ಯತಿ ಸ್ವಂತೀ -133
13-05-2018
ನನಗೆ ಒಂದೇ ಉದ್ವೇಗ ಆಗಿತ್ತು. ನನ್ನ ಸ್ವಂತೀಯಲ್ಲಿ ಸ್ವಲ್ಪ ಹಿಂದಕ್ಕೆ ಹೋಗುತ್ತೇನೆ. ಆಗ ನನಗೆ 7 ವರ್ಷಗಳಾಗಲು ಒಂದು ತಿಂಗಳು ಬಾಕಿ ಇತ್ತು. ಅಯ್ಯ ‘ನಾವು ಟೂರ್ ಹೋಗ್ತಿದ್ದೀವಿ’ ಎಂದರು!
ಟೂರ್ ಎಂದರೆ ನಮಗೆ ತಿಳಿದದ್ದೆಲ್ಲಾ ಮೈಸೂರಿನಿಂದ ಬೆಂಗಳೂರು. ಬೆಂಗಳೂರಿನಿಂದ ಮೈಸೂರು. ನಾನು, ನನ್ನ ಅಯ್ಯ, ನನ್ನ ಅಮ್ಮ ಮತ್ತು ನನ್ನ ಐದನೆಯ ಮತ್ತು ಕೊನೆಯ ಸೋದರತ್ತೆ. ಮತ್ತೆ ತಂಗಿ? ಉಹೂಂ... ಅವಳಿಗಿನ್ನೂ ಐದು ವರ್ಷಗಳೆಂದು ಅವಳನ್ನು ನಮ್ಮ ದೊಡ್ಡ ದೊಡ್ಡಮ್ಮನ ಮನೆಯಲ್ಲಿ ಬಿಟ್ಟೆವು.
ಬೆಂಗಳೂರಿನಿಂದ ತಿರುಚಿನಾಪಳ್ಳಿ. ಶ್ರೀರಂಗಕ್ಕೆ ಹೋಗಿ ರಂಗನಾಥನ ದರ್ಶನ. ಆಗ ನನಗಿನ್ನೂ ಏಳು ವರ್ಷಗಳೂ ಆಗಿರದಿದ್ದುದರಿಂದ ಹನ್ನೊಂದು ವರ್ಷಗಳ ಹಿಂದೆ ಮತ್ತೆ ಹೋದಾಗ ಹಿಂದಿನ ಶ್ರೀರಂಗ ಟ್ರಿಪ್ ನೆನೆಸಿಕೊಂಡೆ. ಅರೆರೆ, ಇನ್ನೂ ಒಂದು ಸಲ 1999ರಲ್ಲಿ ಹೋಗಿದ್ದೆ ಶ್ರೀರಂಗಕ್ಕೆ. ಆದರೆ ಕೇವಲ ರಾತ್ರಿ ಒಂಬತ್ತರ ನಂತರ ಒಂದು ವಿಶೇಷ ಸೇವೆ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ಒಳಗಿದ್ದೆವು.
1964ಕ್ಕೆ ಮರಳಿ ಬಂದರೆ, ಗೋಲ್ಡನ್ ರಾಕ್ ಅಥವಾ ಉಚ್ಚಿ ಪಿಳ್ಳೈಯಾರ್ ಗುಡಿಗೆ ಹೋದ ನೆನಪಿದೆ. ಇದು ಗೋಕರ್ಣದ ಗಣೇಶ, ರಾವಣ ಮತ್ತು ಆತ್ಮಲಿಂಗದ ಕಥೆಯನ್ನೇ ಹೋಲುವ ಕಥೆ. ಇಲ್ಲಿ ಶ್ರೀರಂಗನಾಥನನ್ನು ವಿಭೀಷಣ (ರಾವಣನ ತಮ್ಮ ಈ ಕಥೆಯಲ್ಲಿ ಪಾತ್ರವಾಗಿರುವುದು ಕಾಕತಾಳೀಯ?) ಲಂಕೆಗೆ ಒಯ್ಯುವಾಗ ಗಣೇಶ ಅವನನ್ನು ತಡೆದು ರಂಗನಾಥನು ಶ್ರೀರಂಗದಲ್ಲಿ ಉಳಿದುಕೊಳ್ಳುವಂತೆ ಮಾಡಿದನೆಂದೂ, ನಂತರ ಗಣೇಶ ಬೆಟ್ಟದ ಮೇಲೆ ಅವಿತು ಕುಳಿತನೆಂದೂ, ವಿಭೀಷಣನಿಗೆ ಸಿಟ್ಟು ಬಂದು ಅವನ ಹಣೆಯ ಮೇಲೆ ಹೊಡೆದನೆಂದೂ, ಅದಕ್ಕೇ ಗಣೇಶನ ಹಣೆಯ ಮೇಲೆ ಸಣ್ಣ ಹಳ್ಳವಿದೆಯೆಂದೂ ಹೇಳುತ್ತಾರೆ.
