ಯತಿ ಸ್ವಂತೀ -130



10-05-2018

ಒಮ್ಮೆ ಬೆಂಗಳೂರಿಗೆ ಬಂದಿದ್ದವರು ಮೈಸೂರಿಗೆ ರೈಲುಗಾಡಿಯಲ್ಲಿ ಹಿಂದಿರುಗಲು ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಬಂದೆವು.

ಅಮ್ಮನಿಗೆ ಕಣ್ಣು ನೋವು ಬಂದು ಕರವಸ್ತ್ರವನ್ನು ಕಣ್ಣಿಗೆ ಅಡ್ಡಲಾಗಿ ಇಟ್ಟುಕೊಂಡು ಕುಳಿತರು. ನಾನು, ನನ್ನ ತಂಗಿ ಮತ್ತು ನನಗಿಂತ ನಾಲ್ಕು ವರ್ಷ ಹಿರಿಯವಳಾದ ನನ್ನ ದೊಡ್ಡಮ್ಮನ ಮಗಳು.

ಬಹುಶಃ ನನಗಾಗ ಆರು ವರ್ಷಗಳು.

ರಾಮನಗರ ಸ್ಟೇಷನ್ ತಲುಪಿತ್ತು ರೈಲು. ನಾನೋ, ನನ್ನ ತಂಗಿಯೋ ನೆನಪಿಲ್ಲ, ‘ಬಾಯಾರಿಕೆ, ನೀರು ಬೇಕು’ ಎಂದು ಶುರು ಮಾಡಿದೆವು.

ಅಮ್ಮನಿಗೆ ಇಳಿಯಲು ಆಗದು. ದೊಡ್ಡಮ್ಮನ ಮಗಳಿಗೆ ರೈಲು ಪ್ರಯಾಣ ಹೊಸತು. ಅವಳೇ ಸುಮಾರು ಹತ್ತು ವರ್ಷದವಳಿರಬೇಕು ಆಗ.

‘ರಾಮನಗರ ಸ್ಟೀಮ್ ಎಂಜಿನ್‍ಗೆ ವಾಟರಿಂಗ್ ಸ್ಟೇಷನ್’ ಎಂದರು ಅಮ್ಮ. ಅವೆಲ್ಲವೂ ಅವರಿಗೆ ತಿಳಿದಿದ್ದ ವಿಷಯಗಳು. ಬಹಳ ವರ್ಷ ಅವರು ರೈಲಿನಲ್ಲಿ ಅಯ್ಯನೊಂದಿಗೆ ಮತ್ತು ಒಂಟಿಯಾಗಿ ಓಡಾಡಿದೋರು. ನಾವು ಇನ್ನೂ ಚಿಕ್ಕವರಿದ್ದಾಗ ಎತ್ತಿಕೊಂಡು ಓಡಾಡಿದೋರು.

ಅಂದರೆ ರಾಮನಗರದಲ್ಲಿ ರೈಲು ಸ್ವಲ್ಪ ಹೆಚ್ಚು ಹೊತ್ತು ನಿಲ್ಲುತ್ತದೆ ಎಂದು ನಿರ್ಧರಿಸಿ, ‘ಹೋಗಿ ಮೂವರೂ. ಅಲ್ಲಿ ನಲ್ಲಿಯಲ್ಲಿ ನೀರು ಬರ್ತಿದೆ. ಕುಡಿದು ಬನ್ನಿ’ ಎಂದರು ಅಮ್ಮ.

ಮೂವರೂ ಇಳಿದೆವು. ನಲ್ಲಿಯ ಬಳಿ ಹೋದರೆ ಡಬಲ್ ನಿರಾಸೆ. ಅಲ್ಲಿ ನೀರು ಬಹಳ ಕಡಿಮೆ ಬರುತ್ತಿತ್ತು. ಆ ಊರಿನ ಜನ ನೀರು ಹಿಡಿದುಕೊಳ್ಳಲು ಸಾಲಾಗಿ ಕೊಡಗಳನ್ನು ಇಟ್ಟುಕೊಂಡಿದ್ದರು.

