ಯತಿ ಸ್ವಂತೀ -124
04-05-2018
ಸುಮಾರು ನಾಲ್ಕು ವರ್ಷಗಳ ವರೆಗಿನ ಬಾಲ್ಯದ ನೆನಪಿಲ್ಲ. ಪುಟ್ಟ ತಂಗಿ ಇದ್ದಾಳೆಂಬ ತಿಳಿವಳಿಕೆ ನಾಲ್ಕು ವರ್ಷಗಳಿಗೆ ಬಂದಿರಬಹುದು.
ಐದು ವರ್ಷಗಳು ಆಗುವ ಮೊದಲೇ ಅಂದರೆ ಐದಾಗಲು ಎರಡೂವರೆ ತಿಂಗಳುಗಳಿರುವಾಗಲೇ ಗೌರ್ನಮೆಂಟ್ ಮಿಕ್ಸೆಡ್ ಪ್ರೈಮರಿ ಸ್ಕೂಲ್‌ಗೆ ಸೇರಿಸಿದರು.
ಕೆಲವು ಸಹಪಾಠಿಗಳ ಹೆಸರುಗಳ ನೆನಪಿವೆ. ಮಕ್‌ಬೂಲ್ - ಇವನು ನಮ್ಮ ಎದುರು ಮನೆ ಹುಡುಗ. ಮಹಾ ತರಲೆ.
ಬಾಬ್ಬಿ ಸ್ಟೀವನ್‌ಸನ್ - ಒಂಟಿಕೊಪ್ಪಲ್ ರೈಲ್ವೆ ಕ್ವಾರ್ಟರ್ಸ್‌ನಿಂದ ಬರುತ್ತಿದ್ದ. ನನ್ನ ಜೊತೆ ಮಿಡ್ಲ್ ಸ್ಕೂಲಿಗೂ ಬಂದ.
ಜೈಪಾಲ್, ರವಿ, ಶ್ರೀನಿವಾಸ್ ರಂಗಾಚಾರ್, ಕೃಷ್ಣಮೂರ್ತಿ (ಕೊನೆಯವರಿಬ್ಬರೂ ಅನ್ಯಾಯವಾಗಿ ಬೇಗನೆ ತೀರಿಕೊಂಡರು)
ಮನೋಹರ ಮತ್ತು ಮನೋರಮ ಎಂಬ ನಾಲ್ಕನೇ ಕ್ಲಾಸ್ ವಿದ್ಯಾರ್ಥಿಗಳ ಬಗ್ಗೆ ಏನೇನೋ ಮಾತಾಡಿದ ನೆನಪು. ಬಹುಶಃ ನಾನು ಮೂರರಲ್ಲಿ ಇದ್ದೆನಾ? ತಿಳಿಯದು. ಎಂ ಎಂ ಯೂ ಎಂ ಎನ್ನುತ್ತಿದ್ದೆವು ನಾನು ಮಕ್‌ಬೂಲ್. ನಾನು ಮೂರು ದಿನ ಊಟ ಮಾಡಿಲ್ಲ ಕಣೇ ಎಂದಿದ್ದ ಮನೋಹರ. ಅದಕ್ಕೆ ಕೋಡ್ ವರ್ಡ್ ಮನೋಹರ ಮೂರ್ದಿನ ಊಟ ಮಾಡಿಲ್ಲ ಎನ್ನುವುದಕ್ಕೆ ಎಂ ಎಂ ಯೂ ಎಂ ಕೋಡ್ ವರ್ಡ್. ಇನ್ನೂ ಒಂದಿದೆ... ಬೇಡ ಬಿಡಿ... ಇದು ಮೂರನೇ ಕ್ಲಾಸ್ ಹುಡುಗನ ಮಾತಾ ಅನ್ನುವಿರಿ!
ಯಾವ ಕ್ಲಾಸೋ ನೆನಪಿಲ್ಲ. ಪಿಕ್ನಿಕ್ ಪಾಠ ಇತ್ತು. ಮನೆಯಿಂದ ದೋಸೆ ತಂದೆ. ಬಹಳ ಬೇಗ ದಿವಂಗತ ಆಗಿರುವ ಕೃಷ್ಣಮೂರ್ತಿ ಹದ್ದು. ನನ್ನ ದೋಸೆ ಎಗರಿಸಿಕೊಂಡು ಹೋದ.
