ಯತಿ ಸ್ವಂತೀ -131
11-05-2018
ನಮ್ಮ ಅಮ್ಮನ ಜೊತೆ ತೆರೆ ಘರ್ ಕೆ ಸಾಮ್ನೇ ಸಿನಿಮಾಗೆ ಹೋದ ಅಸ್ಪಷ್ಟ ನೆನಪಿದೆ. ಅದರಲ್ಲಿ ತೂ ಕಹಾಂ ಯೆ ಬತಾ, ತೆರೆ ಘರ್ ಕೆ ಸಾಮ್ನೆ ಹಾಡುಗಳ ನೆನಪು ಮಾತ್ರ ಇದೆ. ಮೊನ್ನೆ ಮೊನ್ನೆ ಈ ಸಿನಿಮಾವನ್ನು ಯೂಟ್ಯೂಬ್‍ನಲ್ಲಿ ನೋಡಿ ಎಂಜಾಯ್ ಮಾಡಿದೆ.
ತಮಿಳು ಸಿನಿಮಾ ಪಾಸಮಲರ್ (ಕನ್ನಡದ ವಾತ್ಸಲ್ಯ), ಪಾಲುಂ ಪಳಮುಂ (ಕನ್ನಡದ ಬೆರೆತ ಜೀವ), ವಾನಂಬಾಡಿ (ಏನೂ ನೆನಪಿಲ್ಲ) ಅಮ್ಮ ಕರೆದೊಯ್ದಿದ್ದರು.
ನನ್ನ ನಾಲ್ಕನೆಯ ಸೋದರತ್ತೆ ಮಹಾರಾಣಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಅವರಿಗೆ ಮೈಸೂರಿನ ಮಹಾರಾಣಿ ಕಾಲೇಜಿಗೆ ವರ್ಗವಾಯಿತು. ಆಗ ಅವರ ಮೂರು ವರ್ಷಗಳ ಮಗನೊಂದಿಗೆ ಮೈಸೂರಿಗೆ ಬಂದು ನಮ್ಮ ಮನೆಯಲ್ಲೇ ತಂಗಿದ್ದರು.
ಕಾಲೇಜು ಕೂಡ ಅವರಿಗೆ ಹತ್ತಿರವೇ. ನಡೆದು ಹೋಗಬಹುದಿತ್ತು. ಅವರ ಮಗ ಅಭಿ ನನಗೂ ನನ್ನ ತಂಗಿಗೂ ಆಟದ ಗೊಂಬೆಯಂತಾಗಿದ್ದ. ಗುಂಗುರು ಕೂದಲಿನ ಬಲು ಮುದ್ದಾದ ಮಗು ಅವನು.
ಈಗ ಅಮೆರಿಕದಲ್ಲಿ ವೈದ್ಯನಾಗಿದ್ದಾನೆ. ನನಗೂ, ನನ್ನ ಪತ್ನಿಗೂ ಬಹಳ ಪ್ರೀತಿಯ ಗೆಳೆಯನಾಗಿದ್ದಾನೆ.
ಹ್ಞಾಂ... ನನ್ನ ಸೋದರತ್ತೆ ನನ್ನನ್ನು ಪ್ರಭುದೇವ ಥಿಯೇಟರ್‍ನಲ್ಲಿ(ಪದ್ಮಾ ಟಾಕೀಸ್) ಮಂತ್ರಾಲಯ ಮಹಾತ್ಮೆ ಅಥವಾ ಶ್ರೀ ರಾಘವೇಂದ್ರ ವಿಜಯ ಸಿನಿಮಾಗೆ ಕರೆದೊಯ್ದರು. ಅದೇ ನನಗೆ ಹೆಚ್ಚುಕಡಿಮೆ ಪೂರ್ತಿ ನೆನಪಿರುವ ಮೊದಲ ಸಿನಿಮಾ. ನನಗಾಗ ಒಂಬತ್ತು ವರ್ಷಗಳು. ಥಿಯೇಟರ್ ಮುಂದೆ ರಾಘವೇಂದ್ರ ಸ್ವಾಮಿಗಳ ಕಟ್‍ಔಟ್ ಇಟ್ಟು ಗೋಲಕ ಕೂಡ ಇಟ್ಟಿದ್ದರು! ಇದನ್ನು ಮತ್ತೆ ಅದೇ ಥಿಯೇಟರಿನಲ್ಲಿ ‘ನಾ ನಿನ್ನ ಬಿಡಲಾರೆ’ (ಬಿಡೆನು ನಿನ್ನ ಪಾದಾ) ಬಂದಾಗ ಮಾಡಿದ್ದರು.
