ಯತಿ ಸ್ವಂತೀ -128


08-05-2018

ನನ್ನ ಅಮ್ಮ ಮತ್ತು ಮೂರನೇ ದೊಡ್ಡಮ್ಮ ಇಬ್ಬರನ್ನೂ ನಮ್ಮ ತಾತ 40ರ ದಶಕಗಳಲ್ಲಿ ಹಿಂದೀ ಸಿನಿಮಾಗಳಿಗೆ ಕರೆದೊಯ್ಯುತ್ತಿದ್ದರಂತೆ. ಪಂಕಜ್ ಮಲ್ಲಿಕ್... ಕೆ ಎಲ್ ಸೈಗಲ್... ನೂರ್ ಜಹಾನ್...ಸಿ ಎಚ್ ಆತ್ಮ.. ಸುರೈಯ್ಯ... ಮುಂತಾದವರ ಹಾಡುಗಳನ್ನು ಅಮ್ಮ ಗುನುಗುತ್ತಿದ್ದರು. ನನಗೆ ಬುದ್ಧಿ ತಿಳಿದಾಗಿನಿಂದ ನಮ್ಮ ಮನೆಯಲ್ಲಿ ಮರ್ಫಿ ರೇಡಿಯೋ ಹಚ್ಚುತ್ತಿದ್ದುದು ನೆನಪಿದೆ.
ನನಗೆ ಸುಮಾರು 1962ರಿಂದ ಹಿಂದೀ ಸಿನಿಮಾಗಳ ಹಾಡುಗಳನ್ನು ಕೇಳಿದ ನೆನಪಿದೆ. ಬೆಹನೋ ಔರ್ ಭಾಯಿಯೋ ಎಂದು ಅಮೀನ್ ಸಯಾನಿಯ ಖಣೀರೆಂಬ ಕಂಚಿನ ಕಂಠ ಬಹಳ ವರ್ಷಗಳ ಹಿಂದೆಯೇ ಕೇಳಿದ ಜ್ಞಾಪಕ. ಅದಲ್ಲದೇ ಅರವತ್ತರ ದಶಕದ ಕನ್ನಡ ಚಿತ್ರಗೀತೆಗಳು ಕೇಳುತ್ತಿದ್ದೆ. ನನ್ನ ತಂದೆ ಮತ್ತು ಅವರ ತಾಯಿ (ನನ್ನ ವೇಂಗಡಮ್ಮ ಅಜ್ಜಿ) ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುತ್ತಿದ್ದರು. ಅಮ್ಮನಿಗೆ ಅದೂ ಇಷ್ಟ. ಆ ಸಂಗೀತ ಕೇಳುವ ಅಭ್ಯಾಸ ಕೂಡ ಆಯಿತು.
ದಿನಾ ಬೆಳಗ್ಗೆ ಭೂಲೆ ಬಿಸರೇ ಗೀತ್... ಕೊನೆಯ ಹಾಡು ಸೈಗಲ್. ಆಮೇಲೆ ಆಪ್ ಹೀ ಕೆ ಗೀತ್... ಮೈಸೂರು ಆಕಾಶವಾಣಿಯ ಕನ್ನಡ ಚಿತ್ರ ಗೀತೆಗಳು ಇವನ್ನು ಕೇಳಿ ಬೆಳೆದೆ.
ನನ್ನ ಸೋದರತ್ತೆಯ ಪುರಂದರದಾಸರ ದೇವರನಾಮಗಳು ರೇಡಿಯೋದಲ್ಲಿ ಬಂದರೆ ಥ್ರಿಲ್ಲೋ ಥ್ರಿಲ್ಲು.
ವಿಶೇಷವಾಗಿ ಬಾರೆ ಗೋಪಿ ಬಾಲಕನಳುತಾನೆ ಹಾಡನ್ನು ದುರ್ಗಾ ರಾಗದಲ್ಲಿ ಅದ್ಭುತವಾಗಿ ಹಾಡುತ್ತಿದ್ದರು. ಈಗ  ದುರ್ಗಾ ರಾಗದಲ್ಲಿ ಯಾವ ಹಾಡು ಬಂದರೂ ಕಂಡು ಹಿಡಿಯಬಲ್ಲೆ. ಆಗ ಅದು ದುರ್ಗಾ ರಾಗ ಎಂದು ಮಾತ್ರ ಅರಿತಿದ್ದೆ.