ನಮ್ಮ ಮೇಡಂ ಜೊತೆಗೆ ಒಬ್ಬ ಹುಡುಗ ಬರುತ್ತಿದ್ದ. ಚಂದ್ರಶೇಖರ್. ಮಹಾ ಚೇಷ್ಟೆ ಅವನು. ಎಡಗೈಯಲ್ಲಿ ಬರೆಯುತ್ತಿದ್ದ. ಅವನನ್ನು ಲೊಡ್ಡೆ ಅನ್ನುತ್ತಿದ್ದ ನೆನಪು. ನಾನು 1989ರಲ್ಲಿ ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯ ಡಿಸೈನ್ ಡಿಪಾರ್ಟ್‌ಮೆಂಟ್‌ನಲ್ಲಿದ್ದಾಗ ನನ್ನ ಸಹೋದ್ಯೋಗಿ ಆದ.
ನರೇಂದ್ರ ಎನ್ನುವ ಮತ್ತೊಬ್ಬ ತುಂಟ. ಅಬ್ಬಾ.. ಬಲು ತುಂಟ. ಎಂಟನೇ ಕ್ಲಾಸಿಗೆ ರಾಮಕೃಷ್ಣ ಆಶ್ರಮದ ಹಾಸ್ಟೆಲಿಗೆ ಹೋದ. ಎಷ್ಟು ಸಾಧು ಆಗಿದ್ದ ಆಗ ಎಂದರೆ ಅವನು ಬದಲಾದ ಎಂದು ನಂಬಿದ್ದೆವು. ಪಿಯುಸಿಗೆ ಬಂದಾಗ ಮಹಾಜನ ಹೈಸ್ಕೂಲಿನಲ್ಲಿ ಮತ್ತೆ ಚೇಷ್ಟೆ.
ನಾಲ್ಕನೆಯ ತರಗತಿಯ ಒಂದು ಘಟನೆ ನೆನಪಿದೆ.
ನಮ್ಮ ಶಾಲೆಯ ಛಾವಣಿ ಹೆಂಚಿನದು. ಹೆಂಚಿನ ಸಂದಿನಿಂದ ಒಳತೂರುತ್ತಿದ್ದ ಬೆಳಕಿನ ಕೋಲು ನೆಲದ ಮೇಲೆ ಒಂದು ಮೊಟ್ಟೆಯಾಕಾರದಲ್ಲಿ ಇರುತ್ತಿತ್ತು. ಅದನ್ನು ಕೈಯಲ್ಲಿ ಹಿಡಿಯಲು ಪ್ರಯತ್ನಿಸುವುದು ಒಂದು ಆಟವಾಗಿತ್ತು. ಒಂದೂವರೆ ಗಂಟೆಗೆ ನಮ್ಮ ಊಟದ ಬೆಲ್. ಇಂಕ್ ಪೆನ್ನಿನಲ್ಲಿ ಒಂದೂವರೆ ಗಂಟೆಗೆ ಬಿಸಿಲಿನ ಮೊಟ್ಟೆ ಬೀಳುವೆಡೆ ಗುರುತು ಮಾಡಿದ್ದೆವು.
ಒಂದು ದಿನ ಹೆಡ್ ಮೇಡಂ ತರಗತಿ ತಗೊಂಡಿದ್ದಾಗ ನೆಲದ ಮೇಲೆ ಕೂತಿದ್ದ ನಾವೆಲ್ಲರೂ ದಢಕ್ಕನೆ ಎದ್ದು ನಿಂತೆವು.
ಏನ್ರೋ ಆಯಿತು ಎಂದು ಕೇಳಿದರು ಹೆಡ್ ಮೇಡಂ. ಊಟದ ಟೈಮು ಎಂದೆವು. ಬಿಸಿಲ ಮೊಟ್ಟೆಯ ಬಗ್ಗೆ ವಿವರಿಸಿದಾಗ ನಕ್ಕು ಥೂ ಮುಂಡೇವಾ ಎಷ್ಟು ಜಾಣರೋ ನೀವು ಎಂದು ನಕ್ಕು ಪ್ಯೂನ್ ಕರೆಸಿ ಬೆಲ್ ಹೊಡೆಸಿದರು!
Comments
Post a Comment