ಯತಿ ಸ್ವಂತೀ -134
14-05-2018
ರಾಮೇಶ್ವರಂನ ಪಾಂಬನ್ ಬ್ರಿಡ್ಜ್ ಆಗ ಕಬ್ಬಿಣದ್ದಿತ್ತು. ನಾವು ಊರಿಗೆ ಬಂದು ಒಂದು ತಿಂಗಳೊಳಗೆ ಸುನಾಮಿ ಬಂದು ಅದು ಮುಳುಗಿ ಹೋಯಿತು. ಪ್ರಕೃತಿಯ ವಿಕೋಪಕ್ಕೆ ಸಿಕ್ಕರೆ ಯಾವ ರೀತಿಯ ದೊಡ್ಡ ಸ್ಟ್ರಕ್ಚರ್ ಕೂಡ ಅದರ ಮುಂದೆ ಇಲ್ಲವಾಗುವುದೆಂಬ ಪಾಠ ನನಗೆ 2004ರ ಡಿಸೆಂಬರ್‍ನಲ್ಲಿ ಬಂದ ಸುನಾಮಿಯ ಕೆಲವು ದುರಂತಮಯ ಚಿತ್ರಗಳನ್ನೂ, ವೀಡಿಯೋ ತುಣುಕುಗಳನ್ನೂ ಕಂಡಾಗ ತಿಳಿಯಿತು. ನಂತರ ಇನ್ನೂ ಎರಡು ಸಲ ಅದರ ಸೇತುವೆ ಕಟ್ಟಲ್ಪಟ್ಟಿರಬೇಕು. 2008ರಲ್ಲಿ ನಾವು ಮತ್ತೆ ರಾಮೇಶ್ವರಂಗೆ ಹೋದಾಗ ಆ ಸೇತುವೆ ಮೇಲೆ ಹೋದೆವು. ಆ ಸೇತುವೆ ಕಟ್ಟಲು ಬಳಸಲ್ಪಟ್ಟಿರುವ ಸಿಮೆಂಟ್ ಕಂಪೆನಿಯು ಹೆಮ್ಮೆಯಿಂದ ‘ಇದು... ಸಿಮೆಂಟಿನಲ್ಲಿ ಕಟ್ಟಿದ ಸೇತುವೆ’ ಎಂದು ಜಾಹೀರಾತು ನೀಡುತ್ತಿತ್ತು.
ರಾಮೇಶ್ವರಂನಲ್ಲಿ 1964 ಜೂನ್ ತಿಂಗಳ ಪ್ರವಾಸದ ಇನ್ನೇನೂ ನೆನಪಿಲ್ಲ. ಅಲ್ಲಿಂದ ನಾವು ಕುಟ್ರಾಲಂ ಜಲಪಾತಕ್ಕೆ ಹೋದ ನೆನಪಿದೆ. ಇದರದೂ ಒಂದು ಪಟ ಇರೋದ್ರಿಂದ ನೆನಪಿದೆಯೇನೋ!
ಜಲಲ ಜಲಲ ಜಲಧಾರೆ ಎಂದು ದುಡುದುಡು ಬೀಳುವ ನೀರು, ಪಕ್ಕದಲ್ಲಿ ಸ್ನಾನ ಮಾಡಲಿಕ್ಕಾಗಿಯೇ ಎಂದು ಸಣ್ಣ ಧಾರೆಯಂತೆ ಬೀಳುವ ಈ ಜಲಪಾತಕ್ಕೂ ಎರಡನೇ ಸಲ ಹೋದ ನೆನಪಿದೆ. ಆದರೆ 2004ರಲ್ಲಿ ಹೋದಾಗ ಜಲದ ಪಾತವಿರಲಿಲ್ಲ. ಗೈರಾಗಿತ್ತು ಜಲ! ಮೂವತ್ತು ರೂಪಾಯಿ ಕೊಟ್ಟರೆ ಮೇಲೆ ಹತ್ತಿ ಅಲ್ಲಿಂದ ನೀರು ಸುರಿಯುವೆ, ನೀವು ನೋಡಬಹುದು ಎಂದಿದ್ದ ಅಲ್ಲಿನವನೊಬ್ಬ!
