ಯತಿ ಸ್ವಂತೀ -125

 

05-05-2018

ನಾಗರತ್ನಮ್ಮ ಮಿಸ್ ಒಬ್ಬರ ನೆನಪಿದೆ.  ನಾನು ಮಿಡ್ಲ್ ಸ್ಕೂಲಿಗೆ ಹೋದಾಗ ಅವರೂ ಅಲ್ಲಿಗೆ ವರ್ಗವಾಗಿ ಬಂದರು.
ಮನೆಯಲ್ಲಿ ನಮ್ಮಿಬ್ಬರ ಕಾಟ ತಡೆಯಲಾಗದೇ ಅಮ್ಮ ನಮ್ಮನ್ನು ನಮ್ಮ ಮನೆಯ ಹಿಂದಿನ ಮೂರನೇ ಅಥವಾ ನಾಲ್ಕನೇ ರಸ್ತೆಯಲ್ಲಿದ್ದ ಶ್ರೀ ನಾಗಾನಂದ ಅವರ ಮನೆಗೆ ಬೆಳಗ್ಗೆ ಕಳಿಸಲಾರಂಭಿಸಿದರು.
ನಾಗಾನಂದ ಅವರು ಅನೇಕ ಶ್ಲೋಕ ಮತ್ತು ಭಜನೆಗಳನ್ನು ಹೇಳಿಕೊಟ್ಟರು. ಹಾಗೇ ಭಗವದ್ಗೀತೆ ಕೂಡ. ಅದಕ್ಕೇ ಅವರಿಗೆ ಗೀತೆ ಮಾಮಾ ಎನ್ನುತ್ತಿದ್ದೆವು. ಅವರ ಪತ್ನಿ ಮಣಿ ಮಾಮಿ.  ನಮ್ಮನ್ನೆಲ್ಲ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಮಗೆ ಬಹಳ ಸಲ ಅನೇಕ ರೀತಿಯ ಚರುಪು ಕೊಟ್ಟಿದ್ದು ನೆನಪಿದೆ.
ನಮ್ಮ ಫೇವರಿಟ್ ಕಡಲೇಹಿಟ್ಟು. ಅದಕ್ಕೆ ಸಕ್ಕರೆ ಹಾಕಿರುತ್ತಿದ್ದರು. ಅದನ್ನು ಬಾಯಿಗೆ ಹಾಕಿಕೊಂಡು ಜೋರಾಗಿ ಬೂಬಮ್ಮ ಎನ್ನುತ್ತಿದ್ದೆವು. ಭುಸ್ ಎಂದು ಹಿಟ್ಟಿನ 'ಹೊಗೆ' ಹೊರಗೆ ಹಾರುತ್ತಿತ್ತು. ಅದೊಂದು ವಿನೋದ ನಮಗೆ.
ಕೃಷ್ಣಾನಂತ ಮುಕುಂದ ಮುರಾರೇ... ರಾಧೇ ರಾಧೇ ರಾಧೆ ಗೋವಿಂದ... ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದ ಈ ಭಜನೆಗಳನ್ನು ನಮಗೆ ಕಲಿಸಿದರು ಗೀತೆ ಮಾಮಾ. ಬಹಳ ಸಲ ಬಾಯಿಪಾಠ ಮಾಡಿಸುತ್ತಿದ್ದರು.
ನಾವು ಸರಿಯಾಗಿ ಉಚ್ಚರಿಸದಿದ್ದರೆ ಟರ್ಕಿ ಟವೆಲ್ ಒಂದನ್ನು ಅದರ ಎರಡು ತುದಿ ಹಿಡಿದು ತಿರುಗಿಸಿ ತಿರುಗಿಸಿ ಎರಡೆಳೆಯ ಕೋಲು ಮಾಡಿಕೊಂಡು ಸರಿಯಾಗಿ ಹೇಳದಿದ್ದರೆ ಅಂಡಿನ ಮೇಲೆ ಅಥವಾ ಕಾಲಿನ ಮೇಲೆ ಒಂದು ಏಟು ಹಾಕುತ್ತಿದ್ದರು. ಆ ಟವೆಲ್ ಹೆಸರು ಈಗ 'ಬ್ಯಾಟ್ರಾಯ' ಆಗುತ್ತಿತ್ತು. 'ಬ್ಯಾಟ್ರಾಯ ಸಾಮಿದೇವುಡಾ ಓ ನಲ್ಲಿ ವಾಡಾ ಬ್ಯಾಟ್ರಾಯ ಸಾಮಿದೇವುಡಾ' ಎಂದು ಹಾಡುತ್ತಿದ್ದರು ಗೀತೆ ಮಾಮಾ ಕೈಯಲ್ಲಿ ಬ್ಯಾಟ್ರಾಯ ಹಿಡಿದು!
ಅವರ ನಾಲ್ಕು ಮಕ್ಕಳ ಹೆಸರು ನೆನಪಿದೆ. ಶಾಂತಿ. ಪುಂಡರೀಕ, ಬಾಲಾಜಿ, ಮೀರಾ.
ನಮ್ಮ ತಲೆಗಳನ್ನು ಪಾಪ... ಅವರೂ ಸಹಿಸಬೇಕಿತ್ತು!
ರವೀಂದ್ರ ಗೀತೆ ಮಾಮನ ಪಕ್ಕದ ಮನೆಯಲ್ಲಿದ್ದ. ಹತ್ತನೇ ತರಗತಿಯ ವರೆಗೂ ಒಟ್ಟಿಗೇ ಓದಿದೆವು.
ಆಮೇಲೆ ನಾನು ಪಿಯುಸಿ ಓದಲು ಬೆಂಗಳೂರು ಜಯನಗರ ನ್ಯಾಷನಲ್ ಕಾಲೇಜಿಗೆ ಬಂದೆ. ಅವನು ಕಾಮರ್ಸ್ ಮೈಸೂರಿನಲ್ಲಿ ಓದಿದ.
ಅಂದರೆ 1972ಕ್ಕೆ ನಾನು ಅವನನ್ನು ನೋಡಿದ ನಂತರ ಮತ್ತೆ 2016ರಲ್ಲಿ ಧರ್ಮಶ್ರೀ ಅಯ್ಯಂಗಾರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಭೇಟಿ ಆದೆ. ಅಂದರೆ 44 ವರ್ಷಗಳ ನಂತರ..!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102