ಯತಿ ಸ್ವಂತೀ -126


06-05-2018

ರವೀಂದ್ರ, ಶ್ರೀಕಂಠ, ಕಣ್ಣ, ನಾನು ಸಹಪಾಠಿಗಳು. ನಮ್ಮ ತಂಗಿಯರು ಎಲ್ಲರೂ ಸಹಪಾಠಿಗಳು. ಸಂಜೆ ಆಡೋಕ್ಕೆ ಎಲ್ಲಾ ಸೇರುತ್ತಿದ್ದೆವು.
ಐಸ್‌ಪೈಸ್ (ಇದರ ನಿಜವಾದ ಹೆಸರು ಐ ಸ್ಪೈ ಯು ಅಂತ ಗೊತ್ತಾಗಿದ್ದು ಬಹಳ ತಡವಾಗಿ!) ಆಟ. ಗೋಡೆ ಕಡೆ ಮುಖ ಮಾಡಿ ಒಬ್ಬರು ನೂರು ಎಣಿಸೋದು. ಉಳಿದೋರು ಅವಿತುಕೊಳ್ಳೋದು. ಎಣಿಸಿದೋರು ಉಳಿದವರಲ್ಲಿ ಒಬ್ಬರನ್ನು ಕಂಡು ಹಿಡಿದು ಓಡಿ ಮುಖ ಮುಚ್ಚಿ ನೂರು ಎಣಿಸಿದ್ದ ಗೋಡೆಯ ಮೇಲೆ ಹೋಗಿ... '... ಐಸ್‌ಪೈಸ್' ಎಂದರಚಬೇಕು. ಎಲ್ಲ ಹೊರಗೆ ಬರೋದು. ಸಿಕ್ಕಾಕೊಂಡೋರು ಎಣಿಸೋದು. ಒಂದು ವೇಳೆ ಬೇರೆ ಯಾರಾದರೂ ಬಂದು ಆ ಗೋಡೆ ಮುಟ್ಟಿ '... ಎಣಿಸೋನು ಐಸ್‌ಪೈಸ್' ಅಂದುಬಿಟ್ಟರೆ ಅವನೇ ಮತ್ತೆ ಔಟ್. ಪುನರಾಯಾನ್...
ಗುಲ್ಟೋರಿಯಾ. ಇದರಲ್ಲಿ ಒಬ್ಬರು ನೂರು ಪುಟ್ಟ ಕಲ್ಲುಗಳನ್ನೋ, ಗಂಟೆ ಗಿಡದ ನೂರು ಎಲೆಗಳನ್ನು ಕಿತ್ತೋ ಸಂಗ್ರಹಿಸಿಕೊಳ್ಳಬೇಕು. ಉಳಿದವರು ಫುಲ್ ಸ್ಕ್ಯಾಟರ್. ನಮ್ಮ ಮನೆಯ ಎದುರು ಫೀಲ್ಡ್. ಅದರಾಚೆ ವ್ಯಾಗನ್ನುಗಳು ಕಂಬಿಯಿಂದ ಹೊರಗೆ ಬಿದ್ದಿರುತ್ತಿದ್ದವು. ಅವನ್ನು ಕಂಡೆಮ್ಡ್ ವ್ಯಾಗನ್ ಅನ್ನೋರು. ವರ್ಷಕ್ಕೊಮ್ಮೆ ಅವನ್ನು ಹರಾಜು ಹಾಕುತ್ತಿದ್ದರು. ಅವನ್ನು ಲಾರಿ ಬಾಡಿ ಬಿಲ್ಡರುಗಳು ಕೊಳ್ಳುತ್ತಿದ್ದರು.
ಪ್ರಸ್ತುತ ಅವು ನಮ್ಮ ಬೈತಿಟ್ಟುಕೊಳ್ಳುವ ಜಾಗಗಳು. ಔಟಾದೋನು ನಮ್ಮನ್ನು ಹುಡುಕುತ್ತಾ ಬಂದು ಯಾರಾದರೊಬ್ಬರನ್ನು ಕಂಡು '... ಗುಲ್ಟೋರಿಯಾ' ಎಂದು ಕಿರುಚಿಕೊಂಡಾಗ ಉಳಿದೋರು ಹೊರಗೆ ಬರೋದು. ಮುಂದಿನ ಹುಡುಗ/ಹುಡುಗಿ ಮತ್ತೆ ಕಲ್ಲು ಯಾ ಎಲೆ ಎಣಿಕೆ.
ಜೂಟ್... ಮತ್ತೊಂದು ಆಟ. ಎಲ್ಲ ಓಡೋದು. ಒಬ್ಬ ಉಳಿದವರನ್ನು ಅಟ್ಟಿಸಿಕೊಂಡು ಬಂದು ಒಬ್ಬರನ್ನು ಮುಟ್ಟೋದು.
ಶರಾಪ್ - ಇದರಲ್ಲಿ ಇನ್ನೇನು ಮುಟ್ಟಲು ಬಂದಾಗ ಶರಾಪ್ ಎಂದು ಕೂಗಿ ತಮ್ಮ ತಲೆಮುಟ್ಟಿಕೊಂಡು ಕೂತರೆ ಅವರನ್ನು ಔಟ್ ಮಾಡೋ ಹಾಗಿಲ್ಲ...
ಕೆಲವು ಸಲ ಕುಂಟೆಬಿಲ್ಲೆ ಹುಡುಗಿಯರ ಜೊತೆ ಆಡುತ್ತಿದ್ದ ನೆನಪು. ಕಣ್ಣು ಮುಚ್ಚಿ ತಲೆ ಎತ್ತಿ ಗೆರೆಗಳ ಮೇಲೆ ಪಾದಗಳನ್ನು ಇಡದೇ ಅಮಾಟೇ ಅಮಾಟೇ (ಆ್ಯಮ್ ಐ ರೈಟ್ ಅಂತ ಆಗ ತಿಳಿಯದು!) ಎಂದು ಕೇಳುವುದು...
ಝಿಂಕ್ ಶೀಟ್ ಚೂರನ್ನೋ, ಪಿಂಗಾಣಿಯ ಚಪ್ಪಟೆ ಚೂರುಗಳನ್ನೋ ಏಳೋ ಎಂಟೋ ಒಂದರ ಮೇಲೊಂದು ಜೋಡಿಸೋದು. ಒಂದು ರಬ್ಬರ್ ಚೆಂಡು. ಎರಡು ಟೀಂ. ಲಗೋರಿ!!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102