ವರ್ಷಗಳಲ್ಲಿ ಸೇರುವವಳಿದ್ದಳು. ಅಲ್ಲೇ ಬಲಗಡೆ ದೂರದಲ್ಲಿ ಕಾಣುವ ದೊಡ್ಡ ಕಟ್ಟಡ ರೈಲ್ವೆ ಆಸ್ಪತ್ರೆ. ಇನ್ನೆರಡು ವರ್ಷಗಳಲ್ಲಿ ನನ್ನ ಚಿಕ್ಕ ತಂಗಿ ಅಲ್ಲಿ ಜನ್ಮ ತಳೆಯುವವಳಿದ್ದಳು.
ಅದೋ ಅಲ್ಲಿ ಒಂಟಿಕೊಪ್ಪಲ್ ಪೊಲೀಸ್ ಠಾಣೆ. ಕೆ ಆರ್ ಎಸ್ ರಸ್ತೆ ಮೇಲೆ ಎಡಕ್ಕೆ ವೆಂಕಟರಮಣ ಸ್ವಾಮಿ ದೇವಸ್ಥಾನ. ಅದರೆದುರು ಒಂದು ಪಾರ್ಕ್. ಅದರಾಚೆ ಒಂದು ಮೈದಾನ.
ಅದೋ ಅದೋ ಅದೇ ನನ್ನ ಮಿಡ್ಲ್ ಸ್ಕೂಲ್...
Comments
Post a Comment