ನಮಗೋ ಕೇಳಲು ಸಂಕೋಚ (ಭಯ!). ಸುಮ್ಮನೆ ನಿಂತು ಅವರೆಲ್ಲರೂ ಖಾಲಿ ಆಗಲಿ ಎಂದುಕೊಂಡೆವೇನೋ. ಹೇಗೂ ರೈಲು ಸ್ವಲ್ಪ ಜಾಸ್ತಿ ಹೊತ್ತು ನಿಲ್ಲುತ್ತದೆ ಎಂಬ ನಂಬಿಕೆ.

ಅದೆಷ್ಟು ಹೊತ್ತು ಕಳೆದೆವೋ ತಿಳಿಯದು, ಇದ್ದಕ್ಕಿದ್ದಂತೆ ಗಾರ್ಡ್‍ನ ಸೀಟಿ, ಎಂಜಿನ್‍ನ ಕೂ ಕೇಳಿಸಿತು. ನಾವು ಬೆಚ್ಚಿ ನೋಡುತ್ತಿದ್ದಂತೆ ರೈಲು ಝುಕ್ ಝುಕ್ ಎಂದು ಸ್ಟೇಷನ್ನಿನಿಂದ ಚಲಿಸಲು ಆರಂಭಿಸಿತು.

‘ಅಮ್ಮಾ!’ ಎಂಬ ನಮ್ಮ ಚೀರುವಿಕೆ ಆ ಸದ್ದಿನ ನಡುವೆಯೂ ಎಲ್ಲರಿಗೂ ಕೇಳಿಸಿದ್ದಿರಬೇಕು!

ಇದ್ದಕ್ಕಿದ್ದಂತೆ ನಾವು ಗಾಳಿಯಲ್ಲಿದ್ದೆವು. ನಮ್ಮನ್ನು ಎರಡೆರಡು ಜೊತೆ ಕೈಗಳು ಮೇಲೆತ್ತಿದವು. ನಮ್ಮ ಮುಂದೆ ಬಂದ ಬೋಗಿಯೊಳಕ್ಕೆ ನಮ್ಮನ್ನು ‘ಎಸೆದಿದ್ದರು’ ಅಲ್ಲಿದ್ದ ಕೂಲಿಗಳು!

ಅಮ್ಮಾ ಎನ್ನುವ ಕೂಗು ಮುಂದುವರಿದೇ ಇತ್ತು. ಇದೆಂದಿಗೂ ನಾವು ಅನುಭವಿಸದ ಹೊಸ ಅನುಭವ!

ಕೆಲವು ಕ್ಷಣಗಳ ನಂತರ ರೈಲು ನಿಂತಿತು.

ಅಮ್ಮ ಚೈನ್ ಎಳೆದಿದ್ದರು.

ಮೂವರು ಕೂಲಿಗಳು ನಮ್ಮನ್ನು ನಮ್ಮ ಬೋಗಿಗೆ ಎತ್ತಿಕೊಂಡು ಹೋಗಿ ಅಮ್ಮ ಇದ್ದ ಬೋಗಿಗೆ ಬಿಟ್ಟರು.

ಅಬ್ಬಾ ಭಯಾನಕ ಅನುಭವ ...ಇಂದಿಗೂ ನೆನೆಸಿಕೊಂಡರೆ. ಆ ವಯಸ್ಸಿನಲ್ಲಿ ಆ ರೀತಿಯ ಆಘಾತವೂ ದೊಡ್ಡದೇ ತಾನೇ?

ಅಂದಿನ ಮತ್ತೊಂದು ಘಟನೆ ನೆನಪಿದೆ.

ನಮ್ಮ ಪಕ್ಕದಲ್ಲಿಯೇ ಹೊಸದಾಗಿ ಮದುವೆಯಾದ  ‘ಸಂಕೇತಿ’ ಗಂಡು ಹೆಣ್ಣು. ಗಂಡು ಮಾತು ಮಾತು ಮಾತು ಆಡುತ್ತಲೇ ಇದ್ದ. ಕೊನೆಗೆ ಆ ಹೆಣ್ಣು ‘ಎನ್ನಾಣಿ ಅತ್ನೆ ಹರಟೆ ಬಡಿಯಾಣಿ, ನಿಲ್ತಾಣಿ’ ಎಂದು ಗದರಿದ್ದು ಇಂದಿಗೂ ನೆನಪಿದೆ!
                 -0-0-0-0-0 -


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102