ಯತಿ ಸ್ವಂತೀ -127
07-05-2018
ಒಂದು ಚಿಕ್ಕ ಗುಂಡಿ ತೋಡಿ ಅದರ ಮೇಲೆ ಔಟಾದವನ ಕೋಲನ್ನು ಅಡ್ಡಡ್ಡಲಾಗಿಟ್ಟು ನಮ್ಮ ಕೈಲಿನ ಕೋಲಿನಿಂದ ನೂಕಬೇಕು. ಆಮೇಲೆ ಕೈಲಿರೋ ಕೋಲಿನಿಂದ ಅದನ್ನು ತಳ್ಳುತ್ತಾ ಹೋಗಬೇಕು. ಚುಜೀಪ್ ಅನ್ನೋ ಶಬ್ದ ಹೇಳುತ್ತಿದ್ದ ನೆನಪು. ಅದಕ್ಕಿಂತ ಹೆಚ್ಚಿಗೆ ನೆನಪಿಲ್ಲ.
ನಮ್ಮ ಮನೆ ಮುಂದೆ ಇದ್ದ ಫೀಲ್ಡ್‌ನಲ್ಲಿ ಕೇವಲ ಒಂದು ಮರವಿತ್ತು. ಗುಲ್ ಮೊಹರ್ ಅಥವಾ ಮೇ ಫ್ಲವರ್ ಮರ. ಅದರ ಹೂವುಗಳನ್ನು ಕಿತ್ತು ಅದರಲ್ಲಿನ ಐದು ದಳಗಳಲ್ಲಿ ಒಂದು ಬಿಳಿ ಮಿಶ್ರಿತ ಕೆಂಪು ದಳ, ಉಳಿದವು ಕೆಂಪು ದಾಳಗಳು. ಬಿಳಿ ಕೆಂಪು ದಳ ತಿನ್ನುತ್ತಿದ್ದೆವೆಂದು ನೆನಪು. ತುಂಬೆ ಗಿಡ ಮನೆಯ ಮುಂದೆ ಇತ್ತು. ಅದರ ಹೂ ಕಿತ್ತು ಅದರ ಹಿಂದಿನ ಭಾಗವನ್ನು ಬಾಯಲ್ಲಿ ಇಟ್ಟುಕೊಂಡು ಗಾಳಿ ಎಳೆದುಕೊಂಡರೆ ಸಿಹಿಯಾಗಿರುತ್ತಿತ್ತು.
ಬೆಟ್ಟದ ನೆಲ್ಲಿಕಾಯಿ ಮರವಿದ್ದವರ ಮನೆಯಲ್ಲಿ ಕಾಯಿ ಪಡೆದು (ಕದ್ದು?) ತಿಂದು ನೀರು ಕುಡಿದರೆ ಬಾಯಿ ಸೀ ಸೀ ಆಗುತ್ತಿತ್ತು. ಕಿರುನೆಲ್ಲೀಕಾಯಿಗೆ ಉಪ್ಪು ಖಾರ ಹಾಕಿಕೊಂಡು ತಿಂದರೆ ಆಹಾ... ಏನು ರುಚಿ...
ಮಾವು ಸಪೋಟ ಹಲಸು ಹೀಗೆ ಎಲ್ಲ ಮರಗಳೂ ಕ್ವಾರ್ಟರ್ಸ್‌ನ ಯಾವುದಾದರೊಂದು ಮನೆಯಲ್ಲಿ ಇರುತ್ತಿದ್ದವು.
ಅಮ್ಮ ನಮಗೆ ಎಲ್ಲ ತರಕಾರಿಗಳನ್ನೂ ತಿನ್ನುವ ಅಭ್ಯಾಸ ಮಾಡಿಸಿದ್ದರು. ಈಗಿನ ಮಕ್ಕಳು ಇದಿಷ್ಟ ಇಲ್ಲ ಅದು ಬೇಡ ಎಂದು ಮೂಗೆಳೆಯುವುದನ್ನು ಕಂಡಾಗ ಆಶ್ಚರ್ಯ ಆಗುತ್ತದೆ. ನಾಟ್ ಎನಫ್ ಪರ್ಸುಯೇಶನ್... ನಾವೇನು ಕೊಟ್ಟೊಡನೆ ಒಪ್ಪುತ್ತಿರಲಿಲ್ಲ. ಚತುರೋಪಾಯ ಬಳಸಿ ತಿನ್ನಿಸುತ್ತಿದ್ದರು (ಸಾಮ ದಾನ ಭೇದ ದಂಡ!) ಈಗಿನವರಿಗೆ ಪುರುಸೊತ್ತು ಇಲ್ಲ. ಜೀವನದಲ್ಲಿ ಮಕ್ಕಳು ಮಾಡೋದು ಮುಖ್ಯ ಅಲ್ಲ. ಅವರನ್ನು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯಕರವಾಗಿರುವಂತೆ ಬೆಳೆಸಬೇಕು.
ಮಕ್ಕಳು ಹಠ ಮಾಡಿದಾಗ ಅವು ಕೇಳಿದ ಜಂಕ್ ಫುಡ್ ತಿನ್ನಲು ಬಿಟ್ಟರೆ ಅನೇಕ ರೀತಿಯ ನಷ್ಟವೇ ಹೆಚ್ಚು.
ನಮ್ಮ ಮನೆಯಲ್ಲಿ ಕೊಳಂಬು ಮಾಡುತ್ತಿದ್ದರು. ಅಂದರೆ ಹುಳಿ ಅಥವಾ ಸಾಂಬಾರು. ಪಲ್ಯ ಗೊಜ್ಜು ಇವೂ ಇರುತ್ತಿದ್ದವು ಪರ್ಯಾಯವಾಗಿ.
ಮಜ್ಜಿಗೆ ಇಲ್ಲದ ದಿನವಿಲ್ಲ. ಉಪ್ಪಿನ ಕಾಯಿಯನ್ನು ಜಾಡಿಯಲ್ಲಿ ಹಾಕಿಡುತ್ತಿದ್ದರು.
ಹತ್ತನೇ ತರಗತಿಗೆ ಬರುವ ವರೆಗೂ ಕಾಫಿ ಕೊಡಲಿಲ್ಲ ಅಮ್ಮ. ಲೋಟದಲ್ಲಿ ದಿನಕ್ಕೆ ಎರಡು ಬಾರಿ ಹಾಲು ಕೊಡುತ್ತಿದ್ದರು.
Comments
Post a Comment