ರಾಜಣ್ಣನ ಅದ್ಭುತ ನಟನೆ ನೆನಪಿದೆ. ಜಯಂತಿ ದೆವ್ವವಾಗಿ ಬಾವಿಯ ಮೇಲೆ ನಿಲ್ಲುವುದು, ಕಲ್ಪನಾ ಜಯಂತಿ ಹಾಡುವುದು, ಮಾಂಸವನ್ನು ಯತಿಗಳು ಹಣ್ಣುಗಳನ್ನಾಗಿ ಮಾಡುವ ದೃಶ್ಯ ನೆನಪಿದೆ. ಇಂದು ಎನಗೆ ಗೋವಿಂದ ಹಾಡು ಕೂಡ ನೆನಪಿದೆ.
ಆಮೇಲೆ ನಾನು ನೋಡಿದ ಸಿನಿಮಾಗಳಿಗೆ ಲೆಕ್ಕವಿಲ್ಲ. ಆದರೂ ಆ ಸಿನಿಮಾ ಬಹಳ ಚೆನ್ನಾಗಿ ನೆನಪಿರುವ ಮೊದಲ ಚಿತ್ರ.
ನನ್ನ ದೊಡ್ಡಮ್ಮನ ಮನೆ ರೈಲ್ವೇ ನಿಲ್ದಾಣದ ಎದುರಿಗೇ ಇತ್ತಷ್ಟೇ. ಅವರ ಮನೆಯಿಂದ ಹೊರಗೆ ಬಂದರೆ ಧರ್ಮಾಂಬುಧಿ ಕೆರೆ (ಸುಭಾಷ್ ನಗರ ಬಸ್ ನಿಲ್ದಾಣ). ಅದನ್ನು ದಾಟಿದರೆ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸಂಗಂ ಟಾಕೀಸ್.
ಅಲ್ಲಿ ‘ಆರಾಧನಾ’ ಸಿನಿಮಾ ಬಂದಿತ್ತು. ನಾನು, ನನ್ನ ದೊಡ್ಡ ತಂಗಿ, ದೊಡ್ಡಮ್ಮನ ಮಗಳು ಹೋದ ನೆನಪು.
ಆ ಸಿನಿಮಾದ ಹಾಡುಗಳು ಬಹಳ ಇಷ್ಟ ಆಯಿತು. ಶರ್ಮಿಲಾ ಟ್ಯಾಗೋರಳ ಅಭಿಮಾನಿ ಆಗಲೇ ಆದೆನೇನೋ. ನನಗಾಗ ಹನ್ನೆರಡು ವರ್ಷಗಳು.
ಪೂರ್ತಿ ಅರ್ಥವಾಗದ, ಆದರೂ ಏನೋ ಅರ್ಥವಾದಂತಿದ್ದ ಕಥೆ.
ಅನೇಕ ಸಲ ನೋಡಿದ್ದೇನೆ. ಈಗಲೂ ನೋಡಬೇಕೆಂದು ಸೇವ್ ಮಾಡಿಟ್ಟುಕೊಂಡಿದ್ದೇನೆ. ಆದರೆ ಇಬ್ಬರು ತಂಗಿಯರ ಅಣ್ಣನಂತೆ ಆ ಸಿನಿಮಾಗೆ ಹೋಗಿ ಟಿಕೆಟ್ ಕೊಂಡಿದ್ದು ಏನೋ ಒಂದು ರೀತಿಯ ದೊಡ್ಡವನಾದಂತಹ ಭಾವನೆ!
-0-0-0-0-0 -
Comments
Post a Comment