ಯತಿ ಸ್ವಂತೀ -129



09-05-2018

ಅಮ್ಮನ ಸಂಗೀತದ ಪ್ರೀತಿ ನನಗೂ, ನನ್ನ ತಂಗಿಗೂ ಹರಡಿತು. ಇಬ್ಬರೂ ಹಾಡುಗಳನ್ನು ಇಷ್ಟ ಪಟ್ಟೆವು. ನಮ್ಮಿಬ್ಬರಿಗೂ ಭರತನಾಟ್ಯ ಕಲಿಸಬೇಕೆಂದು ನಿಶ್ಚಯಿಸಿದ ಅಮ್ಮ ನಮ್ಮನ್ನು ಒಬ್ಬರು ಡ್ಯಾನ್ಸ್ ಮೇಡಂ ಬಳಿ ಕರೆದೊಯ್ದರು.

ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದ್ದ ನಾನು, ನನ್ನ ತಂಗಿ ಈ ಡ್ಯಾನ್ಸ್ ಮೇಡಂ ವಿಷಯದಲ್ಲಿ ಏಕಾಭಿಪ್ರಾಯ ವ್ಯಕ್ತಪಡಿಸಿದೆವು. ನಾವು ಕಲಿಯಲ್ಲ, ಆ ಟೀಚರ್ ನೋಡಿದರೆ ಭಯ ಆಗುತ್ತೆ ಅಂದೆವು.

ಅಮ್ಮ ಆಶ್ಚರ್ಯಕರವಾಗಿ ಸುಮ್ಮನಾಗಿಬಿಟ್ಟರು. ನಾವು ನೆಮ್ಮದಿಯ ನಿಟ್ಟುಸಿರಿಟ್ಟೆವು.

ನನ್ನ ಗೆಳೆಯ ಮಖ್‍ಬೂಲ್ ಬಹಳವೇ ತರಲೆ. ನಮ್ಮ ಮನೆಯ ಎದುರಿನ ಫೀಲ್ಡ್‍ನಲ್ಲಿದ್ದ ಒಂದೇ ಮರ ಗುಲ್‍ಮೊಹರ್ ಹೂಗಳದ್ದು. ಅದರ ಹೂಗಳನ್ನು ಕಿತ್ತು ಅದರ ನಡುವಿನ ಕೇಸರವನ್ನು ಕಿತ್ತು ಇಬ್ಬರೂ ಅವುಗಳ ಫೈಟಿಂಗ್ ನಡೆಸುತ್ತಿದ್ದೆವು. ಹುಂಜಗಳ ಜಗಳವೋ ಎನ್ನುವ ರೇಂಜಿನಲ್ಲಿರುತ್ತಿತ್ತು ಆ ಫೈಟು. ಕೊನೆಗೆ ಒಬ್ಬರ ಕೇಸರದ ತುದಿ ಬಿದ್ದಾಗ ಔಟ್!

ಹೀಗೇ ಒಂದು ದಿನ ಆ ಮರದ ಮೇಲೆ ನೋಡ್ತೀವಿ ಜೇನು ಗೂಡು ಕಟ್ಟಲು ಹೊಂಚು ಹಾಕುತ್ತಿದ್ದವು. ಮಖ್‍ಬೂಲ್ ಅದರ ಬಳಿಗೆ ಹೋದ. ರಾಜೂ, ನೋಡು ಬಾ ನನ್ನ ಕೆಲಸಾನ ಎಂದ.

ನಾನು, ನನ್ನ ತಂಗಿ ಇಬ್ಬರೂ ಹೋದೆವು. ಏನೋ ಮಾಡುವನೆಂಬ ಕುತೂಹಲ.

ಒಂದು ಕಲ್ಲು ತೆಗೆದುಕೊಂಡು ಜೇನುಗಳಿದ್ದ ಜಾಗಕ್ಕೆ ರೊಂಯ್ಯೆಂದು ಎಸೆದ. ಅವು ಚೆದುರಿತೋ ಇಲ್ಲವೋ, ಆ ಕಲ್ಲು ನ್ಯೂಟನ್ನನ ಮೂರನೆಯ ನಿಯಮದಂತೆ ನೇರವಾಗಿ ಭೂಮಿಯತ್ತ ತೂರಿ ಬರುತ್ತ, ನನ್ನ ತಂಗಿಯ ಹಣೆಯಲ್ಲಿ ದೊಡ್ಡ ಗಾಯ ಮಾಡಿಬಿಟ್ಟಿತು.

ಅವಳು ಚೀರಿದಳು. ಇಬ್ಬರೂ ಅಮ್ಮಾ ಎಂದು ಓಡಿದೆವು.

ಅಮ್ಮ ಅವಳ ಗಾಯವನ್ನು ನೋಡಿ ಮನೆಯ ಪಕ್ಕದಲ್ಲಿ ಪೊದೆಯಂತೆ ಬೆಳೆದಿದ್ದ ‘ಕಾಸ್ ಕೊಡ್ತೀಯೋ ತಲೆ ಒಡೀಲೋ’ ಎನ್ನುವ ಹೂ ಹೊಂದಿದ್ದ (ಇದೊಂದು ಆಟ ನಮಗೆ. ಆ ಹೂವನ್ನು ಅದರ ಕಾಂಡದೊಂದಿಗೆ ಕಿತ್ತ ನಮ್ಮ ಎಡಗೈ ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ ಹಿಡಿದು ಕಾಸ್ ಕೊಡ್ತೀಯೋ ತಲೆ ಒಡೀಲೋ ಅನ್ನೋದು. ಆಮೇಲೆ ನಮ್ಮ ಬಲಗೈ ಹೆಬ್ಬೆಟ್ಟು ಮತ್ತು ಮಧ್ಯದ ಬೆಟ್ಟನ್ನು ಸೇರಿಸಿ ಒಂದು ವೃತ್ತದಂತೆ ಮಾಡಿ ಆ ಹೂವಿನ ತಲೆಯನ್ನು ಚಿಮ್ಮಿಸುತ್ತಿದ್ದೆವು) ಗಿಡದ ಎಲೆಗಳನ್ನು ಬೇಗನೆ ಕಿತ್ತಿದರು. ಆ ಎಲೆಗಳನ್ನು ತಮ್ಮ ಎರಡು ಕೈಗಳ ನಡುವೆ ಚೆನ್ನಾಗಿ ಅದುಮಿದರು. ಹಸಿರು ರಸ ಹೊರಬಂದಿತು. ಆ ರಸವನ್ನು ನನ್ನ ತಂಗಿಯ ಆ ಹಣೆಯ ಗಾಯಕ್ಕೆ ಸುರಿದರು. ನಂತರ ಅದೇ ಸೊಪ್ಪನ್ನು ಆ ಗಾಯದ ಮೇಲೆ ಒತ್ತಿ ಇಟ್ಟು ಅದಕ್ಕೆ ಒಂದು ಬಟ್ಟೆಯ ಪಟ್ಟಿಯನ್ನು ಒಂದು ಬ್ಯಾಂಡೇಜಿನಂತೆ ಕಟ್ಟಿದರು.

ಕೆಲವು ದಿನಗಳ ನಂತರ ಎಲ್ಲಿ ಗಾಯವಾಗಿತ್ತು ಎಂದೇ ಮರೆತುಹೋಗುವಷ್ಟು ಪರಿಣಾಮಕಾರಿಯಾಗಿ ಆ ಗಿಡದ ರಸ ಕೆಲಸ ಮಾಡಿತ್ತು.

-0-0-0-

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102