ಬಹುಶಃ ಆ ಆಸಕ್ತಿಯೇ ಇಂದು ರಾಗಗಳ ಕಂಡುಹಿಡಿಯುವಿಕೆಗೆ ಸಹಾಯ ಮಾಡಿದೆ.
ಸುಮಾರು ಏಳು ಗಂಟೆಗೆ ಊಟ ಮಾಡಿ ಏಳೂಮುಕ್ಕಾಲು ಗಂಟೆಗೆ ಮೈಸೂರು ಆಕಾಶವಾಣಿಯ ಕನ್ನಡ ಚಿತ್ರ ಗೀತೆ ಕೇಳುತ್ತಾ ಮಲಗಿಬಿಡುತ್ತಿದ್ದೆ.
ರೈಲಿನಲ್ಲಿ ಬೆಂಗಳೂರಿಗೆ ಹೋಗುವುದಕ್ಕೆ ಬಹಳ ಖುಷಿ ನಮಗೆ.
ಶ್ರೀರಂಗಪಟ್ಟಣದಲ್ಲಿ ಸೇತುವೆ ಮೇಲೆ ಬಂದಾಗ ಕಾವೇರಿ ನದಿಗೆ ನಮ್ಮ ಅಮ್ಮ ಕಾಸು ಹಾಕಿಸಿ ನಮಸ್ಕಾರ ಮಾಡಲು ಹೇಳುತ್ತಿದ್ದರು. ದೂರದಲ್ಲಿರುವ ರಂಗನಾಥನ ಗೋಪುರಕ್ಕೆ ಪ್ರಣಾಮ ಮಾಡಿಸುತ್ತಿದ್ದರು.
ಮಂಡ್ಯ ದಾಟುತ್ತಿದ್ದ ಹಾಗೇ ನಮಗೆ ಸಂತಸ. ಮದ್ದೂರು ಸ್ಟೇಶನ್ನಿನ್ನಲ್ಲಿ ಇಡ್ಲಿ ವಡೆ ಬರುತ್ತಿತ್ತು. ನನಗೆ ನನ್ನ ತಂಗಿಗೆ ಅವುಗಳ ಜೊತೆ ತರಲ್ಪಡುತ್ತಿದ್ದ ಚಟ್ನಿ ಬಹಳ ಇಷ್ಟ. ಪಿಂಗಾಣಿ ಬಟ್ಟಲಲ್ಲಿ ಕೊಡಲ್ಪಡುತ್ತಿದ್ದ ಚಟ್ನಿಯನ್ನು ಸೊರ್ರೆಂದು ಕುಡಿಯುತ್ತಿದ್ದೆವು.
ಚನ್ನಪಟ್ಟಣ ಅಥವಾ ರಾಮನಗರದಲ್ಲಿ  ಖಾಲಿ ತಟ್ಟೆಗಳು ಬಟ್ಟಲುಗಳನ್ನು ಒಯ್ಯುತ್ತಿದ್ದರು.
ನಮ್ಮ ತಾಯಿಯ ಮೊದಲ ಅಕ್ಕನ ಪತಿ ನನ್ನ ನರಸಿಂಹಾಚಾರ್ ದೊಡ್ಡಪ್ಪ ಪ್ಲಾಟ್‌ಫಾರ್ಮ್ ಇನ್ಸ್‌ಪೆಕ್ಟರ್ ಆಗಿದ್ದರು. ಅವರ ಮನೆ ಸ್ಟೇಶನ್ ಎದುರಿಗೇ ಇತ್ತು. ಕಲ್ಲಿನಿಂದ ಕಟ್ಟಲ್ಪಟ್ಟ ಮನೆ.
ಸ್ಟೇಶನ್ ಒಡೆದು ಹೊಸದಾಗಿ ಕಟ್ಟಿದಾಗ ಬೇರೆ ಮನೆಗೆ ಶಿಫ್ಟ್ ಆದರು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102