ಸಾಮಾನ್ಯವಾಗಿ ದೇವರ ವಿಗ್ರಹವು ಪೂರ್ವಕ್ಕೋ, ಉತ್ತರಕ್ಕೋ ಮುಖ ಮಾಡಿರುತ್ತದೆ. ಆದರೆ ರಂಗನಾಥನು ದಕ್ಷಿಣಕ್ಕೆ ತಿರುಗಿದ್ದಾನೆ ಶ್ರೀರಂಗದಲ್ಲಿ. ತನ್ನ ಭಕ್ತಾಗ್ರಣಿ ತನ್ನನ್ನು ಒಯ್ಯಲಾಗದಿದ್ದರೂ ಅವನ ಕಡೆಗೆ ಕಟಾಕ್ಷ ಬೀರಲು ಲಂಕೆಯ ದಿಕ್ಕಾದ ದಕ್ಷಿಣಕ್ಕೆ ಮುಖ ಮಾಡಿರುವನೆಂದು ಊರಿನ ಐತಿಹ್ಯ ಹೇಳುತ್ತದೆ.
ಅಲ್ಲಿಂದ ನಾವು ತಂಜಾವೂರಿಗೆ ಹೋದೆವು. ಬೃಹದೀಶ್ವರ ದೇವಸ್ಥಾನದಲ್ಲಿ ಅಬ್ಬಾ, ಅದೆಷ್ಟು ದೊಡ್ಡ ನಂದಿ! ಮತ್ತೆ ಲಿಂಗ ಕೂಡ ಬೃಹತ್.
ಅಯ್ಯ ಬಳಿ ಕ್ಯಾಮೆರಾ ಇತ್ತು. ಸುಮಾರು 16 ಅಥವಾ 32 ಪಟಗಳನ್ನು ತೆಗೆದಿದ್ದರು. ಅಂದರೆ ಒಂದೊಂದು ಊರಿನಲ್ಲಿ ಒಂದೊಂದು ನೆನಪಿನ ಚಿತ್ರ. ಏಕೆಂದರೆ ಕ್ಯಾಮೆರಾ ಮತ್ತು ಫಿಲ್ಮ್ ಎರಡೂ ಆಗ ಬಹಳ ದುಬಾರಿಯವು.
ಅಲ್ಲಿಂದ ರಾಮೇಶ್ವರಂಗೆ ಹೋದ ನೆನಪಿದೆ.
ನನಗೆ ಜ್ಞಾಪಕ ಇರುವ ವಿಷಯವೆಂದರೆ ನಾನು ಅಲ್ಲಿ ಮುಗ್ಗರಿಸಿ ಬಿದ್ದಿದ್ದೆ. ಅಲ್ಲಿನ ಡಿಸ್ಪೆನ್ಸರಿ ಒಂದರಲ್ಲಿ ನನ್ನ ಮೊಣಕಾಲಿಗೆ ಬ್ಯಾಂಡೇಜ್ ಮಾಡಿದ್ದರು.
ಅಮ್ಮನ ಸೊಂಟದಲ್ಲಿ ಕೂತು ರಾಮೇಶ್ವರಂನ ಬಂಗಾಳಾ ಕೊಲ್ಲಿಯಲಿ ಇಳಿದಿದ್ದೇನೆ.
ಅಯ್ಯ ತೆಗೆದ ಒಂದು ಪಟ ಇದೆ. ನಾನು ನನ್ನ ಅಮ್ಮನ ಸೊಂಟದಲ್ಲಿ. ಅಮ್ಮ ಮತ್ತು ಅತ್ತೆ ಇಬ್ಬರೂ ಸಮುದ್ರದಲ್ಲಿ ನಿಂತಿದ್ದಾರೆ.
Comments
Post a Comment