ರೋಜಾ ಎನ್ನುವ ಸಿನಿಮಾದಲ್ಲಿ ಇದರ ಅಡಿಯಲ್ಲಿ ನಾಯಕಿ ನೆನೆಯುವ ಹಾಡಿದೆ. ಅತ್ಯಂತ ಮಧುರವಾದ ಚಿನ್ನ ಚಿನ್ನ ಆಸೈ...
ಆಮೇಲೆ ನಾವು ಬೆಂಗಳೂರಿಗೆ ಮರಳಿದೆವೆಂದು ನೆನಪು.
ಯಥಾಪ್ರಕಾರ ಅದೇ ಶಾಲೆ, ಅದೇ ಓದು.
ನನ್ನ ಅಮ್ಮ ನನಗೆ ಇಂಗ್ಲಿಷ್ ಕಲಿಸಬೇಕು, ಲೆಕ್ಕ ಕಲಿಸಬೇಕು ಎಂದು ನಮ್ಮ ಮನೆಯಿಂದ ನಾಲ್ಕು ಮನೆಯಾಚೆ ಇದ್ದ ಇರ್ವಿನ್ ಎಂಬ ಆಂಗ್ಲೋ ಇಂಡಿಯನ್ ಎಂಜಿನ್ ಡ್ರೈವರ್‍ನ ಪತ್ನಿಯ ಬಳಿ ಕಳಿಸುತ್ತಿದ್ದರು.
ಆಗೆಲ್ಲಾ ಅಮ್ಮ ಅವರೊಂದಿಗೆ ತಮಿಳಿನಲ್ಲಿ ಮಾತಾಡುತ್ತಿದ್ದರೆಂದು ನೆನಪು.
ಒಂದು ರೀತಿ ಎಳೆದು ಎಳೆದು ತಮಿಳು ಮಾತಾಡುತ್ತಿದ್ದರು ಮಿಸೆಸ್ ಇರ್ವಿನ್. ಅವರ ಮಗ ಮೈಕೆಲ್ ನನಗಿಂತ ಸ್ವಲ್ಪ ಚಿಕ್ಕವನು. ಇರ್ವಿನ್ ಅವರ ತಮ್ಮ ಯೂಜಿನ್ ನನ್ನ ಜೊತೆಯವನೆಂದು ನೆನಪು.
ನಾವು ಮನೆಯ ಬಳಿ ಆಡದ ಆಟವಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮ, ಅಪ್ಪ ನಮಗೆ ಜಾತಿಭೇದವನ್ನು ಕಲಿಸಲಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಬೆಳೆಸಿಬಿಟ್ಟರು.
ಅಕ್ಕಪಕ್ಕದ ಮನೆಯವರೊಂದಿಗೆ ಎಲ್ಲರೂ ಸ್ನೇಹದಿಂದಿದ್ದರು. ಎಲ್ಲರದೂ ಒಂದೇ ರೀತಿಯ ಮನೆಗಳು. ಬಹುಶಃ ಸಂಬಳಗಳೂ ಒಂದೇ. ಹೆಂಗಸರು ಪರಸ್ಪರ ಸಹಾಯ ಮಾಡುತ್ತಿದ್ದರು.
ಇನ್ನೂ ಸ್ವಲ್ಪ ಹೆಚ್ಚಿನ ಸಂಬಳದವರಿಗೆ ದೊಡ್ಡ ಮನೆಗಳಿದ್ದವು. ತಾವು ಅಂಗಡಿಗೆ ಹೋಗಬೇಕಾದಾಗ ನನ್ನನ್ನು ನಮ್ಮ ಮನೆಗೆ ಅಂಟಿಕೊಂಡಿದ್ದ ಮನೆಯಲ್ಲಿದ್ದ ಬೂಬಮ್ಮನ ಮನೆಯಲ್ಲಿ ಬಿಟ್ಟುಹೋಗುತ್ತಿದ್ದರು ಅಮ್ಮ.
-0-0-0-
Comments
Post a Comment